ಪತ್ರಕರ್ತ ನಾ.ಕಾರಂಜ ಪೆರಾಜೆ ಪರಿಕಲ್ಪನೆ । ಹಲಸು, ಮಾವು ಅರಿವು ಜಾಗೃತಿ ಕಥಾಹಂದರ
ಹಲಸು ಮೇಳದಲ್ಲಿ ಹಲಸಿನ ಹಣ್ಣಿನ ವಿವಿಧ ಖಾದ್ಯಗಳ ಜೊತೆಗೆ ಹಲಸು ಬಗ್ಗೆ ವಿವಿಧ ಗೋಷ್ಠಿಗಳನ್ನು ನಡೆಸಿ ಹಣ್ಣಿನ ಮೌಲ್ಯವರ್ಧನೆಗೆ ಯೋಜನೆ ರೂಪಿಸುವುದು ಸಾಮಾನ್ಯ ವಿಚಾರ. ಹಲಸು ಹಬ್ಬದಲ್ಲಿ ಪ್ರಥಮ ಬಾರಿಗೆ ಹಲಸು ವಿಚಾರದ ತಾಳಮದ್ದಳೆ ನಡೆಸುವ ಮೂಲಕ ಹಲಸಿಗೆ ಕಲಾ ಸ್ಪರ್ಶ ನೀಡುವ ಕಾರ್ಯ ಪುತ್ತೂರಿನಲ್ಲಿ ನಡದಿದೆ.ಪುತ್ತೂರು ಕಿಲ್ಲೆ ಮೈದಾನದಲ್ಲಿ ಇತ್ತೀಚೆಗೆ ನಡೆದ ೭ನೇ ಹಲಸು ಮೇಳದಲ್ಲಿ ‘ಪನಸೋಪಾಖ್ಯಾನ’ ತಾಳಮದ್ದಳೆ ಪ್ರಸಂಗ ಮೂಡಿ ಬಂದು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಪತ್ರಕರ್ತ ನಾ. ಕಾರಂತ ಪೆರಾಜೆ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ಪ್ರಸಂಗ ಕಾಲ್ಪನಿಕವಾಗಿದ್ದು, ಹಲಸು ಹಾಗೂ ಮಾವುಗಳ ಸುತ್ತ ಅರಿವನ್ನು ಮೂಡಿಸುವ ಕಥಾ ಹಂದರ ಹೊಂದಿದೆ.ಕಾಲ್ಪನಿಕ ಪ್ರಸಂಗಗಳು ಇದೇನೂ ಹೊಸತಲ್ಲ. ಘೋರ ಮಾರಕ, ಅಕ್ಷರ ಕ್ರಾಂತಿ, ಜಪಾನ್ ಕೃಷಿ ಪದ್ಧತಿ, ಹಸಿರು ಕ್ರಾಂತಿ, ಕುಟುಂಬ ಯೋಜನೆ, ಪಾನ ನಿಷೇಧ ಹೀಗೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಹಲವಾರು ಪ್ರಸಂಗಗಳನ್ನು ಸೃಷ್ಟಿಸಿ ಅದಕ್ಕೆ ರೂಪ ಕೊಡುವ ಕಾರ್ಯ ಹಲವರಿಂದ ನಡೆದಿದೆ. ಅದು ಜನಮನ್ನಣೆಯನ್ನೂ ಪಡೆದುಕೊಂಡಿದೆ.
ವಿಚಾರಗೋಷ್ಠಿ, ಹಲಸಿನ ವಿಶ್ವದರ್ಶನ, ದೂರದೂರಿನ ಮೌಲ್ಯವರ್ಧನೆಯ ವಿಚಾರಗಳಿಗೆ ಬೆಳಕನ್ನು ಒಡ್ಡುವ ಕೆಲಸ ಮೇಳಗಳಲ್ಲಿ ನಡೆದುವು. ಇದಕ್ಕೊಂದು ಕಲಾಸ್ಪರ್ಶ ನೀಡುವ ಉದ್ದೇಶದಿಂದ ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ ಎನ್ನುತ್ತಾರೆ ಪೆರಾಜೆ.
ಪನಸೋಪಾಖ್ಯಾನ ಕಥೆಯಲ್ಲಿ ಒಟ್ಟು ಐದು ಸನ್ನಿವೇಶಗಳು ಬರುತ್ತವೆ. ಭೂಲೋಕದ ಬಡತನ ನೀಗಿಸಲು ನಾರದ ಮಹರ್ಷಿಗೆ ಬ್ರಹ್ಮದೇವನು ಪನಸ ಬೀಜ ಅನುಗ್ರಹಿಸುತ್ತಾನೆ. ನಾರದ ಸಿದ್ಧಾರ್ಥನಾಗಿ ಭುವಿಗೆ ಇಳಿದು ಆನಂದವರ್ಮ ಎನ್ನುವ ರಾಜನಿಗೆ ಬೀಜವನ್ನು ನೀಡಿ, ‘ಇದು ಬಡತನವನ್ನು ದೂರ ಮಾಡುವ ಫಲ. ಅಭಿವೃದ್ಧಿ ಪಡಿಸು’ ಎನ್ನುತ್ತಾನೆ. ಪನಸ ವೃಕ್ಷಗಳು ಬೆಳೆಯುತ್ತವೆ. ಬಡವರ ಹೊಟ್ಟೆ ತಂಪಾಗುತ್ತವೆ.ಮತ್ತೊಂದೆಡೆ ಚೂತ ಹಾಗೂ ಪನಸ ಫಲಗಳು ತಂತಮ್ಮ ಗುಣಧರ್ಮಗಳನ್ನು ಪ್ರಕಟಪಡಿಸುವ ಸನ್ನಿವೇಶ. ಕೊನೆಗೆ ಹಲಸಿನ ಮರಗಳು ಮರಕಳ್ಳರ ಗರಗಸಕ್ಕೆ ಆಹುತಿಯಾಗುತ್ತವೆ. ರಾಜನಿಗೂ ಕಳ್ಳರಿಗೂ ಯುದ್ಧ ನಡೆದು ಕಳ್ಳರು ಪಲಾಯನ ಮಾಡುತ್ತಾರೆ. ಕೊನೆಗೆ ಪ್ರಭುರಕ್ಷಿತ ಹಲಸಿನ ಮರಗಳುಳ್ಳ ಅರಣ್ಯಕ್ಕೆ ‘ರಕ್ಷಿತಾರಣ್ಯ’ ಎನ್ನುವ ನಾಮಕರಣ ಹಾಗೂ ಹಲಸಿನ ಬಳಕೆಯ ಕುರಿತಾದ ಪ್ರಸ್ತುತಿ ಹೀಗೆ ಕಥಾ ಹಂದರವನ್ನು ಹೊಂದಿದೆ.
ಪುತ್ತೂರಿನ ‘ನವತೇಜ ಟ್ರಸ್ಟ್’ ಪನಸೋಪಾಖ್ಯಾನಕ್ಕೆ ಉತ್ತೇಜನ ನೀಡಿತ್ತು. ಆ ಸಂಸ್ಥೆಯ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ, ಕಾರ್ಯದರ್ಶಿ ಸುಹಾಸ್ ಮರಿಕೆ, ವೇಣುಗೋಪಾಲ ಶಿಬರ ಮೊದಲಾದವರ ಸಹಕಾರದಿಂದ ತಾಳಮದ್ದಳೆ ಜರುಗಿತು.
................ಹಿರಿಯ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ಟರನ್ನು ಭೇಟಿಯಾಗಿ ಸಮಾಲೋಚಿಸಿದೆ. ಅವರೂ ಕೆಲವು ದೃಶ್ಯ ಸಂಯೋಜಿಸಲು ನೆರವಾದರು. ಇಡೀ ಕಥೆಯು ಹಲಸಿನ ಬಳಕೆ, ಮೌಲ್ಯವರ್ಧನೆಯ ಸುತ್ತವೇ ಇರಬೇಕೆನ್ನುವುದು ಆಶಯವಾಗಿತ್ತು. ನನ್ನೊಂದಿಗೆ ಕಟೀಲು ಮೇಳದ ಭಾಗವತ ಶ್ರೀ ರಮೇಶ ಭಟ್ ಪುತ್ತೂರು ಹೆಗೆಲೆಣೆಯಾಗಿದ್ದರು.