ಸಣ್ಣ ಕೆಳಸೇತುವೆ, ರಸ್ತೆಗಳ ಸಮಸ್ಯೆ ಈಗಲೇ ಸರಿಪಡಿಸಿ

KannadaprabhaNewsNetwork |  
Published : May 22, 2025, 12:58 AM IST
21ಕೆಡಿವಿಜಿ5, 6, 7, 8-ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಬುಧವಾರ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಎಸ್ಪಿ ವಿಜಯಕುಮಾರ ಸಂತೋಷ ಇತರರು ಇದ್ದರು. | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ-48ರ ಬಾಕಿ ಕಾಮಗಾರಿ ತ್ವರಿತವಾಗಿ ಕೈಗೊಂಡು, ಕಿರಿದಾದ ರಸ್ತೆ, ಅಂಡರ್ ಪಾಸ್‌, ಸರ್ವೀಸ್ ರಸ್ತೆ ನಿರ್ಮಿಸಬೇಕು. ಆ ಮೂಲಕ ವಾಹನಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೂಚಿಸಿದ್ದಾರೆ.

- ರಸ್ತೆ ಸುರಕ್ಷತಾ ಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೂಚನೆ । ಅಂಡರ್‌ ಪಾಸ್‌ಗಳಲ್ಲಿ ವಿದ್ಯುದೀಪ ಕಲ್ಪಿಸಲು ತಾಕೀತು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ರಾಷ್ಟ್ರೀಯ ಹೆದ್ದಾರಿ-48ರ ಬಾಕಿ ಕಾಮಗಾರಿ ತ್ವರಿತವಾಗಿ ಕೈಗೊಂಡು, ಕಿರಿದಾದ ರಸ್ತೆ, ಅಂಡರ್ ಪಾಸ್‌, ಸರ್ವೀಸ್ ರಸ್ತೆ ನಿರ್ಮಿಸಬೇಕು. ಆ ಮೂಲಕ ವಾಹನಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸೂಚಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ರಸ್ತೆ ಸುರಕ್ಷತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ವಿವಿಧೆಡೆ ಬಾಕಿ ಉಳಿದ ಕಾಮಗಾರಿಗಳನ್ನು ಪ್ರಾಧಿಕಾರ ಚುರುಕಿನಿಂದ ಕೈಗೊಂಡು, ಮುಗಿಸಬೇಕು. ಕಿರಿದಾದ ಕೆಳಸೇತುವೆಗಳು, ಕಿರಿದಾದ ರಸ್ತೆಗಳ ಸಮಸ್ಯೆಯನ್ನೂ ಈಗಲೇ ಸರಿಪಡಿಸುವಂತೆ ತಿಳಿಸಿದರು.

ಎಸ್‌.ಎಸ್‌. ಹೈಟೆಕ್ ಆಸ್ಪತ್ರೆಯ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಜೈನೇಜ್ ಅಂಡರ್ ಪಾಸ್ ಬಳಿ ಭಾರಿ ವಾಹನ, ನಗರ ಸಾರಿಗೆ, ಲಾರಿ, ಬಸ್‌ ವಾಹನಗಳು ಸಂಚರಿಸುತ್ತಿವೆ. ಆದರೆ, ಅಲ್ಲಿನ ಕೆಳಸೇತುವೆ ತುಂಬಾ ಕಿರಿದಾಗಿದೆ. ಸಂಚಾರ ದಟ್ಟಣೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು, ತ್ವರಿತವಾಗಿ ಸಮಸ್ಯೆ ಪರಿಹರಿಸಿ. ಸಮಗ್ರ ಮಾಹಿತಿ ನೀಡಿ ಎಂದು ಹೇಳಿದರು.

ಅಲ್ಲದೇ, ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್‌ಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯೇ ಇಲ್ಲ. ಸಂಜೆ ರಾತ್ರಿ, ಬೆಳಗಿನ ಜಾವ ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿಗಳು ಸಂಚರಿಸುತ್ತಿರುತ್ತಾರೆ. ಅಂಥವರಿಗೆ ತೊಂದರೆ ಆಗದಂತೆ ಅಗತ್ಯವಿರುವ ಕಡೆ ಕ್ಯಾರೇಜ್‌ ವೇ ಹೆಚ್ಚಿಸುವ ಮೂಲಕ ವಿದ್ಯುದೀಪಗಳ ವ್ಯವಸ್ಥೆ ಮಾಡಿ. ಇದರಿಂದ ಕಳ್ಳತನ, ಅಪಘಾತ ಸೇರಿದಂತೆ ಇತರೆ ಅಹಿತಕರ ಘಟನೆ ನಡೆಯುವುದು ಕಡಿಮೆಯಾಗುತ್ತದೆ ಎಂದರು.

ಮುಂಗಾರು ಪೂರ್ವದ ಮಳೆ ಶುರುವಾಗಿದೆ. ಅನೇಕ ಕಡೆ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ, ತಾಲೂಕು ಹೆದ್ದಾರಿಗಳಲ್ಲಿ ಮಳೆ ನೀರು ನಿಂತು, ಅಪಘಾತ, ಸಾವು- ನೋವು ಸಂಭವಿಸುವಂತಹ ಸಾಧ್ಯತೆಗಳ ಬಗ್ಗೆ ದೂರು ಕೇಳಿಬರುತ್ತಿವೆ. ಅಂತಹ ಸ್ಥಳಗಳನ್ನು ಗುರುತಿಸಿ, ಸರಿಪಡಿಸಬೇಕು. ಹರಿಹರ ತಾಲೂಕಿನ ಹರಗನಹಳ್ಳಿ, ದಾವಣಗೆರೆ ತಾಲೂಕಿನ ಹೆಬ್ಬಾಳ್ ಬಳಿ ಏಕಾಏಕಿ ತಿರುವು ಪಡೆಯಲು ವಾಹನಗಳಿಗೆ ಡಾಬಾ, ಹೋಟೆಲ್‌, ಪೆಟ್ರೋಲ್ ಬಂಕ್‌, ಇತರೆ ಅಂಗಡಿ- ಮುಂಗಟ್ಟುಗಳ ಅವೈಜ್ಞಾನಿಕ, ಅನಧಿಕೃತ, ಅವೈಜ್ಞಾನಿಕ, ನಿಯಮಬಾಹಿರವಾಗಿ ಮಾಡಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪ್ರತಿ 70 ಕಿಮೀ ವ್ಯಾಪ್ತಿಗೆ 2 ಆಂಬ್ಯುಲೆನ್ಸ್:

ಟೋಲ್‌ಗಳಲ್ಲಿ ಎನ್‌ಪಿಆರ್ ನಂಬರ್ ಪ್ಲೇಟ್ ನೋಂದಣಿ ಮಾಡಿಕೊಳ್ಳುವ ಉತ್ತಮ ಗುಣಮಟ್ಟದ ಸಿಸಿ ಟಿವಿ ಮತ್ತು ವಿದ್ಯುದೀಪ ಕಡ್ಡಾಯವಾಗಿ ಅಳವಡಿಸಬೇಕು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಪ್ರಾಧಿಕಾರದಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿ 70 ಕಿಮೀ ವ್ಯಾಪ್ತಿಗೆ 2 ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಬೇಕು. ಯಾವುದೇ ಅಪಘಾತಗಳು ಸಂಭವಿಸಿದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣವೇ ಸ್ಪಂದಿಸಬೇಕು. ಪ್ರಾಧಿಕಾರದ ಸಹಾಯವಾಣಿ 1033 ಸರಿಯಾಗಿ ಬಳಕೆಯಾಗುತ್ತಿಲ್ಲ. ಈ ಸಹಾಯವಾಣಿ ಸಂಖ್ಯೆಯನ್ನು ಸ್ಥಳೀಯ ಭಾಷೆಯಲ್ಲೂ ಸಂವಹನ ನಡೆಸಲು ಸಹಾಯವಾಗುವಂತೆ ಬರೆಸಿ ಎಂದು ಅವರು ತಿಳಿಸಿದರು.

ಕೆಲ ಸಂದರ್ಭಗಳಲ್ಲಿ ಒಬ್ಬನೇ ವ್ಯಕ್ತಿ ಇದ್ದಾಗ ಅಪಘಾತಗಳು ಸಂಭವಿಸಿದರೆ ಪ್ರಾಧಿಕಾರದ ಅಧಿಕಾರಿಗಳು ತುರ್ತು ಗಮನಹರಿಸಿ, ಆಂಬ್ಯುಲೆನ್ಸ್‌, ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ ಹಾದುಹೋಗಿರುವ ಕುಂದುವಾಡ ರಸ್ತೆಯಲ್ಲಿ ಸರ್ವೀಸ್ ರಸ್ತೆಯನ್ನೇ ಮಾಡಿಲ್ಲ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ, ಮನೆಗಳಿಗೆ ಮಳೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗುತ್ತಿದೆ. ಇಂತಹ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದು ಎಷ್ಚರಮಟ್ಟಿಗೆ ಸರಿ? ಹೆದ್ದಾರಿಯ ಇಕ್ಕೆಲಗಳಲ್ಲಿ ಗಿಡಗಳು ಬೆಳೆದಿವೆ. ಸಾರ್ವಜನಿಕರು, ವಾಹನ ಚಾಲಕರಿಗೆ ತೊಡಕಾಗುತ್ತಿದೆ. ತಕ್ಷಣ‍ ಅಂಥದ್ದನ್ನು ತೆರವುಗೊಳಿಸಿ ಎಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ. ಸಂತೋಷ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನರೇಂದ್ರ ಬಾಬು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ, ವಿಭಾಗೀಯ ನಿಯಂತ್ರಣಾಧಿಕಾರಿ ಫಕೃದ್ದೀನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ, ಪದಾಧಿಕಾರಿಗಳು ಇದ್ದರು.

- - -

(ಕೋಟ್ಸ್) ದಾವಣಗೆರೆ ಪಿ.ಬಿ. ರಸ್ತೆಯ ದೇವರಾಜ ಅರಸು ವೃತ್ತದ ಬಳಿ ಬಿಎಸ್ಸೆನ್ನೆಲ್ ಕಚೇರಿ ಬಳಿ ಸುಮಾರು 15-20 ಹೂವಿನ ಗೂಡಂಗಡಿ ಇದ್ದು, ಅವುಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ, ವಾಹನ ಸಂಚಾರಕ್ಕೆ ಅಡ್ಡಿ ಆಗದಂತೆ ತಾತ್ಕಾಲಿಕ ಕ್ರಮ ಕೈಗೊಳ್ಳಿ. ಅನಂತರದ ದಿನಗಳಲ್ಲಿ ಹೂವಿನ ವ್ಯಾಪರಸ್ಥರಿಗೆ ಸೂಕ್ತ, ಶಾಶ್ವತ ಸ್ಥಳ ಗುರುತಿಸಿ, ಅಲ್ಲಿಗೆ ಸ್ಥಳಾಂತರಿಸುವ ಕೆಲಸವನ್ನು ಪಾಲಿಕೆ ಅಧಿಕಾರಿಗಳು ಮಾಡಬೇಕು.

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ

- - - ದಾವಣಗೆರೆ ಆಟೋ ರಿಕ್ಷಾಗಳಿಗೆ ಮೀಟರ್ ಮತ್ತು ಡಿಸ್‌ ಪ್ಲೇ ಬೋರ್ಡ್ ಕಡ್ಡಾಯಗೊಳಿಸಿದೆ. ಆಟೋ ಚಾಲಕರು ಮೀಟರ್ ಮತ್ತು ಡಿಸ್‌ಪ್ಲೇ ಬೋರ್ಡ್ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಆಟೋ ರಿಕ್ಷಾ ಚಾಲಕರು, ಮಾಲೀಕರ ಸಂಘ ಮುತುವರ್ಜಿ ವಹಿಸಬೇಕು. ಈವರೆಗೆ 525 ಆಟೋ ರಿಕ್ಷಾ ಜಪ್ತಿ ಮಾಡಿದ್ದು, ಮೀಟರ್‌, ಡಿಸ್‌ ಪ್ಲೇ ಬೋರ್ಡ್ ಅಳವಡಿಸಿದರೆ ನಿಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು.

- ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ

- - - -21ಕೆಡಿವಿಜಿ5, 6, 7, 8.ಜೆಪಿಜಿ:

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಬುಧವಾರ ರಸ್ತೆ ಸುರಕ್ಷತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಎಸ್‌ಪಿ ವಿಜಯಕುಮಾರ ಸಂತೋಷ ಇತರರು ಇದ್ದರು.

PREV

Recommended Stories

ದಸರಾಕ್ಕೆ ದೀಪ್ತಾ ಭಾಸ್ತಿಗೆ ಆಹ್ವಾನವಿಲ್ಲಕೆ? : ಬಿವೈವಿ
ಕನಕಪುರದಲ್ಲಿ ವೈದ್ಯ ಕಾಲೇಜಿಗೆ ಭೂಮಿ ಖರೀದಿಗೆ ಹಣ ಮಂಜೂರು