ಉಕ್ಕಿದ ಘಟಪ್ರಭೆ; ಗೋಕಾಕ ತಾಲೂಕಿನಲ್ಲಿ ಪ್ರವಾಹ ಭೀತಿ

KannadaprabhaNewsNetwork |  
Published : Jul 26, 2024, 01:31 AM IST
ಗೋಕಾಕ ಪಾಲ್ಸ್ ಹಾಗೂ ಕೊಣ್ಣೂರು ಪಟ್ಟಣದಿಂದ ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಚಿಕ್ಕೋಳಿ ಸೇತುವೆಗೆ ಬಂದ ನೀರು. | Kannada Prabha

ಸಾರಾಂಶ

ಘಟಪ್ರಭಾ ನದಿಗೆ 43,754 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪೋಲಿಸ್ ಇಲಾಖೆ ಸೇರಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕಾಕ

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಘಟಪ್ರಭಾ ನದಿಗೆ 43,754 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪೋಲಿಸ್ ಇಲಾಖೆ ಸೇರಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.

ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ, ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಿಡಕಲ್ ಜಲಾಶಯ, ಹಿರಣ್ಯಕೇಶಿ ನದಿ ಸೇರಿ 33,560 ಕ್ಯುಸೆಕ್‌, ಮಾರ್ಕಂಡೇಯ ನದಿಯಿಂದ 7380 ಕ್ಯುಸೆಕ್‌, ಬಳ್ಳಾರಿನಾಲಾ ದಿಂದ 3 ಸಾವಿರ ಕ್ಯುಸೆಕ್‌ ನೀರನ್ನು ನದಿಗಳಿಗೆ ಹರಿಬಿಡಲಾಗಿದ್ದು, ಗೋಕಾಕ ನಗರ ಮತ್ತು ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಗುರುವಾರ ಮಧ್ಯಾಹ್ನದಿಂದ ಭಾನುವಾರದವರೆಗೆ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನಗರದ ಹಳೆದನಗಳ ಪೇಟೆ, ಕುಂಬಾರ ಓಣಿ ಸೇರಿದಂತೆ ಸಂಭವನೀಯ ಪ್ರವಾಹ ಪೀಡಿತ ಸ್ಥಳಗಳಿಗೆ ಸಿಪಿಐ ಗೋಪಾಲ ರಾಠೋಡ ನೇತೃತ್ವದಲ್ಲಿ ಅಧಿಕಾರಿಗಳಾದ ನಗರಸಭೆ ಪೌರಾಯುಕ್ತ ಜಾಧವ, ಎಇಇ ಪಾಟೀಲ, ಪಿಎಸ್‌ಐ ವಾಲಿಕರ ಭೇಟಿ ನೀಡಿ ನದಿ ತಟದಲ್ಲಿರುವ ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ದನ, ಕರುಗಳನ್ನು ತೆಗೆದುಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದ್ದಾರೆ.

ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಚಿಕ್ಕೋಳಿ ಸೇತುವೆ ಮತ್ತು ಲೋಳಸೂರ ಸೇತುವೆಗಳು ಸದ್ಯಕ್ಕೆ ಮುಳುಗಡೆಯಾಗಿಲ್ಲ. ಮಳೆ ಹೀಗೆಯೇ ಮುಂದುವರೆದರೆ ಚಿಕ್ಕೋಳಿ ಸೇತುವೆ ಮುಳುಗಡೆಯಾಗುವ ಸಂಭವವಿದ್ದು, ಸಾರ್ವಜನಿಕರು ನದಿ ಹತ್ತಿರ ಹೋಗಬಾರದು ಎಂದು ಪೊಲೀಸರು ವಿನಂತಿಸಿಕೊಂಡಿದ್ದಾರೆ.

ನಗರದಲ್ಲಿ ಬಿಡದ ಮಳೆ: ಕಳೆದ ಎರಡ್ಮೂರು ದಿನಗಳಲ್ಲಿ ಅಲ್ಪ ಸ್ವಲ್ಪ ಮಳೆ ಬಿಳುತ್ತಿದ್ದ ಗೋಕಾಕ ತಾಲೂಕಿನಲ್ಲಿ ಗುರುವಾರ ಬೆಳಗಿನ ಜಾವದಿಂದ ಬೆಂಬಿಡದೆ ಮಳೆ ಸುರಿಯುತ್ತಿದೆ. ಸಾರ್ವಜನಿಕರು ಮಳೆಯಲ್ಲಿಯೇ ಸಂಚರಿಸುತ್ತಿರುವುದು ಸಾಮಾನ್ಯವಾಗಿತ್ತು. ಜಲಾಶಯಗಳಿಂದ ನೀರು ಹರಿಬಿಟ್ಟಿರುವ ಸುದ್ದಿ ತಿಳಿದ ಜನರು ನಗರದ ಚಿಕ್ಕಹೊಳಿ ಸೇತುವೆ, ಲೋಳಸೂರ ಸೇತುವೆ ಸೇರಿ ನಗರಕ್ಕೆ ಹೊಂದಿ ಕೊಂಡಿರುವ ವಿವಿಧ ಸೇತುವೆಗಳ ಬಳಿ ಜನರು ತಂಡೋಪ ತಂಡವಾಗಿ ವೀಕ್ಷಿಸುತ್ತಿದ್ದಾರೆ.

ಧುಮ್ಮಿಕ್ಕಿ ಹರಿಯುತ್ತಿರುವ ಗೋಕಾಕ ಫಾಲ್ಸ್: ಕಳೆದ ಒಂದು ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಗುರುವಾರದಂದು ಗೋಕಾಕ ಫಾಲ್ಸ್, ಗೋಡಚಿನಮಲ್ಕಿ ಫಾಲ್ಸ್ ತುಂಬಿ ಹರಿಯುತ್ತಿವೆ. ಕೆಂಪು ಮಿಶ್ರಿತ ಬಣ್ಣದಲ್ಲಿ ಮೈದುಂಬಿ ಹರಿಯುತ್ತಿರುವ ಈ ಅವಳಿ ಜಲಪಾತಗಳನ್ನು ವೀಕ್ಷಿಸಲು ಸಾವಿರಾರು ಜನ ಪ್ರವಾಸಿಗರು ಜಲಪಾತಗಳತ್ತ ಧಾವಿಸುತ್ತಿದ್ದಾರೆ.

PREV

Latest Stories

ಭೂಮಿ ಉಳುವಿಗಾಗಿ ರಸಗೊಬ್ಬರ ಬಳಸಬೇಡಿ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ
ಯಶಸ್ವಿ ಪ್ರದರ್ಶನದತ್ತ ‘ಜಂಗಲ್ ಮಂಗಲ್’: ರಕ್ಷಿತ್ ಕುಮಾರ್