ಕ್ಷುಲ್ಲಕ ಕಾರಣಕ್ಕೆ ಸಿಟ್ಟಿಗೆದ್ದು ನೆರೆಮನೆಯ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದ ದಂಪತಿ ಸೇರಿದಂತೆ ನೇಪಾಳದ ಐವರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕ್ಷುಲ್ಲಕ ಕಾರಣಕ್ಕೆ ಸಿಟ್ಟಿಗೆದ್ದು ನೆರೆಮನೆಯ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದ ದಂಪತಿ ಸೇರಿದಂತೆ ನೇಪಾಳದ ಐವರನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚೆನ್ನಪ್ಪಹಳ್ಳಿ ಸಮೀಪದ ಫ್ರೆಂಡ್ಸ್ ಲೇಔಟ್ ನಿವಾಸಿಗಳಾದ ನರೇಂದ್ರ ಚಾಂದರ್, ಆತನ ಪತ್ನಿ ವಿಮಲಾ, ಸಂಬಂಧಿಕರಾದ ರಾಮಚಾಂದ್, ಗೋವಿಂದ ಹಾಗೂ ವಿಮಲಾ ಚಾದರ್ ಬಂಧಿತರಾಗಿದ್ದು, ಇತ್ತೀಚಿಗೆ ತಮ್ಮ ಪಕ್ಕದ ಮನೆಯ ಗಜೇಂದ್ರ ಬಿಸ್ವ ಕರ್ಮ (22) ಮೇಲೆ ಹಲ್ಲೆ ನಡೆಸಿ ಆರೋಪಿಗಳು ಹತ್ಯೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೀಟಲೆ ಮಾಡಿದ್ದಕ್ಕೆ ರೊಚ್ಚಿಗೆದ್ರು
ಆರೋಪಿಗಳು ಹಾಗೂ ಮೃತ ಗಜೇಂದ್ರ ಮೂಲತಃ ನೇಪಾಳ ದೇಶದವರಾಗಿದ್ದು, ಹಲವು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದು ಫ್ರೆಂಡ್ಸ್ ಲೇಔಟ್‌ನಲ್ಲಿ ನೆಲೆಸಿದ್ದರು. ಖಾಸಗಿ ಸಂಸ್ಥೆಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಒಂದೇ ದೇಶದವರಾಗಿದ್ದರಿಂದ ಪರಸ್ಪರ ಆತ್ಮೀಯತೆ ಇತ್ತು.
ಕೆಲ ದಿನಗಳಿಂದ ವೈಯಕ್ತಿಕ ವಿಚಾರವಾಗಿ ನೆರೆಹೊರೆಯಲ್ಲಿ ನೆಲೆಸಿದ್ದ ನರೇಂದ್ರ ಹಾಗೂ ಗಜೇಂದ್ರ ಮಧ್ಯೆ ಮನಸ್ತಾಪವಾಗಿತ್ತು. ತನಗೆ ಕೀಟಲೆ ಮಾಡಿ ತೊಂದರೆ ಕೊಡುತ್ತಿದ್ದಾನೆ ಎಂದು ಗಜೇಂದ್ರನ ಮೇಲೆ ನರೇಂದ್ರನಿಗೆ ಕೋಪವಿತ್ತು. ಇದೇ ವಿಷಯವಾಗಿ ಇಬ್ಬರು ಜಗಳವಾಡಿದ್ದರು. ಆದಾಗ್ಯೂ ನರೇಂದ್ರನಿಗೆ ತರಲೆ ಮಾಡುವುದನ್ನು ಗಜೇಂದ್ರ ಬಿಟ್ಟಿರಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡು ಜು.13 ರಂದು ತನ್ನ ಸಂಬಂಧಿಕರ ಜತೆ ಸೇರಿ ಗಜೇಂದ್ರನ ಮೇಲೆ ನರೇಂದ್ರ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತನ ಹೊಟ್ಟೆಗೆ ಬಲವಾಗಿ ಆರೋಪಿಗಳು ಒದ್ದಿದ್ದರು. ಈ ಹೊಡೆತದಿಂದ ಅಸ್ವಸ್ಥಗೊಂಡಿದ್ದ ಗಜೇಂದ್ರನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಜು.15 ರಂದು ಆತ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.