ತಕ್ಷಣವೇ ರಸ್ತೆಗಳು, ಮ್ಯಾನ್‌ಹೋಲ್‌ ಸರಿಪಡಿಸಿ: ಅಧಿಕಾರಿಗಳಿಗೆ ಶಾಸಕರ ಸೂಚನೆ

KannadaprabhaNewsNetwork |  
Published : Jan 21, 2026, 02:00 AM IST
20ಕೆಎಂಎನ್ ಡಿ17 | Kannada Prabha

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ಹೊರವಲಯದ ಕಾಗುಂಡಿ ಹಳ್ಳ ಮತ್ತು ಶ್ರವಣಬೆಳಗೊಳ ರಸ್ತೆಯಲ್ಲಿ ವೆಟ್ ವೆಲ್‌ಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ಮಲಯುಕ್ತ ತ್ಯಾಜ್ಯದ ನೀರು ದೇವೀರಮ್ಮಣಿ ಕೆರೆ ಮತ್ತು ಹೊಸಹೊಳಲು ದೊಡ್ಡಕೆರೆಯನ್ನು ಸೇರುತ್ತಿದೆ. ಇದರಿಂದ ಕೆರೆ ನೀರು ಮಲೀನಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜಲಜೀವನ್ ಯೋಜನೆ ಕಾಮಗಾರಿ ವೇಳೆ ಕಿತ್ತು ಹೋಗಿರುವ ಪಟ್ಟಣದ ರಸ್ತೆಗಳ, ಬೀದಿ ಬೀದಿಗಳಲ್ಲಿ ಉಕ್ಕಿ ಹರಿಯುತ್ತಿರುವ ಮ್ಯಾನ್‌ಹೋಲ್‌ ಗಳನ್ನು ಸರಿಪಡಿಸಿ ನೈರ್ಮಲ್ಯ ಕಾಪಾಡುವಂತೆ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪಟ್ಟಣದ್ ಶಹರಿ ರೋಜ್‌ಗಾರ್ ಭವನದಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ನಾಗರಿಕರ ಸಮಸ್ಯೆ ಆಲಿಸಿದ ಶಾಸಕರು, ಜಲಜೀವನ್ ಯೋಜನೆಯಡಿ ಕಾಮಗಾರಿ ನಡೆದ ಸ್ಥಳಗಳಲ್ಲಿ ರಸ್ತೆಗಳನ್ನು ಅಗೆದು ವಿರೂಪಗೊಳಿಸಿರುವ ಬಗ್ಗೆ ನಾಗರಿಕರು ನಿತ್ಯ ದೂರುತ್ತಿರುವ ಬಗ್ಗೆ ಎಂಜಿನಿಯರ್ ಗಳನ್ನು ಪ್ರಶ್ನಿಸಿದರು.

ಕೂಡಲೇ ನಗರ ಪ್ರದಕ್ಷಿಣೆ ಮಾಡಿ ಕಿತ್ತುಹೋಗಿರುವ ರಸ್ತೆಗಳನ್ನು ಸರಿಪಡಬೇಕು. ಒಳಚರಂಡಿ ಯೋಜನೆ ಪೂರ್ಣಗೊಳ್ಳದಿದ್ದರೂ ಈ ಹಿಂದೆ ಪುರಸಭೆಯ ಆಡಳಿತ ಮಂಡಳಿ ಕಾಮಗಾರಿಯನ್ನು ಹಸ್ತಾಂತರ ಮಾಡಿಕೊಂಡಿದೆ. ಅಪೂರ್ಣ ಕಾಮಗಾರಿಯಿಂದ ನಗರದಾದ್ಯಂತ ಹತ್ತಾರು ಕಡೆ ಮ್ಯಾನ್‌ಹೋಲ್‌ ಉಕ್ಕಿ ಹರಿಯುತ್ತಿದ್ದು ಕಲುಷಿತ ತ್ಯಾಜ್ಯದ ನೀರು ರಸ್ತೆಗಳಲ್ಲಿ ಹರಿದು ನಾಗರಿಕ ಸಮಸ್ಯೆ ಎದುರಾಗಿದೆ ಎಂದರು.

ಪಟ್ಟಣದ ಹೊರವಲಯದ ಕಾಗುಂಡಿ ಹಳ್ಳ ಮತ್ತು ಶ್ರವಣಬೆಳಗೊಳ ರಸ್ತೆಯಲ್ಲಿ ವೆಟ್ ವೆಲ್‌ಗಳು ಸಮರ್ಪಕವಾಗಿ ಕೆಲಸ ಮಾಡದ ಕಾರಣ ಮಲಯುಕ್ತ ತ್ಯಾಜ್ಯದ ನೀರು ದೇವೀರಮ್ಮಣಿ ಕೆರೆ ಮತ್ತು ಹೊಸಹೊಳಲು ದೊಡ್ಡಕೆರೆಯನ್ನು ಸೇರುತ್ತಿದೆ. ಇದರಿಂದ ಕೆರೆ ನೀರು ಮಲೀನಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರವಣಬೆಳಗೊಳ ರಸ್ತೆಯಲ್ಲಿ ವೆಟ್‌ವೆಲ್ ನಿರ್ಮಿಸಲು ಇರುವ ಜಾಗದ ಸಮಸ್ಯೆ ಪರಿಹರಿಸಬೇಕು. ಜನರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು. ಪೌರ ಕಾರ್ಮಿಕರಿಗೆ ಮೊದಲು ವೇತನ ನೀಡುವಂತೆ ಸೂಚಿಸಿದರು.

ಈ ವೇಳೆ ಪಟ್ಟಣ ನಾಗರಿಕ ಹಿತರಕ್ಷಣಾ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಪೌರ ಕಾರ್ಮಿಕರ ಸಂಘಟನೆಗಳು ಶಾಸಕರ ಎದುರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ದೂರುಗಳನ್ನು ಹೇಳಿದರು.

ವ್ಯಾಪಾರಸ್ಥರಿಂದ ಫುಟ್ ಪಾತ್ ಅತಿಕ್ರಮಣ, ನಡು ರಸ್ತೆಯಲ್ಲಿ ಸಾರ್ವಜನಿಕರ ಸಂಚಾರದ ಬಗ್ಗೆ ವಿವರಿಸಿ, ಜನರು ಸುಗಮ ಸಂಚಾರಕ್ಕೆ ಅನುವು ಮಾಡುವಂತೆ ಆಗ್ರಹಿಸಿದರು.

ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ಪಟ್ಟಣದ ಕೆಲವು ಬೇಕರಿ, ಅಂಗಡಿಗಳಲ್ಲಿ ಅವಧಿ ಮಗಿದ ತಿಂಡಿ ತಿನಿಸುಗಳ ಮಾರಾಟವಾಗುತ್ತಿದೆ. ಆಹಾರ ಇಲಾಖೆ ಸಿಬ್ಬಂದಿ ಕಾಲಕಾಲಕ್ಕೆ ತಪಾಸಣೆ ನಡೆಸಿ ವರ್ತಕರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ ಎಂದು ನಾಗರಿಕ ಹಿತರಕ್ಷನಾ ಸಮಿತಿ ಅಧ್ಯಕ್ಷ ಕೆ.ಎಸ್.ಸುರೇಶ್ ವಿಷಯ ಪ್ರಸ್ತಾಪಿಸಿದರು.

ರಾಜಕಾಲುವೆ ಒತ್ತುವರಿ ತೆರವಿಗಾಗಿ ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಆಗ್ರಹಿಸಿದರು. ಮಾಂಸದ ಅಂಗಡಿಗಳಲ್ಲಿ ಸ್ವಚ್ಛತೆ ಇಲ್ಲ. ರಸ್ತೆ ಬದಿ ಮಾಂಸ ಮಾರಾಟದಿಂದ ಜನರ ಆರೋಗ್ಯ ದ ಮೇಲೆ ಪರಿಣಾಮ ಕುರಿತು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್ ದೂರಿದರು.

ಕಷ್ಠಪಟ್ಟು ದುಡಿಯುವ ಪೌರಕಾರ್ಮಿಕರಿಗೆ ಪುರಸಭೆ ಕಳೆದ ಕೆಲವು ತಿಂಗಳಿಂದ ವೇತನ ನೀಡಿಲ್ಲ. ಕೂಡಲೇ ವೇತನ ಬಿಡುಗಡೆ ಮಾಡುವಂತೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಬನ್ನಾರಿ ಆಗ್ರಹಿಸಿದರು.

ಸಭೆಯಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಡಾ.ಎಸ್.ಯು. ಅಶೋಕ್, ಪುರಸಭೆ ಮುಖ್ಯಾಧಿಕಾರಿ ಅಶೋಕ್, ಒಳಚರಂಡಿ ಮತ್ತು ಜಲ ಜೀವನ್ ಮಿಷನ್ ಯೋಜನೆ ಸಹಾಯಕ ಕಾರ್ಯಪಾಲಕ ಅಭಿಯಂತರ ನದಾಫ್ ಸೇರಿದಂತೆ ಸಿಬ್ಬಂದಿ ಮತ್ತು ಪಟ್ಟಣದ ನಾಗರಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ