ಅಧಿಕಾರಿಗಳ ಮೇಲೆ ಹಲ್ಲೆಗೈದ ಐವರು 5 ದಿನ ಕಸ್ಟಡಿಗೆ

KannadaprabhaNewsNetwork |  
Published : Jul 23, 2026, 03:45 AM ISTUpdated : Jul 23, 2026, 04:29 AM IST
Seemanth Kumar

ಸಾರಾಂಶ

ಶಿವಾಜಿನಗರದಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 12 ಆರೋಪಿಗಳನ್ನು ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರು ಬಂಧಿಸಿದ್ದು,   ಐವರನ್ನು ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

 ಬೆಂಗಳೂರು :  ಶಿವಾಜಿನಗರದಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 12 ಆರೋಪಿಗಳನ್ನು ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರು ಬಂಧಿಸಿದ್ದು, ಈ ಪೈಕಿ ಐವರನ್ನು ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಮತ್ತೊಂದೆಡೆ ಆರೋಪಿಗಳು ತಾವು ಮಾಡಿದ್ದು ತಪ್ಪು ಎಂದು ಕೈಮುಗಿದು ಬೇಡಿಕೊಂಡಿದ್ದು, ಇದರ ವಿಡಿಯೋವನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡಿದ್ದಾರೆ.

ವೈಟ್‌ಫೀಲ್ಡ್‌ನ ಸಿದ್ದಾಪುರ ನಿವಾಸಿ ಹಾಗೂ ವರ್ತೂರು ಠಾಣೆಯ ರೌಡಿಶೀಟರ್‌ ಬಸವರಾಜ್‌ ಪಡುಕೋಟೆ (57), ಸಿದ್ದಾಪುರ ನಿವಾಸಿ ರಘು (28), ಕಲಬುರಗಿ ಮೂಲದ ಬಸವರಾಜು (28), ಶಿವಾಜಿನಗರದ ಶಂಕರ್‌ (52), ಸಿದ್ದಾಪುರದ ಭರತ್‌ (25), ಶಿವಾಜಿನಗರದ ಪಾರ್ಥಿಬನ್‌ (23), ಹೊಂಗಸಂದ್ರದ ರಾಜನ್‌ (19), ಸಿದ್ದಾಪುರದ ಪರಶುರಾಮ್‌ (27), ಯಲಚೇನಹಳ್ಳಿ ಕಿರಣ್‌ (34), ಶಿವಾಜಿನಗರದ ಕೊಟ್ರೇಶ್‌ (26), ಶಿವಾಜಿನಗರದ ಮುಜಾಹಿದ್‌ ಅಹಮ್ಮದ್‌ (39) ಮತ್ತು ಬ್ಯಾಟರಾಯನಪುರದ ರಂಗಸ್ವಾಮಿ (49) ಬಂಧಿತರು.

ಬಂಧಿತ ಈ 12 ಮಂದಿ ಆರೋಪಿಗಳನ್ನು ಬುಧವಾರ ನಗರದ 10 ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು 12 ಆರೋಪಿಗಳ ಪೈಕಿ 5 ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದರು. ಬಸವರಾಜ್‌ ಪಡುಕೋಟೆ, ರಘು, ಬಸವರಾಜು, ಪಾರ್ಥಿಬನ್‌ ಮತ್ತು ಪರಶುರಾಮ್‌ ಎಂಬುವರನ್ನು ಪೊಲೀಸ್‌ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಆಯಾಮಗಳಲ್ಲಿ ತನಿಖೆ:

ಆರೋಪಿಗಳು ಪೆಪ್ಪರ್ ಸ್ಪ್ರೇಯನ್ನು ಎಲ್ಲಿಂದ ತಂದಿದ್ದರು, ಅಧಿಕಾರಿಗಳ ಮೇಲೆ ಹಲ್ಲೆಯ ಉದ್ದೇಶವೇನು ಎಂಬುದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಜಿಬಿಎ ಅಧಿಕಾರಿಗಳು ಗಣೇಶನ ದೇವಸ್ಥಾನ ಹಾಗೂ ಕನ್ನಡ ಧ್ವಜ ತೆರವು ಮಾಡಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದ್ದಾಗ ಅಧಿಕಾರಿಗಳು ನಿಂದಿಸಿದ್ದರು ಈ ವೇಳೆ ಗಲಾಟೆಯಾಗಿದೆ ಎಂದು ಬಸವರಾಜ ಆರೋಪ ಮಾಡಿದ್ದಾನೆ. ಮತ್ತೊಂದೆಡೆ ಫುಟ್‌ಪಾತ್‌ ತೆರವು ಮಾಡುವ ವೇಳೆಯಲ್ಲಿಯೇ ಆರೋಪಿಗಳು ಹಲ್ಲೆ ಮಾಡಿದ್ದಾರೆ ಎಂದು ಜಿಬಿಎ ಅಧಿಕಾರಿಗಳಿಂದ ದೂರು ನೀಡಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಬಸವರಾಜ್‌ ಪಡುಕೋಟೆ ಯಾದಗಿರಿ ಜಿಲ್ಲೆ ಮೂಲದವನಾಗಿದ್ದು, ವರ್ತೂರ್ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದಾನೆ. ಘಟನೆಯ ದಿನ ಆತ ಪೆಪ್ಪರ್ ಸ್ಪ್ರೇ ಖರೀದಿ ಮಾಡಿರಲಿಲ್ಲ ಎನ್ನಲಾಗಿದೆ. ಆದರೆ ತನ್ನ ಕಾರಿನಲ್ಲಿ ಇದ್ದುದನ್ನು ಚಾಲಕನ ಮೂಲಕ ತರಿಸಿಕೊಂಡು ಸಿಂಪಡಿಸಿದ್ದಾನೆ. ಹಲ್ಲೆ ನಡೆದಾಗ ಸ್ಥಳದಲ್ಲಿ ಪೊಲೀಸರು ಇರಲಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲದೆ ತೆರವು ಕಾರ್ಯಾಚರಣೆ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಸ್ಥಳದಲ್ಲಿ ಮೂವರು ಮಾರ್ಷಲ್‌ಗಳು ಮಾತ್ರ ಇದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ

ಫುಟ್‌ಪಾತ್ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳು, ತಾವು ಮಾಡಿದ್ದು ತಪ್ಪು ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳಬಾರದು. ನಮ್ಮಿಂದ ತಪ್ಪಾಯಿತು ಎಂದು ಬೇಡಿಕೊಂಡಿಕೊಂಡಿದ್ದು, ಇದರ ವಿಡಿಯೋವನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಬಿಫೋರ್, ಆಫ್ಟರ್ ಎಂದು ಅಪ್ಲೋಡ್‌ ಮಾಡಿದ್ದಾರೆ.

ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 12 ಮಂದಿಯ ಬಂಧನ ಮಾಡಲಾಗಿದೆ. ವಿಶೇಷ ತಂಡ ರಚನೆ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿ ಬಸವರಾಜ ಪಡುಕೋಟೆ ರೌಡಿಶೀಟರ್ ಆಗಿದ್ದಾನೆ. ಅವನದು ಬೇರೆ ಲಿಮಿಟ್ಸ್ ಆಗಿದ್ದು, ಇಲ್ಲಿಗೆ ಯಾಕೆ ಬಂದಿದ್ದ ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ. ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ. ಜಿಬಿಎ ಅಧಿಕಾರಿಗಳಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನಾವು ರಕ್ಷಣೆ ನೀಡುತ್ತೇವೆ.

- ಸೀಮಾಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಆಯುಕ್ತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗೂಗಲ್ ಕಂಪನಿಯ ಜತೆ ವಿಟಿಯು ಒಪ್ಪಂದ
ಮಾಧ್ಯಮಕ್ಕೆ ಸಾಮಾಜಿಕ ಕಳಕಳಿ ಅಗತ್ಯ : ಆಯಿಷಾ