ಇ-ಸ್ವತ್ತು ತೊಡಕು ನಿವಾರಣೆಗೆ ಪಂಚ ಸದಸ್ಯರ ಸಮಿತಿ: ಖಂಡ್ರೆ

KannadaprabhaNewsNetwork |  
Published : Jul 18, 2026, 12:30 AM IST
ಈಶ್ವರ ಖಂಡ್ರೆ  | Kannada Prabha

ಸಾರಾಂಶ

ಗ್ರಾಮಸ್ಥರು ಇ-ಸ್ವತ್ತು ಪಡೆಯಲು ಪಂಚಾಯ್ತಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಮನೆಬಾಗಿಲಿಗೇ ಇ-ಸ್ವತ್ತು ನೀಡುವ ಸಂಬಂಧ ಇ-ಸ್ವತ್ತು ಪ್ರಕ್ರಿಯೆಯಲ್ಲಿನ ತೊಡಕುಗಳ ನಿವಾರಣೆಗೆ ಪಂಚ ಸದಸ್ಯರ ಸಮಿತಿ ರಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರಾಮಸ್ಥರು ಇ-ಸ್ವತ್ತು ಪಡೆಯಲು ಪಂಚಾಯ್ತಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಮನೆಬಾಗಿಲಿಗೇ ಇ-ಸ್ವತ್ತು ನೀಡುವ ಸಂಬಂಧ ಇ-ಸ್ವತ್ತು ಪ್ರಕ್ರಿಯೆಯಲ್ಲಿನ ತೊಡಕುಗಳ ನಿವಾರಣೆಗೆ ಪಂಚ ಸದಸ್ಯರ ಸಮಿತಿ ರಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿರುವ ಅವರು, ತಂತ್ರಾಂಶ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಸಾವಿರಾರು ಇ-ಸ್ವತ್ತು ಅರ್ಜಿಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಕಾರ್ಯದರ್ಶಿ ಡಿ.ರಂದೀಪ್ ಅಧ್ಯಕ್ಷತೆಯಲ್ಲಿ ಬೆಂಗಳೂರು, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ, 10 ದಿನಗಳ ಒಳಗಾಗಿ ನಿಯಮಗಳಿಗೆ ಯಾವ ಯಾವ ಬದಲಾವಣೆಗಳನ್ನು ಮಾಡಬಹುದು ಎಂಬ ಸ್ಪಷ್ಟ ವರದಿ ನೀಡಲು ಸೂಚಿಸಿದ್ದಾರೆ.

ದಾಖಲೆ ಇಲ್ಲದ ಗ್ರಾಮಠಾಣಾ ಆಸ್ತಿಗೂ ಇ-ಸ್ವತ್ತು:

ರಾಜ್ಯದ ಗ್ರಾಮಠಾಣಾ ಪ್ರದೇಶದಲ್ಲಿ ಹಲವು ದಶಕ ಹಾಗೂ ತಲೆಮಾರುಗಳಿಂದ ವಾಸಿಸುತ್ತಿರುವ ಬಹುತೇಕ ನಿವಾಸಿಗಳ ಬಳಿ ತಮ್ಮ ಸ್ವತ್ತಿನ ದಾಖಲಾತಿಗಳಿಲ್ಲದ ಕಾರಣದಿಂದ ಅವರಿಗೆ ಇ-ಸ್ವತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಬ್ಯಾಂಕ್ ಸಾಲ ದೊರೆಯುತ್ತಿಲ್ಲ, ಮನೆ ದುರಸ್ತಿ, ಪುನರ್ ನಿರ್ಮಾಣ, ಕಟ್ಟಡ ನಕ್ಷೆ ಪಡೆಯಲು, ಸ್ವತ್ತು ಮಾರಾಟ ಮಾಡಲೂ ಅವರಿಗೆ ಸಾಧ್ಯವಾಗುತ್ತಿಲ್ಲ ಈ ನಿಟ್ಟಿನಲ್ಲಿ ಮನೆ ಸಮೀಕ್ಷೆ ಮಾಡಿ ಸಮಸ್ಯೆ ಪರಿಹರಿಸಲೂ ಮಾರ್ಗೋಪಾಯ ಸೂಚಿಸುವಂತೆ ತಿಳಿಸಿದ್ದಾರೆ.

ಬಿ ಖಾತೆ ನೀಡಿಕೆಗೂ ಚಿಂತನೆ:

ಗ್ರಾಮಠಾಣಾ ವ್ಯಾಪ್ತಿ ಹೊರಗೆ ಭೂಪರಿವರ್ತಿತ ಮತ್ತು ಭೂಪರಿವರ್ತನೆ ಆಗದ ಕಂದಾಯ ಭೂಮಿಯಲ್ಲಿಯೂ ಬಡಾವಣೆ, ಕಟ್ಟಡಗಳು ತಲೆ ಎತ್ತಿದ್ದು, ಬಿ ಖರಾಬು ಮತ್ತು ಗೋಮಾಳದಂಥ ಸರ್ಕಾರಿ ಭೂಮಿಯನ್ನೂ ಸೇರಿಸಿಕೊಂಡು ಬಡಾವಣೆ ಮಾಡಿರುವ ನಿಟ್ಟಿನಲ್ಲಿ ನಮೂನೆ 11ಬಿ ನೀಡಲೂ ಸಾಧ್ಯವಾಗಿರುವುದಿಲ್ಲ. ಜೊತೆಗೆ ಮೂಲ ಸೌಕರ್ಯಗಳಾದ ರಸ್ತೆ, ನೀರು, ಚರಂಡಿ, ಬೀದಿ ದೀಪ ಇತ್ಯಾದಿ ಸೌಲಭ್ಯಗಳನ್ನು ಗ್ರಾಪಂಗಳು ಒದಗಿಸಿದ್ದರೂ ತೆರಿಗೆಯನ್ನೂ ಪಡೆಯಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮೇಲಿನ ಎಲ್ಲ ಸಮಸ್ಯೆ ನಿವಾರಿಸಿ, ಎಲ್ಲ ಗ್ರಾಮೀಣ ಸ್ವತ್ತುಗಳಿಗೂ ಸುಗಮವಾಗಿ ಇ-ಸ್ವತ್ತು ನೀಡುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಖಂಡ್ರೆ ಸೂಚಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್ ಪೂರ್ವಸಿದ್ಧತೆ
ಅನಧೀಕೃತ ಶಾಲೆಗೆ ನೋಟಿಸ್‌!