ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಪಾರದರ್ಶಕವಾಗಿ ಹಾಗೂ ದೋಷರಹಿತವಾಗಿ ಕೈಗೊಳ್ಳುವ ಉದ್ದೇಶದಿಂದ ಚುನಾವಣಾ ಆಯೋಗದ ನಿರ್ದೇಶನದಂತೆ ಬೂತ್ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರ್‌ಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ತಾಲೂಕಿನ ವಿವಿಧ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಪ್ರಕ್ರಿಯೆ ವೀಕ್ಷಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು, ಮತದಾರ ಪಟ್ಟಿ ಚುನಾವಣಾ ಪ್ರಕ್ರಿಯೆಯ ಮೂಲಾಧಾರವಾಗಿದ್ದು, ಅರ್ಹ ಮತದಾರರ ಹೆಸರು ಸೇರ್ಪಡೆ, ಮೃತ ಹಾಗೂ ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು ಕೈಬಿಡುವಿಕೆ ಸೇರಿದಂತೆ ಇತರೆ ಎಲ್ಲ ಕಾರ್ಯಗಳನ್ನು ನಿಯಮಾನುಸಾರ ಮತ್ತು ನಿಖರವಾಗಿ ನಿರ್ವಹಿಸುವಂತೆ ಸೂಚನೆ ನೀಡಿದರು. ಇದಕ್ಕಾಗಿ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆದು ಪರಿಷ್ಕರಣ ಕಾರ್ಯವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.ಜೂನ್ 30 ರಿಂದ ಜುಲೈ 29ರವರೆಗೆ ಒಂದು ತಿಂಗಳುಗಳ ಕಾಲ ನಡೆಯಲಿರುವ ಮನೆ ಮನೆ ಸಮೀಕ್ಷೆ ವೇಳೆ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಗದಿತ ಅವಧಿಯೊಳಗೆ ಕಾರ್ಯಪೂರ್ಣಗೊಳಿಸಬೇಕೆಂದು ಹೇಳಿದರು.ಜಿಲ್ಲಾಧಿಕಾರಿ ಸಂಗಪ್ಪ ಅವರು ಬಾದಾಮಿ ನಗರದ ವೀರಪುಲಕೇಶಿ ಶಾಲೆಯ ಸಭಾಭವನ, ಹುನಗುಂದ ನಗರದ ಸರಕಾರಿ ಪ್ರಥಮ ದರ್ಜೆಕಾಲೇಜಿನ ಸಭಾಭವನ ಹಾಗೂ ಬಾಗಲಕೋಟೆ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ನಡೆದ ಎಸ್.ಐ.ಆರ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪ್ರಕ್ರಿಯೆ ವೀಕ್ಷಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಬೀಳಗಿ, ತೇರದಾಳ, ಮುಧೋಳ, ಜಮಖಂಡಿ ಹಾಗೂ ರಬಕವಿ-ಬನಹಟ್ಟಿಗೆ ಭೇಟಿ ನೀಡಿ ಎಸ್.ಐ.ಆರ್ ತರಬೇತಿ ಪ್ರಕ್ರಿಯೆ ಪರಿಶೀಲಿಸಿದರು.