ವಿಜೃಂಭಣೆಯ ಐದು ಗ್ರಾಮ ದೇವತೆಗಳ ಉತ್ಸವ

KannadaprabhaNewsNetwork |  
Published : Jun 17, 2025, 01:03 AM IST
51 | Kannada Prabha

ಸಾರಾಂಶ

ದೇವರ ಉತ್ಸವದ ಮೆರವಣಿಗೆ ತೆರಳುವ ರಸ್ತೆಗಳನ್ನು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಬಣ್ಣ ಬಣ್ಣದ ರಂಗೋಲಿಗಳಿಂದ ಶೃಂಗರಿಸಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರತಾಲೂಕಿನ ಕಾಳೇನಹಳ್ಳಿ, ಕೆಂಪನಕೊಪ್ಪಲು, ಹೊಸಕೊಪ್ಪಲು, ಮಾರಿಗುಡಿಕೊಪ್ಪಲು ಮತ್ತು ಕನಕನಗರ ಹೊಸ ಬಡಾವಣೆಯ ಗ್ರಾಮಗಳಲ್ಲಿ ಗ್ರಾಮ ದೇವತೆಗಳ ಹಬ್ಬದ ಅಂಗವಾಗಿ ಉತ್ಸವದ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಪಟ್ಟಣಕ್ಕೆ ಹೊಂದಿಕೊಂಡಂತಿರುವ ಈ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿ, ಬೆಳೆ ಬೆಳೆದು ರೈತರು ಮತ್ತು ರಾಜ್ಯ ಸುಭಿಕ್ಷವಾಗಿರಲಿ ಎಂಬ ಭಾವನೆಯಿಂದ ಈ ಹಬ್ಬವನ್ನು ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಆಚರಿಸಿಕೊಂಡು ಬರುತ್ತಿರುವುದು ಇತಿಹಾಸವಾಗಿದೆ.ಗ್ರಾಮ ದೇವತೆಗಳಾದ ವೆಂಕಟೇಶ್ವರಸ್ವಾಮಿ, ಬಸವೇಶ್ವರಸ್ವಾಮಿ ಮತ್ತು ಮಾರಮ್ಮ ದೇವರ ಉತ್ಸವವನ್ನು ನಡೆಸುವ ಗ್ರಾಮಸ್ಥರು ಶನಿವಾರ ರಾತ್ರಿ ಎಲ್ಲ ದೇವ ಉತ್ಸವ ಮೂರ್ತಿಗಳನ್ನು ಪಟ್ಟಣದ ಹೊರವಲಯದಲ್ಲಿರುವ ಹಳೆಎಡತೊರೆಯ ದಕ್ಷಿಣಗಂಗೆ ಕಾವೇರಿ ನದಿಯಲ್ಲಿ ಗಂಗಾ ಪೂಜೆ ನಡೆಸಿ, ಐದು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ತಮಟೆ, ಮಂಗಳವಾದ್ಯ, ಕೊಂಬು, ಕಹಳೆಗಳೊಂದಿಗೆ ವೈಭವದ ಮೆರವಣಿಗೆ ನಡೆಸಿದರು.ದೇವರ ಉತ್ಸವದ ಮೆರವಣಿಗೆ ತೆರಳುವ ರಸ್ತೆಗಳನ್ನು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಬಣ್ಣ ಬಣ್ಣದ ರಂಗೋಲಿಗಳಿಂದ ಶೃಂಗರಿಸಿದ್ದರು. ಇದರ ಜತೆಗೆ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು, ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಸೋಮವಾರ ಬೆಳಗ್ಗೆ ನಾಲ್ಕು ಗ್ರಾಮಗಳಲ್ಲಿರುವ ಮಾರಮ್ಮತಾಯಿ ದೇವಾಲಯಕ್ಕೆ ತಂಬಿಟ್ಟು ಆರತಿಯೊಂದಿಗೆ ತೆರಳಿದ ಹೆಣ್ಣು ಮಕ್ಕಳು ದೇವತೆಗೆ ವಿವಿಧ ನೈವೇದ್ಯಗಳನ್ನು ಅರ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.ಗ್ರಾಮ ದೇವತೆಗಳ ಉತ್ಸವದ ಮೆರವಣಿಗೆ ತಮ್ಮ ಮನೆ ಬಾಗಿಲಿಗೆ ಬಂದಾಗ ಹೆಣ್ಣು ಮಕ್ಕಳು ಸೇರಿದಂತೆ ಬಂಧುಗಳ ಜೊತೆಗೂಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ದೇವರ ಕುಣಿತ, ಮಂಗಳವಾದ್ಯ, ತಮಟೆ ಮತ್ತಿತರ ಸಾಂಪ್ರದಾಯಿಕ ಕುಣಿತಗಳು ಗ್ರಾಮಸ್ಥರನ್ನು ಆಕರ್ಷಿಸಿದವು.ಸಂಪ್ರದಾಯದಂತೆ ವೇಂಕಟೇಶ್ವರಸ್ವಾಮಿಗೆ ವೈಷ್ಣವ ಸಮುದಾಯದವರು, ಬಸವೇಶ್ವರಸ್ವಾಮಿಗೆ ವೀರಶೈವ ಲಿಂಗಾಯಿತ ಸಮಾಜದವರು, ಮಾರಮ್ಮ ತಾಯಿಗೆ ಕುರುಬ ಸಮುದಾಯದವರು ಅರ್ಚಕರಾಗಿದ್ದಾರೆ. ಈ ಐದು ಗ್ರಾಮಗಳಲ್ಲಿರುವ ಕುರುಬ, ಒಕ್ಕಲಿಗ, ವೀರಶೈವ ಲಿಂಗಾಯಿತ, ನಾಮಧಾರಿ, ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ವಿಶ್ವಕರ್ಮ ಹಾಗೂ ನಯನಕ್ಷತ್ರಿಯ ಸೇರಿದಂತೆ ಎಲ್ಲ ಸಮುದಾಯದವರೂ ಒಟ್ಟಿಗೆ ಸೇರಿ ಹಬ್ಬ ಆಚರಿಸಿದರು. ದೇವರ ಉತ್ಸವ ನಾಲ್ಕು ಗ್ರಾಮಗಳ ಯಜಮಾನರ ಸಮ್ಮುಖದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಯಜಮಾನರಾದ ಕೆ.ಎಂ. ಮಹದೇವ್, ಕೆ.ಜೆ. ಕುಮಾರ್, ದೇವರಾಜು, ಚನ್ನಕೇಶವ, ಸಿದ್ದೇಗೌಡ, ರಾಜೇಗೌಡ, ರಾಮೇಗೌಡ, ಗ್ರಾಪಂ ಸದಸ್ಯರಾದ ಕೆ.ಪಿ. ಜಗದೀಶ್, ಮಹೇಶ್‌ ಗೌಡ, ಪಲ್ಲವಿರಾಮಲಿಂಗು, ಶ್ವೇತಾರವಿ, ಸವಿತಾಸ್ವಾಮಿ ಗೌಡ, ಲಕ್ಷ್ಮೀ ರೇವಣ್ಣ, ಮಹದೇವ್, ಮಾಜಿ ಸದಸ್ಯರಾದ ಕೆ.ಎನ್. ರವಿ, ಮಹದೇವ್, ಅರ್ಚಕರಾದ ವೆಂಕಟೇಶ್, ಮಾದೇಶ್, ಧನುಕುಮಾರ್ ಹಾಜರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌