ಬಸವ ಜಯಂತಿ ಆಚರಣೆ ಎಂದರೆ ಸಮಸ್ತ ಮನುಕುಲ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು
ಗದಗ: ಲಿಂಗ, ಜಾತಿ ಭೇದದಿಂದ ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣಗೊಳ್ಳುತ್ತಿರುವುದು ಕಂಡು ಬರುತ್ತಿದೆ. ಮನುಷ್ಯ ಕುಲ ಒಂದೇ ಎಂದು ಸಾರುವ ಮೂಲಕ ಸಮಸ್ತ ಮನುಷ್ಯರು ಯಾರೂ ಮೇಲಲ್ಲ ಕೀಳಲ್ಲ ಎಂದು ಬಸವಣ್ಣನವರು ಸಾಮರಸ್ಯ ಬದುಕಿಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಸುಮಿತ್ರಾ ಶಿವಶಂಕರ ಕೋತಂಬರಿ ಹೇಳಿದರು.
ಅವರು ನಗರದ ಅಬ್ದುಲ್ ಕಲಾಂ ಶಾದಿಮಹಲ್ ಎದುರಿಗಿನ ಶಿವಬಸವ ನಗರದ ಶಿವಬಸವ ಸುಧಾರಣಾ ಸಮಿತಿ ಹಾಗೂ ಶಿವಬಸವ ನಗರ ಮಹಿಳಾ ಮಂಡಳ ಆಶ್ರಯದಲ್ಲಿ ಶಿವಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಏರ್ಪಡಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ಸನ್ಮಾರ್ಗ ಇಂದಿಗೂ ಪ್ರಸ್ತುತ. ಎಲ್ಲ ಧರ್ಮಿಯರನ್ನು ಸಮಾನವಾಗಿ ಕಾಣುವ ಮಹಾನ್ ಕನಸುಗಾರ ಬಸವಣ್ಣನವರು. ಅಂತಹ ಶರಣರ ಸ್ಮರಣೆ ತತ್ವಗಳ ಪರಿಪಾಲನೆ ಇಂದಿನ ಅಗತ್ಯ. ಬಸವ ಜಯಂತಿ ಆಚರಣೆ ಎಂದರೆ ಸಮಸ್ತ ಮನುಕುಲ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬರಬೇಕು. ಅವರ ತತ್ವಾದರ್ಶ ಪಾಲನೆ ಮಾಡುವ ಮೂಲಕ ಮನುಷ್ಯ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಸಮಿತಿಯ ಗೌರವಾಧ್ಯಕ್ಷ ಎಂ.ಟಿ .ಸೋರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು , ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಶಿವಬಸವ ಸುಧಾರಣಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಶಿವಶಂಕರ ಕೋತಂಬರಿ, ಸಾಹಿತಿ ಐ. ಕೆ. ಕಮ್ಮಾರ ಮುಂತಾದವರು ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.