ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಬುದ್ಧನ ವಿಗ್ರಹ ವಿರೂಪ ಹಾಗೂ ಅಂಬೇಡ್ಕರ್ ಫ್ಲೆಕ್ಸ್ ಹರಿದು ಹಾಕಿರುವ ಪ್ರಕರಣ ಬಂಧಿತ ವ್ಯಕ್ತಿಗೆ ಸಂಬಂಧಿಸಿದ್ದೇ ಹೊರತು ಸಮಾಜಕ್ಕಲ್ಲ. ಯಾವುದೇ ಸಮುದಾಯಕ್ಕೂ ಬೆರಳು ತೋರಿಸಿಲ್ಲ ಎಂದು ಎಸ್ಪಿ ಕವಿತಾ ಸ್ಪಷ್ಠಪಡಿಸಿದರು.ನಗರದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಸಮಾಜದ ವಿಚಾರ ಬಂದಾಗ ಸೂಕ್ಷ್ಮವಾಗಿ ಪೊಲೀಸ್ ಇಲಾಖೆ ಕೈಗೆತ್ತಿಕೊಳ್ಳುತ್ತದೆ. ಸಾಕ್ಷಿ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಿದೆ ಎಂದರು.
ಜ್ಯೋತಿಗೌಡನಪುರ ಪ್ರಕರಣದಲ್ಲಿ 11ನೇ ದಿನಕ್ಕೆ ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ. ಬೈಕ್ ನಂಬರ್ ಸಿಗದ ಕಾರಣ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಎಎನ್‌ಪಿಆರ್ 1 ಕ್ಯಾಮೆರಾ ಇಲ್ಲ, ತಂತ್ರಜ್ಞಾನದಲ್ಲಿ ಮೈಸೂರು ನಮಗಿಂತ ಮುಂದೆಯಿದ್ದರೂ ನಮ್ಮಷ್ಟು ಬೇಗ 11 ದಿನಕ್ಕೆ ಆರೋಪಿಯನ್ನು ಬಂಧಿಸಿರುವ ಪ್ರಕರಣವಿಲ್ಲ, ಸಾಕ್ಷಿ ಸಿಕ್ಕಿರುವ ಕಾರಣ ಆರೋಪಿಯನ್ನು ಬಂಧಿಸಲಾಗಿದೆ ಎಂದರು.ಒಬ್ಬ ಆರೋಪಿ ಕೃತ್ಯ ಮಾಡಿಲ್ಲ ಎಂದು ಮುಖಂಡರು ಆರೋಪಿಸುತ್ತಿದ್ದು, ಪೊಲೀಸರಿಗಿಂತ ಮುಂಚೆ ಮುಖಂಡರಿಗೆ ಹೇಗೆ ಗೊತ್ತಾಗುತ್ತದೆ. ಆರೋಪಿ ಜೊತೆ ಯಾರ್‍ಯಾರು ಈ ಕೃತ್ಯ ಎಸಗಿದ್ದಾರೆ ಎಂಬ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಎಲ್ಲೂ ತಿರುಚಲು ಸಾಧ್ಯವಿಲ್ಲ ಎಂದರು.
ಸಾಕ್ಷ್ಯ ಇಲ್ಲದೇ ಯಾರನ್ನೂ ಬಂಧಿಸಲ್ಲ, ಬಂಧಿತ ವ್ಯಕ್ತಿ ಯಾವ ಸಮುದಾಯದವನು ಮತ್ತು ಯಾವ ಗ್ರಾಮದವನು ಎಂದು ಗುರುತಿಸಲಾಗುತ್ತದೆ. ನಮ್ಮ ದೇಶದಲ್ಲಿ ಬೇರೆ ಯಾವ ರೀತಿಯಲ್ಲೂ ವ್ಯಕ್ತಿಯ ಐಡೆಂಟಿಟಿ ಇಲ್ಲ. ಆದ್ದರಿಂದ ಸಮುದಾಯದ ಹೆಸರು ಮಾಧ್ಯಮದವರಿಗೆ ಹೇಳಲಾಗಿದೆ. ಹೊರತು ಸಮುದಾಯದವರು ಮಾಡಿದ್ದಾರೆ ಎಂದು ಹೇಳಲಾಗಿಲ್ಲ, ಯಾವುದೇ ಸಮುದಾಯಕ್ಕೂ ಬೆರಳು ತೋರಿಸಿಲ್ಲ ಎಂದರು.ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಅದರಿಂದ ಪ್ರತಿಭಟನೆ ಮಾಡಿದ್ದಾರೆ. ನಾಯಕ ಸಮುದಾಯದ ಮುಖಂಡರ ಹೇಳಿಕೆ ಪರ ಹಾಗೂ ವಿರುದ್ದ ಪತ್ರಿಕಾಗೋಷ್ಠಿ ಮಾಡಲಾಗಿದೆ. ಮುಖಂಡರು ಮಾನನಷ್ಠ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಹಾಕಿಕೊಳ್ಳಬಹುದು. ಪೊಲೀಸರು ಜ್ಯೋತಿಗೌಡನಪುರ ಘಟನೆ ಸಂಬಂಧ ಸಾಕ್ಷ್ಯಿಗಳಿದ್ದರೆ ಮಾತ್ರ ತನಿಖೆ ನಡೆಸಿ ಬಂಧಿಸಲಾಗುವುದು ಎಂದರು.
ಮುಖಂಡರು ಮಾತನಾಡಿ, ದಲಿತರಿಗೆ ನ್ಯಾಯ ಕೊಡಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಇದುವರೆಗೂ ವಿಫಲವಾಗಿದೆ. 10 ವರ್ಷದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಒಂದಕ್ಕೂ ನ್ಯಾಯ ಸಿಕ್ಕಿಲ್ಲ, ಎಲ್ಲಾ ಪ್ರಕರಣಗಳು ರಾಜಕೀಯ ಒತ್ತಡದಲ್ಲಿ ನಡೆಯುತ್ತಿದೆ ಸರಿಯಾದ ರೀತಿಯಲ್ಲಿ ಶಿಕ್ಷೆಯಾಗಿಲ್ಲ ಎಂದರು.ಪೊಲೀಸ್ ಠಾಣೆಗಳಲ್ಲಿ ಗ್ರೀನ್ ಬಾರ್‌ಕೋಡ್ ಸ್ಕ್ಯಾನರ್‌ಗಳನ್ನು ಹಾಕಬೇಕು ಎಂದು ಕಳೆದ ಸಭೆಯಲ್ಲಿ ಕೊರಲಾಗಿತ್ತು. ಆದರೆ ಜಿಲ್ಲೆಯ ಒಂದೇ ಒಂದು ಠಾಣೆಯಲ್ಲಿ ಮಾತ್ರ ಹಾಕಲಾಗಿದೆ. ಎಲ್ಲಾ ಠಾಣೆಗಳಲ್ಲೂ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮುಖಂಡರಾದ ದೊಡ್ಡಿಂದುವಾಡಿ ಸಿದ್ದರಾಜು, ಅಂಬರೀಶ್, ಭಾನುಪ್ರಕಾಶ್, ಮುತ್ತಿಗೆ ಮೂರ್ತಿ, ವಿರಾಟ್ ಶಿವು, ಬೈರಲಿಂಗಸ್ವಾಮಿ, ವಾಸು, ಹರದನಹಳ್ಳಿ ನಾಗರಾಜು, ಸಿ.ಕೆ ಮಂಜುನಾಥ್, ಶಕುಂತಲ, ಡಿವೈಎಸ್ಪಿ ಸ್ನೇಹರಾಜ್, ಧರ್ಮೇಂದ್ರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಇದ್ದರು.