ಲೋಕಾಯುಕ್ತರಿಂದ ಶಿಕ್ಷಣ ಇಲಾಖೆ ವಿರುದ್ಧ ದೂರು

KannadaprabhaNewsNetwork |  
Published : Jul 11, 2025, 11:48 PM IST
11ಡಿಡಬ್ಲೂಡಿ1ಲೋಕಾಯುಕ್ತ ಸ್ವಯಂ ಪ್ರೇರಣೆಯ ದೂರು ದಾಖಲು ಪ್ರತಿ | Kannada Prabha

ಸಾರಾಂಶ

ಸುತ್ತಲಿನ ಗ್ರಾಮಗಳ ಬಡ ಮಕ್ಕಳಿಗೆ ದೇವರ ಹುಬ್ಬಳ್ಳಿ ಸರ್ಕಾರಿ ಪ್ರೌಢ ಶಾಲೆಯೇ ಶಿಕ್ಷಣಕ್ಕೆ ಆಸರೆಯಾಗಿದ್ದು, ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿದೆ

ಧಾರವಾಡ:ದೇವರ ಹುಬ್ಬಳ್ಳಿ ಶಾಲೆಗೆ ಶಿಕ್ಷಣ ಇಲಾಖೆ ಕರುಣೆ ತೋರಲಿ " ಶೀರ್ಷಿಕೆ ಅಡಿ ಕನ್ನಡಪ್ರಭ ಕಳೆದ ಜೂ. 5ರಂದು ಪ್ರಕಟಿಸಿದ ವಿಶೇಷ ವರದಿಗೆ ಸ್ಪಂದಿಸಿದ ಕರ್ನಾಟಕ ಲೋಕಾಯುಕ್ತರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡು ಶಾಲಾ ಶಿಕ್ಷಣ ಇಲಾಖೆಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಸುತ್ತಲಿನ ಗ್ರಾಮಗಳ ಬಡ ಮಕ್ಕಳಿಗೆ ದೇವರ ಹುಬ್ಬಳ್ಳಿ ಸರ್ಕಾರಿ ಪ್ರೌಢ ಶಾಲೆಯೇ ಶಿಕ್ಷಣಕ್ಕೆ ಆಸರೆಯಾಗಿದ್ದು, ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಾಕಷ್ಟಿದೆ. ಉಸ್ತುವಾರಿ ಸಚಿವ ಸಂತೋಷ ಲಾಡ್‌ ‍ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಈ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವು ಹೌದು. ಮುರುಕಲು ಡೆಸ್ಕ್‌, ಕುಡಿಯುವ ನೀರಿನ ಸಮಸ್ಯೆ, ಶಾಲಾ ಕೊಠಡಿಗಳ ಕೊರತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ಜೂ.5ರಂದು ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಇದನ್ನು ಆಧರಿಸಿ ಲೋಕಾಯುಕ್ತ ಪೊಲೀಸರು ಜೂ. 19ರಂದು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿದ್ದಾರೆ.

ಪ್ರತಿಯೊಬ್ಬ ನಾಗರಿಕ ಆರೋಗ್ಯ, ಶಿಕ್ಷಣ ಹಾಗೂ ಇತರೆ ಮೂಲಭೂತ ಸೌಕರ್ಯದ ಹಕ್ಕು ಹೊಂದಿದ್ದು, ಈ ಶಾಲೆಗೆ ಶಿಕ್ಷಣ ಇಲಾಖೆ ಏತಕ್ಕೆ ಸೌಕರ್ಯ ಒದಗಿಸಿಲ್ಲ ಎಂದು ಇಲಾಖೆಗೆ ಲೋಕಾಯುಕ್ತರು ನೋಟಿಸ್‌ ಜಾರಿ ಮಾಡಿ ಕಾರಣ ಸಹ ಕೇಳಿದ್ದಾರೆ. ಜತೆಗೆ ಇಲಾಖೆ ಶಾಲೆಗಳ ಸೌಕರ್ಯಗಳ ಬಗ್ಗೆ ಬೇಜವಾಬ್ದಾರಿ ವಹಿಸಿದ್ದು ಕೂಡಲೇ ಸಮಸ್ಯೆಗಳಿಗೆ ಪರಿಹಾರ ನೀಡಲು ಸೂಚನೆ ಸಹ ನೀಡಿದೆ.

ಲೋಕಾಯುಕ್ತ ನೋಟಿಸ್‌ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಅಲ್ಲಿರುವ ಸೌಕರ್ಯಗಳ ಕೊರತೆ ಪಟ್ಟಿ ಮಾಡಿಕೊಂಡಿದ್ದು, ಶೀಘ್ರ ಪರಿಹರಿಸುವ ಭರವಸೆ ನೀಡಿದ್ದಾರೆ.

ಆದರೆ, ಪತ್ರಿಕೆಯಲ್ಲಿ ಶಾಲೆಯ ಸೌಕರ್ಯಗಳ ಕೊರತೆ ಬಗ್ಗೆ ಪ್ರಕಟವಾಗಿರುವುದು ಶಾಲಾ ಮುಖ್ಯಸ್ಥರಿಗೆ ತೊಂದರೆ ತಂದಿದೆ. ಇಲಾಖೆಯು ಮುಖ್ಯ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಶಾಲೆಯಲ್ಲಿರುವ ಸಮಸ್ಯೆಗಳ ಬಗ್ಗೆ ಇಲಾಖೆಯ ಗಮನಕ್ಕೆ ಈಗಾಗಲೇ ಹಲವು ಬಾರಿ ಶಾಲೆಯ ಶಿಕ್ಷಕರು ತಂದರೂ ಕ್ರಮ ಕೈಗೊಳ್ಳದ ಇಲಾಖೆ ಹಿರಿಯ ಅಧಿಕಾರಿಗಳು, ಲೋಕಾಯುಕ್ತರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿ ನೋಟಿಸ್‌ ಜಾರಿ ಮಾಡಿದ ನಂತರ ಎಚ್ಚೆತ್ತು ಮುಖ್ಯ ಶಿಕ್ಷಕರನ್ನು ಹೊಣೆ ಮಾಡಿದ್ದು ತಪ್ಪು ಎಂದು ಶಾಲೆಯ ಎಸ್‌ಡಿಎಂಸಿ ಸದಸ್ಯರು ಇಲಾಖೆಯ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV