ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ದಿಢೀರ್ ಮೇಘಸ್ಫೋಟ ಸದೃಶ ಹಠಾತ್‌ ಪ್ರವಾಹ!

KannadaprabhaNewsNetwork |  
Published : Oct 07, 2024, 01:41 AM ISTUpdated : Oct 07, 2024, 08:24 AM IST
ತೋಟಹಳಿಗೆ ನೀರು ನುಗ್ಗಿರುವುದು. | Kannada Prabha

ಸಾರಾಂಶ

ಕಬ್ಬಿನಾಲೆಯ ಬಮ್ಮಗುಂಡಿ ನದಿಯಲ್ಲಿ ಹಠಾತ್‌ ಜಲಪ್ರವಾಹದ ಪರಿಣಾಮ ಮನೆಗಳಿಗೆ ಹಾಗೂ ಕೃಷಿ ಜಮೀನಿಗೆ ನೀರು ನುಗ್ಗಿ ಭಾರಿ ಆವಾಂತರ ಸೃಷ್ಟಿಯಾದ ಘಟನೆ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಲಾಡಿಯಲ್ಲಿ ಭಾನುವಾರ ಅಪರಾಹ್ನ ನಡೆದಿದೆ.

  ಕಾರ್ಕಳ : ಕಬ್ಬಿನಾಲೆಯ ಬಮ್ಮಗುಂಡಿ ನದಿಯಲ್ಲಿ ಹಠಾತ್‌ ಜಲಪ್ರವಾಹದ ಪರಿಣಾಮ ಮನೆಗಳಿಗೆ ಹಾಗೂ ಕೃಷಿ ಜಮೀನಿಗೆ ನೀರು ನುಗ್ಗಿ ಭಾರಿ ಆವಾಂತರ ಸೃಷ್ಟಿಯಾದ ಘಟನೆ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾ.ಪಂ. ವ್ಯಾಪ್ತಿಯ ಬಲ್ಲಾಡಿಯಲ್ಲಿ ಭಾನುವಾರ ಅಪರಾಹ್ನ ನಡೆದಿದೆ.

ಹಠಾತ್‌ ಪ್ರವಾಹ ಪರಿಣಾಮ ಹತ್ತಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಎರಡು ಕಾರು ಎರಡು ಬೈಕ್‌ಗಳು ಸೇರಿದಂತೆ 4 ವಾಹನಗಳು ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಭಾರಿ ಹಾನಿ: ಭಾರಿ ಮಳೆಗೆ ಬಮ್ಮಗುಂಡಿ ನದಿಯ ಸುತ್ತಮುತ್ತಲಿನ ಪ್ರದೇಶದ ಒಟ್ಟು 150 ಎಕರೆ ಕಟಾವಿಗೆ ಬಂದಿದ್ದ ಬತ್ತ, ರಬ್ಬರ್, ಅಡಕೆ, ತೆಂಗು, ಬಾಳೆ ತೋಟ ಸಂಪೂರ್ಣ ನಾಶವಾಗಿದೆ.

ಮೇಘ ಸ್ಫೋಟದ ಶಂಕೆ: ಪಶ್ಚಿಮಘಟ್ಟಗಳ ಸಾಲಿನಲ್ಲಿ ಮಧ್ಯಾಹ್ನ 2.30ರ ವೇಳೆಗೆ ಭಾರಿ ಸಿಡಿಲು ಗಾಳಿಯಿಂದ ಕೂಡಿದ ಮಳೆ ಸುರಿದಿದೆ. ನದಿಯಲ್ಲಿ ಹಠಾತ್‌ ಆಗಿ ಕೆಸರು ಮಿಶ್ರಿತ ನೀರು ಏರಿಕೆಯಾಯಿತು. ನೀರು ಮನೆಗಳ ಅಂಗಳಕ್ಕೆ ನುಗ್ಗಿದ್ದು, ಹೊಸಕಂಬದ ಕೃಷ್ಣ ಪೂಜಾರಿ ಅವರ ಕಾರು ಹಾಗೂ ಪಕ್ಕದ ಕೇರಳ ಮೂಲದ ಕುಟುಂಬ ನಿಲ್ಲಿಸಿದ್ದ ಕಾರು, ಎರಡು ಬೈಕ್‌ಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ.

ಮಧ್ಯಾಹ್ನ 2.25ಕ್ಕೆ ಆರಂಭವಾದ ಮಳೆ 5 ಗಂಟೆ ವರೆಗೆ ಮುಂದುವರಿದಿತ್ತು. ಕೇವಲ 2.50 ಗಂಟೆಯಲ್ಲಿ ಅಂದಾಜು ಒಟ್ಟು 18 ಸೆಂಟಿ ಮೀಟರ್‌ ಮಳೆ ಸುರಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಬ್ಬಿನಾಲೆ ತಿಂಗಳಮಕ್ಕಿ ಪ್ರದೇಶಗಳಲ್ಲಿ ಮೇಘ ಸ್ಫೋಟವಾಗಿದೆಯೇ ಅಥವಾ ಗುಡ್ಡ ಜರಿದಿದೆಯೇ ಎಂಬ ಕುರಿತು ಖಚಿತ ಮಾಹಿತಿ ಲಭಿಸಿಲ್ಲ. ಜೀವಮಾನದಲ್ಲಿ ಈ ಭಾಗದಲ್ಲಿ ಇಂತಹ ಭೀಕರ ಪ್ರವಾಹ ನಾವು ನೋಡಿಲ್ಲವೆಂದು ಸ್ಥಳೀಯ ಹಿರಿಯರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಹಠಾತ್ ನೆರೆಯಿಂದ ನಾಗರಿಕರು ಆತಂಕಗೊಂಡಿದ್ದಾರೆ. ಈ ಪರಿಸದಲ್ಲಿ ಭಾರಿ ಗಾಳಿಗೆ ಮರಗಳು ಬಿದ್ದಿದ್ದು 25ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ವಿದ್ಯುತ್‌ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

ಓಟಕ್ಕಿತ್ತ ಪ್ರವಾಸಿಗರು: ಕಬ್ಬಿನಾಲೆ ಅಬ್ಬಿ ಜಲಪಾತ ವೀಕ್ಷಿಸುತಿದ್ದ ವೇಳೆ ಜಲಪಾತದ ನೀರು ಭಾರಿ ಏರಿಕೆಯಾಯಿತು ಹಾಗೂ ಒಮ್ಮೆಲೆ ಸುರಿದ ಭಾರಿ ಮಳೆಯನ್ನು ಗಮನಿಸಿ ಪ್ರವಾಸಿಗರು ಓಟಕ್ಕಿತ್ತಿದ್ದಾರೆ.

ಪ್ರವಾಹವನ್ನು ನೋಡಿ ನಮ್ಮ ಜೀವ ಉಳಿಸುವುದೇ ಬಲುದೊಡ್ಡ ಸಾಹಸವಾಗಿತ್ತು ಎಂದು ಪ್ರವಾಸಿಗ ಕುಂದಾಪುರದ ಪ್ರದೀಪ್‌ ತಿಳಿಸಿದ್ದಾರೆ.ಕಬ್ಬಿನಾಲೆ ಸೇತುವೆ ಮೇಲೆಯೂ ಪ್ರವಾಹದ ನೀರು ಹರಿದಿದ್ದು ಸಂಪೂರ್ಣ ಜಲಾವೃತವಾಗಿತ್ತು.

ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಪಂಚಾಯಿತಿ ಸದಸ್ಯರು, ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಕುಕ್ಕುಜೆ ಸ್ಥಳದಲ್ಲಿದ್ದಾರೆ. ಅಪಾರ ಹಾನಿ ಸಂಭವಿಸಿದೆ. ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಬದಲಿ ರಸ್ತೆ ಮೂಲಕ ಸಂಚರಿಸುತ್ತಿದ್ದಾರೆ. ಒಂದು ದನದ ಹಟ್ಟಿಯೂ ಬಿದ್ದಿದೆ.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ