ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ರೈತರು ತರಕಾರಿ ಬುಟ್ಟಿಗಳನ್ನು ತಲೆಮೇಲೆ ಹೊತ್ತುಕೊಂಡು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಡಿಸಿ ಕಚೇರಿ ಮುಂಭಾಗ ಬರುವ ವೇಳೆ ಪೊಲೀಸರು ತಡೆದರು. ಡಿಸಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ಮಾಡಲು ಸೂಚಿಸಿದಾಗ ರೈತ ಸಂಘದವರು ಒಪ್ಪದೆ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಕುಳಿತರು. ಈ ವಿಚಾರವಾಗಿ ಪೊಲೀಸ್ ಮತ್ತು ರೈತರ ನಡುವೆ ವಾಗ್ವಾದ ಉಂಟಾಯಿತು. ಕೆಲ ಸಮಯದಲ್ಲೆ ಎಡಿಸಿ ಶಕುಂತಲಾ ಅವರು ಮನವಿ ಸ್ವೀಕರಿಸಲು ಬಂದಾಗ ಡಿಸಿ ಬರುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ. ಜೊತೆಗೆ ಸಭೆ ಕರೆದು ತರಕಾರಿ ಬೆಲೆ ನಿಗದಿ ಮಾಡಿ ರೈತರನ್ನು ಉಳಿಸಬೇಕು ಎಂದು ಪಟ್ಟು ಹಿಡಿದರು. ಕೆಲ ಸಮಯದಲ್ಲೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಕಚೇರಿ ಬಂದಾಗ ರೈತರು ಡಿಸಿ ಬಳಿ ಹೋಗಿ ತಮ್ಮ ಉದ್ದೇಶವನ್ನು ತಿಳಿಸಿದಲ್ಲದೇ ಅವರಿಗೂ ಕೂಡ ರೈತರು ತರಕಾರಿ ಕೊಟ್ಟರು. ಜಿಲ್ಲಾಧಿಕಾರಿಗಳು ತರಕಾರಿ ಬೇಡ ಎಂದರೂ ರೈತರು ಬಲವಂತವಾಗಿ ಕೊಡಲು ಮುಂದಾದರು.
ಹಾಕಿದ ಬಂಡವಾಳವೂ ರೈತರಿಗೆ ಸಿಗುತ್ತಿಲ್ಲ:ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಮಾಧ್ಯಮದೊಂದಿಗೆ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ರೈತರು ಭಾರಿ ಸಂಕಷ್ಟದಲ್ಲಿ ತರಕಾರಿ ಬೆಳೆ ಬೆಳೆಯುತ್ತಿದ್ದಾರೆ. ರೈತರು ಬೆಳೆದ ತರಕಾರಿಗಳಿಗೆ ನಿಗದಿತ ಬೆಲೆ ಮತ್ತು ಮಾರುಕಟ್ಟೆ ಶಿಥಿಲೀಕರಣದ ವ್ಯವಸ್ಥೆ ಇಲ್ಲದೆ ಮತ್ತು ಮಾರುಕಟ್ಟೆಯು ವ್ಯವಸ್ಥಿತವಾಗಿಯೂ ಇಲ್ಲದೆ ಹಾಕಿದ ಬಂಡವಾಳವು ಸಹ ರೈತರಿಗೆ ಸಿಗುತ್ತಿಲ್ಲ. ಆದ್ದರಿಂದ ರೈತರಿಗೆ ನೇರವಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸ್ಥಳಾವಕಾಶ ಕಲ್ಪಿಸಿ ಕೊಡಬೇಕು ಹಾಗೂ ಶಿಥಿಲೀಕರಣದ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು. ಎಪಿಎಂಸಿಯಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
* ಹೇಳಿಕೆ:1 ಪದವೀಧರನಾದರೂ ರೈತನಾಗಿ ಬೆಳೆ ಬೆಳೆದು ನಾವು ಜೀವನ ಸಾಗಿಸುತ್ತಿದ್ದೇವೆ. ಕಾಡು ಪ್ರಾಣಿ ಹಾವಳಿ ಇದ್ದರೂ ಕಷ್ಟಪಟ್ಟು ಬೆಲೆ ಬೆಳೆಯುತ್ತಿದ್ದೇವೆ. ಇಲ್ಲಿ ಸೋರೆಕಾಯಿ ಬೆಳೆದಿದ್ದು, ಈಗ ಕೇಜಿಗೆ ೫೦ ಪೈಸೆಗೂ ಕೇಳುತ್ತಿಲ್ಲ. ನಮ್ಮ ರೈತರಿಗೆ ಮಾರುಕಟ್ಟೆಯಲ್ಲಿ ಸ್ಥಳಾವಕಾಶ ಮಾಡಿಕೊಡಬೇಕು. ಜೊತೆಗೆ ಬೆಂಬಲ ಬೆಲೆ ನಿಗದಿ ಮಾಡಿಕೊಡಬೇಕು. - ಪ್ರಕಾಶ್,ರೈತ