ಮಲೆನಾಡಲ್ಲಿ ಮಳೆ ಅಬ್ಬರ: 6 ತಾಲೂಕುಗಳ ಶಾಲೆಗೆ ಇಂದು ರಜೆ

KannadaprabhaNewsNetwork | Published : Jul 26, 2024 1:31 AM

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ಗುರುವಾರವೂ ಮಳೆ ಆರ್ಭಟ ಜೋರಾಗಿತ್ತು. ದಟ್ಟವಾದ ಮಳೆ, ನಿರಂತರವಾಗಿ ಸುರಿಯುವ ಮಳೆ, ಭಾರೀ ಗಾಳಿಗೆ ಧರೆಗುರುಳುತ್ತಿರುವ ಮರ, ವಿದ್ಯುತ್‌ ಕಂಬಗಳು, ತುಂಬಿ ಹರಿಯುತ್ತಿರುವ ನದಿಗಳು, ಹಲವು ಪ್ರದೇಶಗಳು ಜಲಾವ್ರತವಾಗಿ ಇಡೀ ದಿನ ಕಾಫಿಯ ನಾಡಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು.

ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್‌.ಆರ್‌.ಪುರದಲ್ಲಿ ಶಾಲೆಗೆ ರಜೆ । ಹಲವೆಡೆ ಮರ ಬಿದ್ದು ರಸ್ತೆ ಸಂಚಾರ ವ್ಯತ್ಯಯ, ರಸ್ತೆಗಳು ಜಲಾವೃತ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ಗುರುವಾರವೂ ಮಳೆ ಆರ್ಭಟ ಜೋರಾಗಿತ್ತು. ದಟ್ಟವಾದ ಮಳೆ, ನಿರಂತರವಾಗಿ ಸುರಿಯುವ ಮಳೆ, ಭಾರೀ ಗಾಳಿಗೆ ಧರೆಗುರುಳುತ್ತಿರುವ ಮರ, ವಿದ್ಯುತ್‌ ಕಂಬಗಳು, ತುಂಬಿ ಹರಿಯುತ್ತಿರುವ ನದಿಗಳು, ಹಲವು ಪ್ರದೇಶಗಳು ಜಲಾವ್ರತವಾಗಿ ಇಡೀ ದಿನ ಕಾಫಿಯ ನಾಡಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು.

ಬುಧವಾರ ರಾತ್ರಿ ಆರಂಭವಾದ ಮಳೆ ಬಿಡುವು ಕೊಡುವ ಲಕ್ಷಣ ಕಾಣಲಿಲ್ಲ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗುರುವಾರ ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಎನ್‌.ಆರ್‌.ಪುರ ಹಾಗೂ ಕೊಪ್ಪ ತಾಲೂಕುಗಳ ಅಂಗನವಾಡಿ ಹಾಗೂ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿತ್ತು. ಗುರುವಾರವೂ ಬಿಡುವಿಲ್ಲದೆ ಧಾರಾಕಾರವಾಗಿ ಮಳೆ ಮುಂದುವರಿದಿದ್ದರಿಂದ ಶುಕ್ರವಾರವೂ ಇದೇ 6 ತಾಲೂಕುಗಳಿಗೆ ಅನ್ವಯವಾಗುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಸತತ 2 ದಿನ ಸುರಿದ ಮಳೆಗೆ ಮಲೆನಾಡಿನ 6 ತಾಲೂಕುಗಳಲ್ಲಿ ಹಲವೆಡೆ ಅವಾಂತರ ಸಂಭವಿಸಿದೆ. ಚಿಕ್ಕಮಗಳೂರು- ಮೂಡಿಗೆರೆ ರಸ್ತೆಯ ಹಾಂದಿ, ಕಬ್ಬಿಣ ಸೇತುವೆ, ಮಾವಿನಹಳ್ಳಿ ಗ್ರಾಮಗಳ ಬಳಿ ಸುಮಾರು 3-4 ಮರಗಳು ರಸ್ತೆಯ ಉದ್ದಕ್ಕೂ ಬೆಳಿಗ್ಗೆ ಬಿದ್ದಿದ್ದರಿಂದ 2 ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಕೂಡಲೇ ಕಾರ್ಯಾ ಚರಣೆ ನಡೆಸಿ ಮರಗಳನ್ನು ತೆರವುಗೊಳಿಸಲಾಯಿತು. ಕಳಸ, ಶೃಂಗೇರಿ ತಾಲೂಕುಗಳಲ್ಲಿ ಧಾರಾಕಾರ ಮಳೆ ಬೀಳುತ್ತಿರುವ ಪರಿಣಾಮ ತುಂಗಾ ನದಿ ನೀರಿನ ಮಟ್ಟ ಮತ್ತೆ ಏರಿಕೆಯಾಗಿದೆ. ಕುರುಬಗೇರಿ, ಗಾಂಧಿ ಮೈದಾನ, ಕೆವಿಆರ್‌ ವೃತ್ತದ ಬೈಪಾಸ್‌ ರಸ್ತೆಗಳ ಮೇಲೆ ಪ್ರವಾಹದಿಂದ ನೀರು ಬಂದಿತ್ತು. ಈ ರಸ್ತೆಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.

ಎನ್‌.ಆರ್‌.ಪುರ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವ ಪರಿಣಾಮ ಹಲವೆಡೆ ಮರಗಳು ಬಿದ್ದಿವೆ. ಮನೆಗಳಿಗೂ ಹಾನಿ ಸಂಭವಿಸಿದೆ. ಇಲ್ಲಿನ ನೇರ್ಲೆಕೊಪ್ಪ, ಬಣಗಿ, ಮಂಜಿಕೊಪ್ಪ ಸೇತುವೆಗಳ ಮೇಲೆ ಹಳ್ಳಗಳ ನೀರು ಹರಿಯುತ್ತಿದೆ. ಕಳಸ ತಾಲೂಕಿನಲ್ಲೂ ಮಳೆ ಅಬ್ಬರ ಜೋರಾಗಿದ್ದು, ಕಳಸ- ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ್ ಸೇತುವೆ ಭದ್ರಾ ನದಿ ನೀರಿ ನಿಂದಾಗಿ ಮುಳುಗಡೆಯಾಗಿತ್ತು. ಇಲ್ಲಿ ಯಾವುದೇ ವಾಹನ ಓಡಾಡದಂತೆ ಪೊಲೀಸರು ಬ್ಯಾರಿಕೇಡ್‌ ಹಾಕಿ, ಅಲ್ಲೇ ವಾಸ್ತವ್ಯ ಹೂಡಿದ್ದಾರೆ.

ಕೊಪ್ಪ ತಾಲೂಕಿನ ನಾರ್ವೆ ಬಳಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಆದ್ದರಿಂದ ಈ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಮ್ಮರಡಿ ಸರ್ಕಾರಿ ಶಾಲೆ ಕಾಂಪೌಂಡ್‌ ಬಿದ್ದಿದೆ. ದೇವಗೋಡು ಗ್ರಾಮದ ಗೋಶಾಲೆ ಹಾಗೂ ಕಾರ್‌ಗದ್ದೆಯ ಲಕ್ಷ್ಮಿಅವರಿಗೆ ಸೇರಿದ ಮನೆಗಳ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ.

ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಧಾರಾಕಾರ ಮಳೆಯಾಗಿದೆ. ಗಿರಿ ಪ್ರದೇಶದಲ್ಲಿ ಧರೆ ಕುಸಿತ ಉಂಟಾಗಿರುವ ಜತೆಗೆ ಕೆಲವೆಡೆ ಮರಗಳು ಬಿದ್ದಿವೆ. ಆದ್ದರಿಂದ ಮಲೆನಾಡಿನ ಹಲವು ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದಂತಾಗಿದೆ. ನಗರ ಪ್ರದೇಶದಲ್ಲೂ ಆಗಾಗ ವಿದ್ಯುತ್‌ ಅಡಚಣೆ ಆಗುತ್ತಿತ್ತು.

ತರೀಕೆರೆ, ಕಡೂರು ಹಾಗೂ ಅಜ್ಜಂಪುರಗಳಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ತರೀಕೆರೆಯ ಕೆಲವೆಡೆ ಮಳೆಗೆ ಮನೆಗಳು ಬಿದ್ದು ಹಾನಿ ಸಂಭವಿಸಿದೆ. ಗುರುವಾರ ರಾತ್ರಿ ನಂತರವೂ ಮಳೆ ಮುಂದುವರಿದಿತ್ತು. ಹಾಗಾಗಿ ಮುಂದಿನ 24 ಗಂಟೆಗಳಲ್ಲಿ ತುಂಗಾ, ಭದ್ರಾ ಹಾಗೂ ಹೇಮಾವತಿ ಜಲಾಶಯಗಳಲ್ಲಿ ನೀರಿನ ಒಳ ಹರಿವು ಏರಿಕೆಯಾಗಲಿದೆ.

25 ಕೆಸಿಕೆಎಂ 5ಕಳಸ - ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ್‌ ಸೇತುವೆ ಮುಳುಗಡೆಯಾಗಿರುವುದು.

- 25 ಕೆಸಿಕೆಎಂ 6ಕೊಪ್ಪ ತಾಲೂಕಿನ ನಾರ್ವೆ ಬಳಿ ಗುರುವಾರ ಮತ್ತಷ್ಟು ಕುಸಿದ ರಸ್ತೆ. 25 ಕೆಸಿಕೆಎಂ 7ಚಿಕ್ಕಮಗಳೂರು- ಮೂಡಿಗೆರೆ ರಸ್ತೆಯಲ್ಲಿರುವ ಮಾವಿನಹಳ್ಳಿ ಬಳಿ ರಸ್ತೆಗೆ ಬಿದ್ದಿರುವ ಮರ.

Share this article