ಕೊಪ್ಪಳ: ಪಂಚರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಪುದುಚೇರಿ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ಅಲ್ಲಿಯ ಮತದಾರರು ಎನ್‌ಡಿಎ ಬೆಂಬಲಿಸುವ ಮೂಲಕ ನವ ಭಾರತಕ್ಕೆ ದಿಕ್ಸೂಚಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಹೇಳಿದ್ದಾರೆ.
ಇನ್ನೊಂದೆಡೆ, ರಾಜ್ಯದ ಎರಡು ವಿಧಾನಸಭಾ ಉಪಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಜಯ ಸಾಧಿಸದಿರುವುದು ನಮಗೆ ಸ್ವಲ್ಪ ನಿರಾಶೆ ತಂದಿದೆ. ಆದಾಗ್ಯೂ, ಇದನ್ನು ಪಾಠವಾಗಿ ತೆಗೆದುಕೊಂಡು ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಘಟನೆ ಬಲಪಡಿಸುವ ಕಾರ್ಯವನ್ನು ಇನ್ನಷ್ಟು ತೀವ್ರಗೊಳಿಸಲಾಗುತ್ತದೆ ಎಂದರು.
ಬಿಜೆಪಿ ಮೂರು ರಾಜ್ಯಗಳಲ್ಲಿ ಐತಿಹಾಸಿಕ ಗೆಲುವು-ನವೀನ್ ಗುಳಗಣ್ಣವರ:ಬಿಜೆಪಿ ಮೂರು ರಾಜ್ಯಗಳಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ ಗುಳಗಣ್ಣವರ ಹೇಳಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಮಹತ್ವದ ವಿಜಯವು ದೇಶದ ಜನತೆ ಅಭಿವೃದ್ಧಿ, ಸುಶಾಸನ ಮತ್ತು ಪಾರದರ್ಶಕ ಆಡಳಿತದ ಮೇಲಿರುವ ಭರವಸೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವ ಮತ್ತು ಜನಪರ ಯೋಜನೆಗಳು ಜನಮನ ಗೆದ್ದಿವೆ. ಪಕ್ಷದ ಕಾರ್ಯಕರ್ತರ ಶ್ರಮ, ಸಂಘಟನೆಯ ಬಲ ಮತ್ತು ಜನರ ಆಶೀರ್ವಾದವೇ ಈ ವಿಜಯದ ಮೂಲಶಕ್ತಿ. ಈ ಫಲಿತಾಂಶಗಳು ದೇಶದ ಅಭಿವೃದ್ಧಿಯ ದಿಕ್ಕಿನಲ್ಲಿ ಮತ್ತೊಂದು ಮೈಲಿಗಲ್ಲಾಗಿದ್ದು, “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ಎಂಬ ದೃಷ್ಟಿಕೋನವನ್ನು ಜನರು ಮತ್ತೊಮ್ಮೆ ಒಪ್ಪಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಜನರ ವಿಶ್ವಾಸಕ್ಕೆ ತಕ್ಕಂತೆ ಇನ್ನಷ್ಟು ಸಮರ್ಪಕ ಸೇವೆ ನೀಡಲು ಮತ್ತು ರಾಷ್ಟ್ರೀಯತೆ ಎತ್ತಿ ಹಿಡಿಯಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದ್ದಾರೆ.