ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕೃಷ್ಣಾ ಕಣಿವೆ ಪ್ರದೇಶಗಳಲ್ಲಿ ಸುರಿಯುತ್ತಿದ್ದ ಧಾರಾಕಾರ ಮಳೆಯಲ್ಲಿ ಇಳಿಮುಖವಾದ್ದರಿಂದ ಸೋಮವಾರ ರಾಯಾಪುರ ಜಲಾಶಯದಿಂದ ೧,೧೫,೪೧೭ ಕ್ಯುಸೆಕ್, ಸದಲಗಾ ೩೧,೬೮೦ ಕ್ಯುಸೆಕ್, ಕಲ್ಲೋಳ ಬ್ಯಾರೇಜ್‌ನಿಂದ ೧,೪೭೦೯೭ ಕ್ಯುಸೆಕ್ ನೀರು ಕೃಷ್ಣೆಯ ಒಡಲು ಸೇರುತ್ತಿದ್ದು, ಭಾಕ್ವಾರಕ್ಕಿಂತ ೨,೧೩,೪೯ ಕ್ಯುಸೆಕ್ ಹೊರಹರಿವು ಕಡಿಮೆಯಾಗಿದೆ. ಕೊಯ್ನಾ ೧೪, ನವಜಾ ೧೬, ಮಹಾಬಲೇಶ್ವರ ೧೮ ಮಿ.ಮೀ. ಮಳೆಯಾಗುತ್ತಿದ್ದು, ಹಿಪ್ಪರಗಿ ಜಲಾಶಯಕ್ಕೆ ೨,೦೨,೦೦೦ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ೨,೦೧,೨೫೦ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ ಎಂದು ಎಸಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.ಕೃಷ್ಣೆಯ ನೀರಿನ ಸೆಳೆತ ಹಿಂದಿನಂತೆ ತೀವೃವಿದ್ದು, ಜನ-ಜಾನುವಾರು ನದಿ ಪಾತ್ರದತ್ತ ತೆರಳದೇ ಸುರಕ್ಷಿತ ಸ್ಥಳದಲ್ಲಿ ನೆಲೆಸಲು ಎಚ್ಚರಿಸಲಾಗಿದೆ. ಕ್ಷಣಕ್ಷಣದ ನೀರಿನ ಮಟ್ಟ ಗಮನಿಸಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳನ್ನು ನಿಯುಕ್ತಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಕೃಷ್ಣಾ ಕಣಿವೆ ಪ್ರದೇಶದಲ್ಲಿ ಮಳೆ ಇನ್ನಷ್ಟು ಕ್ಷೀಣಿಸುವ ನಿರೀಕ್ಷೆಯಿದೆ.
ಘಟಪ್ರಭಾ ನದಿ ಪ್ರವಾಹ ಯಥಾ ಸ್ಥಿತಿಯಲ್ಲಿದ್ದು, ಮಿರ್ಜಿ-ಅಕ್ಕಿಮರಡಿ ಪ್ರದೇಶಗಳು ಸೇರಿದಂತೆ ಅಗತ್ಯ ಮುಳುಗಡೆ ಪ್ರದೇಶಗಳಲ್ಲಿ ಗಂಜಿಕೇಂದ್ರ ಆರಂಭಿಸಲಾಗಿದೆ. ನದಿ ಪಾತ್ರದ ಢವಳೇಶ್ವರ, ಮಿರ್ಜಿ, ಚನಾಳ, ಉತ್ತೂರ-ಜಾಲಿಬೇರ, ಮುಧೋಳ, ಜೀರಗಾಳ, ಇಂಗಳಗಿ, ಜಂಬಗಿ ಕೆ.ಡಿ., ಕಸಬಾ ಜಂಬಗಿ, ತಿಮ್ಮಾಪುರ, ಮಾಚಕನೂರ, ಆಲಗುಂಡಿ ಬಿ.ಕೆ.ಸೇತುವೆಗಳು ಮುಳುಗಡೆಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ ಎಂದು ಎಸಿ ಶ್ವೇತಾ ತಿಳಿಸಿದ್ದಾರೆ.ಮುಂದುವರಿದ ರೈತರ ಗೋಳು:
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಕೃಷ್ಣೆಯ ಅಬ್ಬರ ತಗ್ಗುತ್ತಿದ್ದರೂ ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನ-ಜಾನುವಾರುಗಳ ತಾಪತ್ರಯ ಮುಂದುವರಿದಿದೆ.ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿ ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡಿದೆ. ನದಿಪಾತ್ರದ ಜನರು ಮುಂಜಾಗ್ರತೆ ಕ್ರಮವಾಗಿ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಸುತ್ತಲಿನ ಗ್ರಾಮಗಳ ಜಮೀನುಗಳಲ್ಲಿನ ಬೆಳೆ ಸಂಪೂರ್ಣ ನಾಶವಾಗಿವೆ. ನದಿ ತಟದಲ್ಲಿರುವ ರೈತರು ಜಮೀನಿನಲ್ಲಿರುವ ಮೋಟಾರ್ ಪಂಪಸೆಟ್ ಸೇರಿದಂತೆ ಇತರೆ ಸಾಮಗ್ರಿಗಳನ್ನು ತೆಪ್ಪದ ಮೇಲೆ ಸ್ಥಳಾಂತರಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ.