ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬಾಳಿಗೆ ಬೆಳಕು-ಅಸೂಟಿ

KannadaprabhaNewsNetwork |  
Published : Jul 11, 2025, 11:48 PM IST
ಪೊಟೋ-ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಜನತಾದರ್ಶಣ ಸಭೆಯನ್ನು ಉದ್ಘಾಟಿಸಿದ ಜಿಲ್ಲಾಧ್ಯಯಕ್ಷ ಬಿ.ಬಿ.ಅಸೂಟಿ ಅವರು ಚಾಲನೆ ನೀಡುತ್ತಿರುವುದು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬಾಳಿಗೆ ಬೆಳಕು ನೀಡುವ ಯೋಜನೆಗಳಾಗಿವೆ. ಗ್ಯಾರಂಟಿ ಯೋಜನೆಗಳಿಂದ ಬಡತನ ದೂರವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ಲಕ್ಷ್ಮೇಶ್ವರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬಾಳಿಗೆ ಬೆಳಕು ನೀಡುವ ಯೋಜನೆಗಳಾಗಿವೆ. ಗ್ಯಾರಂಟಿ ಯೋಜನೆಗಳಿಂದ ಬಡತನ ದೂರವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಪಂಚ ಗ್ಯಾರಂಟಿ ಯೋಜನೆಯಲ್ಲಿನ ಕುಂದು ಕೊರತೆ ನಿವಾರಣಾ ಸಭೆಯು ಶಕ್ತಿ ಯೋಜನೆ ಅಡಿಯಲ್ಲಿ ಗ್ಯಾರಂಟಿ ಸಮಿತಿಯ ಸದಸ್ಯ ಹಾಗೂ ಡಿಪೋ ಮ್ಯಾನೇಜರ್ ನಡುವೆ ನಡೆದ ಮಾತುಕತೆಯಲ್ಲಿ ಸಾರಿಗೆ ನೌಕರರಿಗೆ ಡಿಪೋ ಮ್ಯಾನೇಜರ್ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ಯಾರಂಟಿ ಸಮಿತಿಯ ಸದಸ್ಯ ಆರೋಪಿಸಿದ್ದರಿಂದ ಸಿಟ್ಟಿಗೆದ್ದ ಡಿಪೋ ಮ್ಯಾನೇಜರ್ ಸುಖಾ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದರಿಂದ ಸದಸ್ಯ ಹಾಗೂ ಡಿಪೋ ಮ್ಯಾನೇಜರ್ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆದು ಸಭೆಯು ಗೊಂದಲ ಗೂಡಾಗಿ ಪರಿಣಿಮಿಸಿದ್ದು ಕಂಡು ಬಂದಿತು. ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಮ್ಯಾನೇಜರ್ ಅವರು ಆವಾಜ್ ಹಾಕಿತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಬಿ.ಬಿ.ಅಸೂಟಿ ಎಚ್ಚರಿಸಿದರು.

ನಂತರ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷ ಬಿ.ಬಿ. ಅಸೂಟಿ ಹಾಗೂ ತಾಲೂಕು ಅಧ್ಯಕ್ಷ ನಾಗರಾಜ ಮಡಿವಾಳರ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು ಕಂಡು ಬಂದಿತು.

ಈ ವೇಳೆ ಬಿ.ಬಿ. ಅಸೂಟಿ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದಲ್ಲಿನ ಶೌಚಾಲಯ ಸರಿ ಇಲ್ಲ. ಅದನ್ನು ಕೆಡವಿ ಹೊಸ ಶೌಚಾಲಯ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ಬಸ್ ಬಿಡುವಂತೆ ಡಿಪೋ ಮ್ಯಾನೇಜರ್ ಅವರಿಗೆ ತಿಳಿಸಲಾಯಿತು. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ತಾಲೂಕಿನಲ್ಲಿ 26942 ಪಡಿತರ ಕಾರ್ಡದಾರರು ಇದ್ದು, ಜೂನ್ ತಿಂಗಳಲ್ಲಿ ಸರಿ ಸುಮಾರು 6203.40 ಕ್ವಿಂಟಾಲ್ ಅಕ್ಕಿ ಹಾಗೂ 2803.04 ಕ್ವಿಂಟಾಲ್ ಜೋಳ ನೀಡಲಾಗಿದೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವ ಜನರು ಮಾಹಿತಿ ನೀಡುವ ಕಾರ್ಯ ಮಾಡಬೇಕು. ಕಳೆದ ತಿಂಗಳು 1880 ಪಡಿತರ ಕಾರ್ಡದಾರರಿಗೆ ಪಡಿತರ ಹಂಚಿಕೆ ಮಾಡಿಲ್ಲ. ಮನೆಯ ಯಜಮಾನಿ ತೀರಿಕೊಂಡ ನಂತರ ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರು ಬದಲಾವಣೆಯಾಗಿದ್ದರು ಪಡಿತರ ನೀಡುತ್ತಿಲ್ಲ ಎಂಬ ಆರೋಪವಿದೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಪಂಚ ಗ್ಯಾರಂಟಿ ಯೋಜನೆಯ ಬ್ಯಾನರ್ ಹಾಕಬೇಕು. ಕಾಳ‌ಸಂತೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಮಾರಾಟ ಮಾಡುವವರು ಮೇಲೆ ಕ್ರಮ ಕೈಗೊಂಡಿಲ್ಲ. ನೋಟಿಸ್ ಬೋರ್ಡ್ ಮೇಲೆ ಪಡಿತರ ಅಕ್ಕಿ ಮಾರಾಟ ಮಾಡುವುದು ಅಪರಾಧವೆಂದು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಯುವ ನಿಧಿ ಯೋಜನೆ ಅಡಿಯಲ್ಲಿ 493 ಅಭ್ಯರ್ಥಿಗಳು ನೋಂದಣಿಯ ಮಾಡಿಕೊಂಡಿದ್ದಾರೆ. 405 ಅಭ್ಯರ್ಥಿಗಳಿಗೆ 93.10500 ಯುವ ನಿಧಿ ಹಣ ನೀಡಲಾಗಿದೆ. 640 ಜನ ವಿದ್ಯಾರ್ಥಿಗಳು ಅರ್ಜಿ ಹಾಕಿಲ್ಲ, ಅಧಿಕಾರಿಗಳು ಕ್ರಮ ಕೈಗೊಳ್ಳುವ ಮೂಲಕ ಯುವಕರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 26371 ಮನೆಗಳು ನೋಂದಣಿಯಾಗಿವೆ. ಶೇ. 98.62 ಸಾಧನೆಯಾಗಿದೆ. 171 ಗೃಹ ಜ್ಯೋತಿ ಯೋಜನೆ ನಿರಾಕರಿಸಿದ್ದಾರೆ ಎಂದು ಹೆಸ್ಕಾಂ ಎಇಇ ಆಂಜನೆಯಪ್ಪ ಸಭೆಗೆ ತಿಳಿಸಿದರು.

ಗೃಹ ಲಕ್ಷ್ಮೀ ಯೋಜನೆಯ ಕುರಿತು ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ ಮಾತನಾಡಿ ಸ್ತ್ರೀ ಶಕ್ತಿ ಯೋಜನೆ ಅಡಿಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಹಣ ಮಹಿಳೆಯರ ಖಾತೆಗೆ ಜಮೆಯಾಗಿದೆ.

ಶೇ.97.20 ಪ್ರಗತಿ ಸಾಧಿಸಲು ಸಾಧ್ಯವಾಗಿದೆ. 160 ಮರಣ, ಆದಾಯ ತೆರಿಗೆ ಹಾಗೂ ಜಿಎಸ್ಟಿ 496 ಜನರಿಗೆ ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ದೀಪಕ ಲಮಾಣಿ, ಶಿಗ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಮಣ್ಣ ಲಮಾಣಿ, ಗೀತಾ ಬೀರಣ್ಣವರ, ಪಂಚ ಗ್ಯಾರಂಟಿ ಜಿಲ್ಲಾಧಿಕಾರಿ ಡಿ. ದೇವರಾಜ, ತಾಪಂ ಇಓ ಕೃಷ್ಣಪ್ಪ ಧರ್ಮರ, ತಿಪ್ಪಣ್ಣ ಸಂಶಿ, ಶಿವರಾಜಗೌಡ ಪಾಟೀಲ, ಪ್ರಕಾಶ ಹುಲಕೋಟಿ ಸೇರಿದಂತೆ ಅನೇಕರು ಇದ್ದರು.

ಸುಮಾರು 500ಕ್ಕೂ ಹೆಚ್ಚು ಜನರು ತಮ್ಮ ಅಹವಾಲುಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ಭರವಸೆಯಿಂದ ಗ್ಯಾರಂಟಿ ಜನತಾದರ್ಶನಕ್ಕೆ ಆಗಮಿಸಿದ್ದು ಕಂಡು ಬಂದಿತು.

PREV