ನಗರದ ಐವರು ಮನೆ ಕಳ್ಳರ ಬಂಧನ

KannadaprabhaNewsNetwork |  
Published : Apr 25, 2026, 03:30 AM IST
ಬಂಧಿತ ಆರೋಪಿಗಳು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ನಗರದಲ್ಲಿ ಇತ್ತೀಚೆಗೆ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದಲ್ಲಿ ಇತ್ತೀಚೆಗೆ ನಡೆದ ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಅಮಾನನಗರ, ಉದಯನಗರ, ಮಾರುತಿ ನಗರ, ಶಾಹು ನಗರ ಹಾಗೂ ವೀರಭದ್ರ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಆರೋಪಿಗಳು ಮನೆಗಳ ಕೀಲಿಯನ್ನು ಮುರಿದು ಒಳನುಗ್ಗಿ, ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದರು. ಈ ಕುರಿತು ಬಂದ ದೂರುಗಳ ಆಧಾರದ ಮೇಲೆ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು.

ತನಿಖೆಯ ವೇಳೆ ಪೊಲೀಸರು ಆರೋಪಿಗಳ ಚಟುವಟಿಕೆಗಳನ್ನು ಪತ್ತೆಹಚ್ಚಿ, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಐವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ರಿಹಾನ್ ಮೈನುದ್ದೀನ್ ಪಠಾಣ್(18), ಮಲೀಕ್ ಖಲೀಲ್ ಹುಬ್ಬಳ್ಳಿ(26), ಅರಮಾನ ಅಕ್ಬರ್ ಶೇಖ್ (18), ಖಲೀಲ್ ಇಸ್ಮಾಯಿಲ್ ಹುಬ್ಬಳ್ಳಿ(57) ಹಾಗೂ ಶಾನವಾಜ್ ಸಿರಾಜುದ್ದೀನ್ ಪಠಾಣ್(23) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಸುಮಾರು ₹64.47 ಲಕ್ಷ ಮೌಲ್ಯದ 415.98 ಗ್ರಾಂ ಚಿನ್ನದ ಆಭರಣಗಳು ಹಾಗೂ ₹3.45 ಲಕ್ಷ ಮೌಲ್ಯದ 1329.75 ಗ್ರಾಂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ ₹67.93 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆ ಮತ್ತು ಬಂಧನ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಹಾಗೂ ಎಸಿಪಿ ಅವರ ಮಾರ್ಗದರ್ಶನದಲ್ಲಿ ಮಾರ್ಕೆಟ್ ಉಪವಿಭಾಗದ ಪೊಲೀಸರು ಕೈಗೊಂಡಿದ್ದರು. ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಐಗಳು ಹಾಗೂ ಇತರ ಸಿಬ್ಬಂದಿ ತಂಡ ಕಾರ್ಯಾಚರಣೆಯ ಮೂಲಕ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಆಯುಕ್ತ ಭೂಷಣ ಬೋರಸೆ ಪ್ರಶಂಸಿಸಿದ್ದಾರೆ. ನಗರದಲ್ಲಿ ಕಳ್ಳತನ ಪ್ರಕರಣಗಳಿಗೆ ತಡೆ ನೀಡುವ ನಿಟ್ಟಿನಲ್ಲಿ ಪೊಲೀಸರು ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಪೊಲೀಸ್‌ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂವ೯ಭಾವಿ ಸಭೆ
ವಿವಿಧೆಡೆ ಕಳ್ಳತನದ ಪ್ರಕರಣಗಳ ಆರೋಪಿತರ ಬಂಧನ