ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭೆ ವಿಶೇಷ ಸಭೆಯಲ್ಲಿ ಮಾತನಾಡಿದ ಶಾಸಕರು, ಹಲವು ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ ಎಂಬ ದೂರಿದೆ. ಹಾಗಾಗಿ ಖುದ್ದು ಪರಿಶೀಲಸಬೇಕು, 24ಗಂಟೆ ನಿರಂತರ ಕುಡಿಯುವ ನೀರಿನ ಯೋಜನೆಯ ಬಾಕಿ ಕಾಮಗಾರಿಯನ್ನು ನಗರಸಭೆ ಸದಸ್ಯರಿಂದ ಮಾಹಿತಿ ಪಡೆದು ತಿಂಗಳಲ್ಲಿ ಪೂರ್ಣಗೊಳಿಸಲು ಗಡುವು ನೀಡಿದರು.
ನಗರಸಭೆ ಆಯುಕ್ತರು ವಾರ್ಡ್‌ಗಳಿಗೆ ಭೇಟಿ ನೀಡಿ ವಾರದಲ್ಲಿ ಒಮ್ಮೆಯಾದರೂ ಇಂದಿರಾ ಕ್ಯಾಂಟಿನ್‌ನಲ್ಲಿ ಊಟ ಮಾಡಿ ಆಹಾರದ ಗುಣಮಟ್ಟ ಪರಿಶೀಲನೆಗೆ ಮುಂದಾಗಿ ಎಂದು ಸೂಚಿಸಿದರು. ಚೆಸ್ಕಾಂ ಅಧಿಕಾರಿಗಳಿಗೆ ಸಭೆಯಲ್ಲೆ ಕರೆ ಮಾಡಿದ ಶಾಸಕರು, 24ಗಂಟೆ ಕುಡಿಯುವ ನೀರಿನ ಪೂರೈಕೆ ಸಂಪರ್ಕವನ್ನೇಕೆ ಚಿಲಕವಾಡಿ ಎಕ್ಸ್ ಪ್ರೆಸ್ ಲೈನ್ ಗೆ ನೀಡಿದ್ದೀರಿ, ಕೂಡಲೆ ಬದಲಾಯಿಸಿ ಇಲ್ಲಾಗಿರುವ ಲೋಪ ಸರಿಪಡಿಸಿ ಎಂದರು. ಯೋಜನೆಗಳಿಗೆ ಅನುಮತಿ ಪಡೆಯುವುದು, ಕಾಮಗಾರಿಗೆ ಚಾಲನೆ ನೀಡುವುದೇ ಮುಖ್ಯವಲ್ಲ , ಅದರ ನಿರ್ವಹಣೆಯೂ ಮುಖ್ಯ ಈನಿಟ್ಟಿನಲ್ಲಿ ಹಿಂದಿನ ಲೋಪ ಮರುಕಳಿಸಿದಂತೆ ನಗರಸಭಾಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದರು.ವ್ಯರ್ಥ ಕಾಮಗಾರಿ ಆಗಬಾರದು: ಜಿಲ್ಲಾಧಿಕಾರಿ ಖಡಕ್ ಸೂಚನೆನಗರಸಭೆ ಸೇರಿದಂತೆ ಯಾವುದೆ ಸಂಸ್ಥೆ, ಇಲಾಖೆಗಳಿಗೆ ಸರ್ಕಾರದಿಂದ ಬಂದ ಅನುದಾನ ಬಳಕೆಯಾಗದೆ ವಾಪಸ್ ಹೋದರೂ ಚಿಂತೆ ಇಲ್ಲ, ಆದರೆ ಸರ್ಕಾರದ ಹಣ ಪೋಲಾಗುವಂತಹ ಕಾಮಗಾರಿ ಕೈಗೊಳ್ಳುವುದು ಬೇಡ, ಈನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತರಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಖಡಕ್ಕಾಗಿ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಅನುಮೋದನೆಗೂ ಮುನ್ನ ಅಧಿಕಾರಿಗಳು ನಿರ್ವಹಣೆ ಸಾದ್ಯವಾದಲ್ಲಿ ಮಾತ್ರ ಮುಂದಾಗಬೇಕು, ಸರ್ಕಾರಕ್ಕೆ ಹಣ ಹಿಂತಿರುಗಿಸಿ ಹೋದರೆ ಅಲ್ಲಿ ಇರುತ್ತೆ, ಆದರೆ ಇಲ್ಲಿ ಅನುದಾನ ಬಳಕೆಗಾಗಿ ಅನಾವಶ್ಯಕವಾಗಿ ವಸ್ತು, ಯಂತ್ರಗಳ ಖರೀದಿ, ಕಾಮಗಾರಿ ಇತರೆ ಕೈಗೊಳ್ಳುವುದು ಸರಿಯಲ್ಲ, ಯಂತ್ರೋಪಕರಣ ಖರೀದಿ ಮಾಡುವುದು ಸಹ ಮುಖ್ಯವಲ್ಲ ಅದು ಹಾಳಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
24ಗಂಟೆ ಕುಡಿಯುವ ನೀರಿನ ಕಾಮಗಾರಿಯಲ್ಲಿ ಲೋಪ ಕುರಿತು ಕಳೆದ ಸಭೆಯಲ್ಲಿ ಚರ್ಚಿಸಲಾಗಿತ್ತು, ಅದನ್ನು ಸರಿಪಡಿಸಲಾಗಿದಯೇ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಗುತ್ತಿಗೆ ಕಂಪನಿ ಮತ್ತು ಅಧಿಕಾರಿಗಳ ಕ್ರಮದ ವಿರುದ್ಧ ಅಸಮಧಾನ ಹೊರಹಾಕಿದರು.ಹಿಂದಿನ ಸಭೆಯಲ್ಲಿ ಸೂಚಿಸಿದ್ದರೂ ಕ್ರಮಕೈಗೊಂಡಿಲ್ಲ, ಮುಂದಿನ ಸಭೆಗೂ ಇದೆ ಹಣೆ ಬರಹ ಎಂದು ಸದಸ್ಯರು ಪ್ರಶ್ನಿಸುತ್ತಾರೆ, ಅಧಿಕಾರಿಗಳಿಂದ ಸಮರ್ಥನೆ ಉತ್ತರ ಬರುತ್ತೆ, ಇದನ್ನೆ ಕೇಳಿ ನಾನು ಹಾಗೂ ಸದಸ್ಯರು ಹೋಗಬೇಕಾಗುತ್ತದೆ ಸಂಬಂಧಿಸಿದವರ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಪ್ರಶ್ನಿಸಿದರು.
ಕೊಳ್ಳೇಗಾಲದಲ್ಲಿ 24ಗಂಟೆ ಕುಡಿಯುವ ನೀರು ಪೂರೈಕೆ ಕಾಮಗಾರಿಯ ಹೊಣೆ ಹೊತ್ತ ಕಂಪನಿ ಮುಖ್ಯಸ್ಥರನ್ನು ಸಭೆಯಲ್ಲೆ ತರಾಟೆ ತೆಗೆದುಕೊಂಡು, ನೀರಿನ ಶುದ್ಧತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಲ್ಯಾಬ್ ಪರೀಕ್ಷೆ ಮಾಡಿಸಲಾಗುತ್ತಿದೆಯೇ? ನಿಮ್ಮ ಪ್ರಯೋಗಾಲಯಕ್ಕೆ ನಾನೇ ಭೇಟಿ ನೀಡುವೆ ಎಂದರು.
ಕೊಳ್ಳೇಗಾಲದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೋಲಾರ್ ಪವರ್ ಗ್ರೀನ್ ಸ್ಥಾಪಿಸುವ ₹50 ಲಕ್ಷದ ಕಾಮಗಾರಿಗೆ ಅನುಮೋದನೆ ಪಡೆದುವುದು ಮುಖ್ಯವಲ್ಲ, ಹೆಚ್ಚು ವರ್ಷಗಳ ಕಾಲ ನಿರ್ವಹಣೆಯಲ್ಲಿ ಉತ್ತಮ ರೀತಿ ನಗರಸಭೆಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲ ಕಂಪನಿಗಳ ಜೊತೆ ಚರ್ಚಿಸಿ ಕಾಮಗಾರಿ ಅನುಮೋದಿಸುವ ಕುರಿತು ಚರ್ಚಿಸಲಾಯಿತು.
ಈ ವೇಳೆ ನಗರೋತ್ಙಾನ ಕಾಮಗಾರಿ ಬಗ್ಗೆ ಉಪಾಧ್ಯಕ್ಷ ಶಂಕರ್, ಧರಣೀಶ, ಶಂಕನಪುರ ಪ್ರಕಾಶ್ ಇನ್ನಿತರರು ಆಕ್ಷೇಪ ವ್ಯಕ್ತಪಡಿಸಿ ಗುತ್ತಿಗೆದಾರರು ಕರೆ ಸ್ವೀಕರಿಸಲ್ಲ, ಅನ್ಯ ಗುತ್ತಿಗೆದಾರರನ್ನು ನೇಮಿಸಿ ಕಾಮಗಾರಿ ಮಾಡಿಸಿ, ಅವರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಆಗ್ರಹಿಸಿದರು. ಶಂಕರ್ ನಾರಾಯಣಗುಪ್ತ ಸರ್ಕಟನ್ ಚಾನಲ್, ಯುಜಿಡಿ, ಕುಡಿಯುವ ನೀರಿನ ಕಾಮಗಾರಿ, ನಗರೋತ್ಥಾನ ಯೋಜನೆ ಜಾರಿಗೊಂಡು ವರುಷಗಳೆ ಸಂದರೂ ಇನ್ನು ಕಾಮಗಾರಿ ಮುಗಿದಿಲ್ಲ ಎಂದು ಅಸಮಾಧಾನ ಹೊರಹಾಕಿದರು.