ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹೆದ್ದಾರಿ ನಿರ್ಮಾಣದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪದಿಂದಾದ ನ್ಯೂನತೆ ಕುರಿತು ಹೆದ್ದಾರಿಯುದ್ದಕ್ಕೂ ಇರುವ ಆಸುಪಾಸಿನ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಕೇಳಿ ಬರುತ್ತಿದ್ದ ದೂರುಗಳ ಹಿನ್ನೆಲೆಯಲ್ಲಿ ಶಾಸಕ ಎಚ್.ಟಿ.ಮಂಜು ಕೆಶಿಪ್ ಅಧಿಕಾರಿಗಳ ತಂಡದೊಂದಿಗೆ ಹೆದ್ದಾರಿಯುದ್ದಕ್ಕೂ ಸಂಚರಿಸಿ ಜನರಿಂದ ಸಮಸ್ಯೆ ಆಲಿಸಿದರು.
ತಾಲೂಕಿನ ಗಡಿಭಾಗ ಗಿಡದಬೊಪ್ಪನಹಳ್ಳಿಯಿಂದ ಸಿಂಗನಹಳ್ಳಿಯವರೆಗೆ ಸುಮಾರು 40 ಕಿ.ಮಿ ಉದ್ದಗಲಕ್ಕೂ ಹೆದ್ದಾರಿ ಮೂಲಕ ಸಂಚರಿಸಿದ ಶಾಸಕರು ಹಾಗೂ ಅಧಿಕಾರಿಗಳ ತಂಡಕ್ಕೆ ಸಮಸ್ಯೆಗಳ ಸರಮಾಲೇಯೇ ಗೋಚರಿಸಿತು.ನಾಗಮಂಗಲ ತಾಲೂಕಿನ ಮೂಲಕ ತಾಲೂಕಿನ ಗಿಡದ ಬೊಪ್ಪನಹಳ್ಳಿ ಗಡಿಯಿಂದ ಜಲಸೂರು ಹೆದ್ದಾರಿ ತಾಲೂಕಿಗೆ ಪ್ರವೇಶಿಸುತ್ತದೆ. ಗಿಡ ಬೊಪ್ಪನಹಳ್ಳಿಯ ಬಳಿ ರಸ್ತೆ ಎರಡು ಕವಲಾಗಿದ್ದು, ವಾಹನ ಸವಾರರ ಹಿತದೃಷ್ಟಿಯಿಂದ ಇಲ್ಲೊಂದು ವೃತ್ತ ನಿರ್ಮಿಸಿಲ್ಲ. ಇದರಿಂದ ಇದು ಅಪಘಾತದ ಸ್ಥಳವಾಗಿ ಮಾರ್ಪಟ್ಟಿದೆ ಎಂದು ದೂರಿದರು.
ಬಿಲ್ಲರಾಮನಹಳ್ಳಿ ನಿರ್ಮಿಸಿರುವ ಬಸ್ ನಿಲ್ದಾಣ ಸಂಪೂರ್ಣ ಕಳಪೆಯಾಗಿದೆ. ಟೈಲ್ಸ್ ಕಿತ್ತು ಬರುತ್ತಿವೆ. ಅಲ್ಲದೇ, ಬಸ್ ನಿಲ್ದಾಣವೇ ಕುಸಿಯುವ ಹಂತ ತಲುಪಿದೆ. ಬಹುತೇಕ ಕಡೆ ಗ್ರಾಮಗಳ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿಲ್ಲ. ಇದರಿಂದ ರೈತರು ಕೃಷಿ ಚಟುವಟಿಕೆಗೆ ಒಂದು ಭಾಗದಿಂದ ಮತ್ತೊಂದು ಕಡೆಗೆ ಹೋಗಲು ಅಡಚಣೆಯಾಗಿದೆ ಎಂದು ದೂರಿದರು.
ಚಿಕ್ಕಹೊಸಹಳ್ಳಿ ಬಳಿ ರಸ್ತೆ ನಿರ್ಮಾಣದ ವೇಳೆ ಕೆರೆ ಕಾಲುವೆಯನ್ನು ಮುಚ್ಚಿದ್ದಾರೆ. ಇದರಿಂದ ಮುಂದಿನ ಭಾಗದ ರೈತರಿಗೆ ನೀರು ಹರಿಯುತ್ತಿಲ್ಲ. ಮುಚ್ಚಿರುವ ಕಾಲುವೆಯನ್ನು ನಿರ್ಮಿಸಿಕೊಡಬೇಕು. ತಾಲೂಕಿನ ಬೊಮ್ಮೇನಹಳ್ಳಿ ಸರ್ಕಾರಿ ಶಾಲೆ ಕಾಂಪೌಂಡ್ ರಸ್ತೆಗಾಗಿ ಒಡೆಯಲಾಗಿದೆಕಟ್ಟಡಕ್ಕೆ ಕಿಟಕಿಗಳನ್ನು ಹಾಕಿ ಕೆಶಿಪ್ ಭದ್ರತೆ ಮಾಡಿಲ್ಲ.
ಅಗತ್ಯವಿರುವ ಕಡೆ ಗ್ರಾಮಗಳು ಹೆದ್ದಾರಿ ಸಂಪರ್ಕಿಸಲು ಅಗತ್ಯ ಸಮತಟ್ಟು ರಸ್ತೆಗಳನ್ನು ನಿರ್ಮಿಸಿಲ್ಲ. ಅಗ್ರಹಾರಚಾಹಳ್ಳಿ ಗ್ರಾಪಂಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ರಸ್ತೆ ನಿರ್ಮಾಣದ ವೇಳೆ ಒಡೆದು ಹಾಕಲಾಗಿದೆ. ಕೆಶಿಪ್ ಪರ್ಯಾಯ ಗ್ರಾಪಂ ಸೂಚಿಸಿದ ಸ್ಥಳಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಟ್ಟಿಲ್ಲ ಎಂದು ಶಾಸಕರು ಹಾಗೂ ಕೆಶಿಪ್ ಅಧಿಕಾರಿಗಳಿಗೆ ತೋರಿಸಿಕೊಟ್ಟರು.
ಯೋಜನಾ ನಿರ್ದೇಶಕ ರವೀಂದ್ರನಾಥ್, ಅಧೀಕ್ಷಕ ಎಂಜಿನಿಯರ್ ಮಾಲತೇಶ್, ಕಾರ್ಯಪಾಲಕ ಎಂಜಿನಿಯರ್ ಸುಪ್ರಿಯಾ ರೈತರ ಸಮಸ್ಯೆ ಆಲಿಸಿ ಸಮಸ್ಯೆ ಈಡೇರಿಸುವ ಭರವಸೆ ನೀಡಿದರು. ಈ ವೇಳೆ ಕೆಶಿಪ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವರಾಜ್, ಸಹಾಯಕ ಎಂಜಿನಿಯರ್ ಮಧನ್, ಕೆಶಿಪ್ ಸಿಬ್ಬಂದಿ ಹನುಮಂತಪೂಜಾರಿ, ಪಟ್ಟಣದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಬಸವೇಗೌಡ ಸೇರಿದಂತೆ ಹಲವರಿದ್ದರು.