ಡೇರಿ ಕ್ಯಾಲೆಂಡರ್‌ನಲ್ಲಿ ಸಂಸ್ಥಾಪಕರಿಬ್ಬರ ಭಾವಚಿತ್ರ ಪ್ರಕಟಿಸುವ ಬಗ್ಗೆ ಪರ-ವಿರೋಧ

KannadaprabhaNewsNetwork |  
Published : Jan 21, 2026, 02:00 AM IST
20ಕೆಎಂಎನ್ ಡಿ14,15 | Kannada Prabha

ಸಾರಾಂಶ

ಮದ್ದೂರು ತಾಲೂಕಿನ ವಳಗೆರೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಸಂಸ್ಥಾಪಕರಿಬ್ಬರ ಭಾವಚಿತ್ರ ಪ್ರಕಟಿಸುವ ಸಂಬಂಧ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ನಿರ್ದೇಶಕರ ಎರಡು ಗುಂಪುಗಳ ನಡುವೆ ಪರ-ವಿರೋಧ ವ್ಯಕ್ತವಾಗಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ವಳಗೆರೆಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಸಂಸ್ಥಾಪಕರಿಬ್ಬರ ಭಾವಚಿತ್ರ ಪ್ರಕಟಿಸುವ ಸಂಬಂಧ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ನಿರ್ದೇಶಕರ ಎರಡು ಗುಂಪುಗಳ ನಡುವೆ ಪರ-ವಿರೋಧ ವ್ಯಕ್ತವಾಗಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಇದೇ ವೇಳೆ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಅವರುಗಳ ಏಕ ಪಕ್ಷಿಯ ತೀರ್ಮಾನದ ವಿರುದ್ಧ ರೊಚ್ಚಿಗೆದ್ದ ನಿರ್ದೇಶಕರ ಬೆಂಬಲಿಗರ ಗುಂಪೊಂದು ಕ್ಯಾಲೆಂಡರ್‌ಗೆ ಬೆಂಕಿ ಹಚ್ಚಿರುವ ಘಟನೆ ಜರುಗಿತು. ನಂತರ ಸ್ಥಳದಲ್ಲಿದ್ದ ಪೊಲೀಸರು ಉಭಯ ಗುಂಪುಗಳ ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.

ವಳೆಗೆರೆಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮತ್ತು ಕಾರ್ಯದರ್ಶಿ ಪುಟ್ಟಸ್ವಾಮಿ ಕಳೆದ ಡಿ.17ರಂದು ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲಿ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಸಂಘದ ಸಂಸ್ಥಾಪಕ ಡಿ.ಕರಡೀಗೌಡ ಅವರ ಭಾವಚಿತ್ರವನ್ನು ಕಳೆದ 10 ವರ್ಷಗಳಿಂದ ಪ್ರಕಟಿಸಲಾಗುತ್ತಿತ್ತು. ಆದರೆ, ಮತ್ತೋರ್ವ ಸಂಘದ ಅಧ್ಯಕ್ಷ ದಿ.ವಿ ಎಚ್. ನರಸಿಂಹೇಗೌಡ ‌ಅವರ ಭಾವಚಿತ್ರವನ್ನು ಪ್ರಕಟಿಸುವಂತೆ ನಿರ್ದೇಶಕ ವಿ.ಎನ್.ಗಿರೀಶ್ ಮನವಿ ಸಲ್ಲಿಸಿದ್ದರು.

ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ನಿರ್ದೇಶಕ ವಿ.ಎನ್.ಗಿರೀಶ್ ಜಿಲ್ಲಾಧಿಕಾರಿ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಿದ್ದರು. ಆ ನಂತರ ಸಂಘದ ದಾಖಲಾತಿ ಪರಿಶೀಲಿಸಿದ ಉಪನಿಬಂಧಕರು ಸಂಸ್ಥಾಪಕರ ಹೆಸರುಗಳನ್ನು ಪ್ರಕಟಿಸಬೇಕೆಂಬ ನಿಯಮ ಸಂಘದಲ್ಲಿ ಇರುವುದಿಲ್ಲ ಎಂದು ಡಿ.17ರಂದು ನಡೆದಿದ್ದ ಸಂಘದ ಆಡಳಿತ ಮಂಡಳಿ ಸಭೆಯನ್ನು ಅಮಾನತುಗೊಳಿಸಿದ್ದರು.

ತದನಂತರ ಜನವರಿ 12 ರಂದು ಮತ್ತೆ ನಡೆದ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ 9 ಮಂದಿ ನಿರ್ದೇಶಕರು ವಿ.ಎಚ್.ಕರಡಿಗೌಡರ ಭಾವಚಿತ್ರವಿಲ್ಲದ ಕ್ಯಾಲೆಂಡರ್ ಹಂಚುವುದು ಬೇಡ. ಅದೇ ಹಣವನ್ನು ಹಾಲು ಉತ್ಪಾದಕರಿಗೆ ಬೋನಸ್ ರೂಪದಲ್ಲಿ ನೀಡಿ ಎಂದು ಸಲಹೆ ಮಾಡಿದರು.

ಕ್ಯಾಲೆಂಡರ್ ವಿತರಣೆ ಮಾಡದಂತೆ ತಾಕೀತು ಮಾಡಿದ್ದರು. ಸಭೆಯಲ್ಲಿ ಈ ಬಗ್ಗೆ ಯಾವುದೆ ಒಮ್ಮತ ಮೂಡದ ಕಾರಣ ಸಭೆ ರದ್ದು ಪಡಿಸಲಾಗಿತ್ತು. ಈಹಿನ್ನೆಲೆಯಲ್ಲಿ ಬೇಸರಗೊಂಡ ಮನ್ಮುಲ್ ವಿಸ್ತರಣಾಧಿಕಾರಿ ಸಭೆಯಿಂದ ಹೊರನಡೆದಿದ್ದರು.

ಎಲ್ಲಾ ಗೊಂದಲಗಳ ನಡುವೆ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸಭೆಯಲ್ಲಿ ಏಳು ಮಂದಿ ನಿರ್ದೇಶಕರು ಅನುಮೋದನೆ ನೀಡಿದ್ದಾರೆ ಎಂದು ಬೇರೆಡೆ ಸಹಿ ಹಾಕಿಸಿಕೊಂಡು ನಿರ್ಣಯ ಅಂಗೀಕರಿಸಿ ಸಭಾ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಎಲ್ಲಾ ಎಲ್ಲಾ ಗೊಂದಲಗಳು ನಡುವೆ ವಿ.ಎಚ್.ನರಸಿಂಹಗೌಡರ ಭಾವಚಿತ್ರ ಕೈ ಬಿಟ್ಟು ಕರಡಿಗೌಡ ಭಾವಚಿತ್ರ ಇರುವ ಕ್ಯಾಲೆಂಡರ್ ಅನ್ನು ಹಾಲು ಉತ್ಪಾದಕರಿಗೆ ವಿತರಣೆ ಮಾಡಿರುವುದು ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿತ್ತು.

ನಂತರ ಸಂಘದ ಅಧ್ಯಕ್ಷರ ದೂರಿನ ಮೇರೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ಮಂಗಳವಾರ ಬೆಳಿಗ್ಗೆ ಸಂಘದಲ್ಲಿ ಹಾಲು ಶೇಖರಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ