ಕ್ವಿಂಟಲ್‌ ಶುಂಠಿಗೆ ₹10 ಸಾವಿರ ನಿಗದಿ ಮಾಡಿ: ರಾಮಣ್ಣ ಕೆಂಚಳ್ಳೇರ ಆಗ್ರಹ

KannadaprabhaNewsNetwork |  
Published : Feb 21, 2025, 11:47 PM IST
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸಾವಿರಾರು ರೈತರು ಸಾಲು ಮಾಡಿ ಶುಂಠಿಯನ್ನು ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಹಾಗಾಗಿ ಸರ್ಕಾರ ಕ್ವಿಂಟಲ್‌ಗೆ ₹10 ಸಾವಿರದಂತೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸಬೇಕು.

ಹಾವೇರಿ: ಜಿಲ್ಲೆಯಲ್ಲಿ ಸಾವಿರಾರು ರೈತರು ಶುಂಠಿ ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಅದಕ್ಕಾಗಿ ಶುಂಠಿ ಬೆಳೆಯನ್ನು ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಗೆ ಖರೀದಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ. 24ರಂದು ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾವಿರಾರು ರೈತರು ಸಾಲು ಮಾಡಿ ಶುಂಠಿಯನ್ನು ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಹಾಗಾಗಿ ಸರ್ಕಾರ ಕ್ವಿಂಟಲ್‌ಗೆ ₹10 ಸಾವಿರದಂತೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸಬೇಕು. ಶಾಶ್ವತ ಬರಗಾಲದಿಂದ ಹಾವೇರಿ ಜಿಲ್ಲೆ ಮುಕ್ತಿ ಹೊಂದಬೇಕಾದರೆ ಬೇಡ್ತಿ- ವರದಾ ನದಿ ಜೋಡಣೆ ಅವಶ್ಯವಿದ್ದು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಒಲವು ತೋರಿದ್ದಾರೆ. ಹಾಗಾಗಿ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿ ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಲಾಗುವುದು ಎಂದರು.2024- 25ನೇ ಸಾಲಿನ ಬೆಳೆವಿಮೆಯಲ್ಲಿ ಕಂಪನಿ ಮೋಸ ಮಾಡಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಮರುಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು. ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟದಿಂದ ರೈತರ ನೀರಾವರಿ ಬೆಳೆಗಳು ಒಣಗುತ್ತಿವೆ. ಕಳಪೆ ಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿದ್ದು, ಕನಿಷ್ಠ 7 ತಾಸು ಸಮರ್ಪಕ ವಿದ್ಯುತ್ ಪೂರೈಸಬೇಕು. ರೈತರ ಟಿಸಿ ಹಾಗೂ ಗ್ರಿಡ್‌ಗಳನ್ನು ಅಪ್‌ಗ್ರೇಡ್ ಮಾಡುವುದು, ಅಕ್ರಮ- ಸಕ್ರಮ ಯೋಜನೆಯಡಿ ಕಂಬ ವೈರ್, ಟಿಸಿ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಬ್ಯಾಂಕ್, ಫೈನಾನ್ಸ್‌ಗಳ ದಬ್ಬಾಳಿಕೆ ಸಾಲ ವಸೂಲಿ ನಿಲ್ಲಿಸಬೇಕು, ರೇಷ್ಮೆ ಬೆಳೆಗಾರರಿಗೆ ಮನೆ ಕಟ್ಟಿಕೊಡಲು ಸಹಾಯಧನ ಮಂಜೂರು ಮಾಡುವುದು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಡ್ರಿಪ್ ಹಾಗೂ ಸ್ಪಿಂಕ್ಲರ್‌ಗಳನ್ನು ಇತರೆ ಪರಿಕರಗಳಿಗೆ ಸಹಾಯಧನ ಮುಂದುವರಿಸುವುದು ಸೇರಿದಂತೆ ವಿವಿಧ ಹತ್ತಕ್ಕೂ ಹೆಚ್ಚು ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ಹಮ್ಮಿಕೊಂಡಿದೆ. ಆದ್ದರಿಂದ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕೆಂದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳೆದ ಮುಂಗಾರಿನಲ್ಲಿ ಮಧ್ಯಂತರ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ ರೈತರಿಗೆ ₹90 ಕೋಟಿ ಪರಿಹಾರ ಬರಬೇಕಿತ್ತು. ಆದರೆ ಕೇವಲ ₹9.66 ಕೋಟಿ ಮಾತ್ರ ಬಿಡುಗಡೆಯಾಗಿದೆ. ವಿಮಾ ಕಂತು ತುಂಬಿಸಿಕೊಳ್ಳುವಾಗ ಒಂದು ಆದೇಶ ಇದ್ದರೆ, ಕಂತು ತುಂಬಿದ ಬಳಿಕ ಇನ್ಸುರೆನ್ಸ್ ಕಂಪನಿಯವರು ಒಂದು ವರ್ಷದ ಹಿಂದಿನ ತಾರೀಕಿನಿಂದ ಪೂರ್ವಾನ್ವಯವಾಗುವಂತೆ ಆದೇಶ ಮಾಡಿದ್ದಾರೆ. ವಿಮೆಯಲ್ಲಿ ಸಾಕಷ್ಟು ಲೋಪಗಳಾಗಿದ್ದು, ಮರುಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಡಿಸಿಸಿ ಬ್ಯಾಂಕ್‌ಗೆ ಪರ್ಯಾಯವಾಗಿ ಆರ್‌ಒ ಕಚೇರಿಯನ್ನು ನಾಮಕಾವಸ್ತೆಗೆ ಮಾತ್ರ ತೆರೆಯಲಾಗಿದ್ದು, ಯಾವುದೇ ಸಿಬ್ಬಂದಿ, ಸೌಕರ್ಯಗಳು ಇಲ್ಲ. ಮೂಲ ಸೌಕರ್ಯ ಒದಗಿಸಬೇಕು ಎಂದರು.

ರೈತ ಮುಖಂಡರಾದ ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಎಚ್.ಎಚ್. ಮುಲ್ಲಾ, ರವಿ ಅಂಗಡಿ, ಯಶವಂತ ಯಡಗೋಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!