ಹೊನ್ನಾವರದಲ್ಲಿ ಪ್ರವಾಹ ಭೀತಿ

KannadaprabhaNewsNetwork |  
Published : Jun 17, 2025, 01:07 AM IST
ಅ | Kannada Prabha

ಸಾರಾಂಶ

ಗಾಳಿ ಸಹಿತ ಮಳೆ ಬಿದ್ದಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಕೆಲವು ಅನಾಹುತಗಳು ಸಂಭವಿಸಿವೆ.

ಹೊನ್ನಾವರ: ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಭಾನುವಾರ ರಾತ್ರಿಯಿಂದ ಬೆಳಿಗ್ಗೆವರೆಗೂ ಗಾಳಿ ಸಹಿತ ಮಳೆ ಬಿದ್ದಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಕೆಲವು ಅನಾಹುತಗಳು ಸಂಭವಿಸಿವೆ.ಭಾಸ್ಕೇರಿ ಹಾಗೂ ಹಡಿನಬಾಳ, ಗುಂಡಬಾಳ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ. ಭಾಸ್ಕೇರಿ ಮತ್ತು ಗುಂಡಬಾಳ ನದಿ ನೀರಿನ ಮಟ್ಟ ಏರಿಕೆಯಾಗಿ ಕೃಷಿ ಜಮೀನು ಮತ್ತು ತೋಟಗಳಿಗೆ ನೀರು‌ ನುಗ್ಗಿದೆ. ಪ್ರತಿ ವರ್ಷವೂ ಗುಂಡಬಾಳ ಮತ್ತು ಭಾಸ್ಕೇರಿ ಹೊಳೆಯಲ್ಲಿ ನೀರು ನುಗ್ಗಿ ಪ್ರವಾಹ ಬರುತ್ತದೆ. ಪ್ರತಿ ವರ್ಷವೂ ಶಾಶ್ವತ ಪರಿಹಾರಕ್ಕೆ ಅಲ್ಲಿನ ಜನ ಆಡಳಿತ ವರ್ಗದವರ ಬಳಿ ಅಂಗಲಾಚುವುದು ತಪ್ಪಿಲ್ಲ. ಜುಲೈ ಸುಮಾರಿಗೆ ಪ್ರವಾಹದ ಭೀತಿ ಎದುರಾಗಿ ಜನರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗುತ್ತಿತ್ತು. ಆದರೆ ಈ ಬಾರಿ ಜೂನ್ ನಲ್ಲಿಯೇ ಪ್ರವಾಹದ ಭೀತಿ ನದಿ ತೀರದ ಜನರಲ್ಲಿ ಮೂಡಿದೆ.

ಸಿದ್ದಾಪುರ, ಜನಕಡ್ಕಲ್ ಭಾಗದಲ್ಲಿ ಮಳೆ ಜಾಸ್ತಿ ಆದ ಕಾರಣ ಗುಂಡಬಾಳ ನದಿಯಲ್ಲಿ ನೀರು ಹರಿವು ಹೆಚ್ಚಳವಾಗಿದೆ. ಗುಂಡಿಬೈಲ್ ಹಿತ್ಲಕೇರಿ, ಚಿಕ್ಕನಕೋಡ ಹಿತ್ಲಕೇರಿ, ಮುಟ್ಟಾ, ಹೆಬೈಲ್, ಕೆಂಚಗಾರ, ಚಿಕ್ಕನಕೋಡ, ಗುಂಡಬಾಳ ದೇವಸ್ಥಾನ ಕೇರಿ, ಹಡಿನಬಾಳ ಗ್ರಾಮ ಪಂಚಾಯತ ವ್ಯಾಪ್ತಿಯ ನದಿ ಅಂಚಿನ ಕೆಲವೆಡೆ ತೋಟಕ್ಕೆ, ಮನೆಯ ಅಂಗಳಕ್ಕೆ ನೀರು ನುಗ್ಗಿದೆ. ಇದೇ ರೀತಿ ಮಳೆ ಹೆಚ್ಚಾದಲ್ಲಿ ನೀರಿನ ಹರಿವು ಹೆಚ್ಚಾದಂತೆ ಮನೆಯ ಒಳಗೆ ಹೋಗುವ ಸಾಧ್ಯತೆ ಇದೆ.

ನೆರೆ ಬಂದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮವಾಗಿ ತಾಲೂಕಾ ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.ಬಾಳೆಗದ್ದೆಯಲ್ಲಿ ಬೃಹತ್ ಮರವೊಂದು ಸೋಮವಾರ ಬೆಳಗ್ಗಿನ ಜಾವದಲ್ಲಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಮರ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು.ಆದರೆ ಸ್ಥಳೀಯರು ಮತ್ತು ಅಧಿಕಾರಿಗಳ ಜವಾಬ್ದಾರಿಯುತ ಕಾರ್ಯದ ಹಿನ್ನೆಲೆ ಬೆಳಗ್ಗೆ ೭.೩೦ರ ಒಳಗಾಗಿ ಬಿದ್ದ ಮರವನ್ನು ಕಡಿದು ರಸ್ತೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯ್ತು. ಗಾಳಿಗೆ ಬಿದ್ದ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಸುಮಾರು ನಾಲ್ಕು ಕಂಬಗಳು ಹಾನಿಗೆ ತುತ್ತಾಯ್ತು. ವಿದ್ಯುತ್ ಕಂಬದ ಮೇಲೆ ಮರ ಬಿದ್ದ ಪರಿಣಾಮ ಬೆಳಗ್ಗಿನ ಜಾವ ೪.೩೦ಕ್ಕೆ ಹೋದ ಕರೆಂಟ್ ಸಂಜೆ ೭ ಗಂಟೆಯವರೆಗೂ ಬಂದಿರಲಿಲ್ಲ. ಸಾಲ್ಕೋಡಿನ ಕೈಕಟ್ಗೇರಿಯ ಸಮೀಪ ಲಕ್ಷ್ಮೀನಾರಾಯಣ ಹೆಗಡೆ ಎಂಬುವವರ ಮನೆಯ ಹತ್ತಿರ ದರೆ ಕುಸಿತ ಉಂಟಾಗಿ ಸುಮಾರು ೨೦ ಅಡಿಕೆ ಮರಗಳಿಗೆ ಹಾನಿ ಆಗಿದೆ. ಅಲ್ಲದೆ ದರೆ ಕುಸಿತ ಉಂಟಾದ ಕಾರಣ ಸ್ಥಳೀಯ ಜನರಿಗೆ ಓಡಾಡಲು ತ್ರಾಸ ಪಡುವಂತಾಯ್ತು. ಹೈಗುಂದದ ಬಳಿಯಲ್ಲಿಯೂ ಗುಡ್ಡ ಕುಸಿತ ಉಂಟಾಗಿದೆ. ಹೊನ್ನಾವರ ದೊಡ್ಮನೆ ರಸ್ತೆಯ ತೊಳಸಾಣಿ ಸಮೀಪದ ರಸ್ತೆ ಕುಸಿಯುತ್ತಿದೆ. ಇದರ ಪ್ರಮಾಣ ಹೆಚ್ಚಾದರೆ ಚಿಕ್ಕೊಳ್ಳಿ, ಹಿರೇಬೈಲ್ ನಿವಾಸಿಗಳು ಹಡಿನಬಾಳ ಮಾರ್ಗವನ್ನು ಬಳಸಿ ಹೊನ್ನಾವರಕ್ಕೆ ಬರಬೇಕಾಗುತ್ತದೆ. ಮುಂಗಾರು ಮಳೆಯ ಆರ್ಭಟ ಇನ್ನು ಮುಂದುವರಿಯಲಿದ್ದು, ಜನರು ಇನ್ನಷ್ಟು ಸಂಕಷ್ಡವನ್ನು ಎದುರಿಸಲು ಸಜ್ಜಾಗಲೇಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ