ಪ್ರವಾಹ ಭೀತಿ, ರಸ್ತೆ ಸಂಚಾರಕ್ಕೆ ಸಂಚಕಾರ

KannadaprabhaNewsNetwork |  
Published : Jun 25, 2025, 01:18 AM IST

ಸಾರಾಂಶ

ತಾಲೂಕಿನಲ್ಲಿ ರಭಸವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಜಲಮೂಲಗಳಿಗೆ ಅಡ್ಡಲಾಗಿ ನಿರ್ಮಾಣಗೊಂಡ ಎಲ್ಲ ಸೇತುವೆಗಳ ಮೇಲೂ ನೀರು ಹರಿಯಲಾರಂಭಿಸಿದೆ.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನಲ್ಲಿ ರಭಸವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ, ಮಹದಾಯಿ ಮತ್ತು ಪಾಂಡರಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಜಲಮೂಲಗಳಿಗೆ ಅಡ್ಡಲಾಗಿ ನಿರ್ಮಾಣಗೊಂಡ ಎಲ್ಲ ಸೇತುವೆಗಳ ಮೇಲೂ ನೀರು ಹರಿಯಲಾರಂಭಿಸಿದೆ. ಮಂತುರ್ಗಾ ಬಳಿಯ ಅಲಾತ್ರಿ ಹಳ್ಳದ ಮಟ್ಟಕ್ಕೆ ನೀರು ಹರಿಯುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಬೆಳಗಾವಿ-ಚೋರ್ಲಾ, ಜಾಂಬೋಟಿ-ಜತ್ತ, ಸಿಂಧನೂರು ಹೆಮ್ಮಡಗಾ, ಹೆದ್ದಾರಿಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾಲೂಕಿನಲ್ಲಿ ಸಧ್ಯ ಪ್ರವಾಹ ಪರಿಸ್ಥಿತಿಯಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಈ ಮಾರ್ಗಗಳಲ್ಲಿ ಸಂಚರಿಸದಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ.

ಸೋಮವಾರ ರಾತ್ರಿಯಿಂದೀಚೆಗೆ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವ ಕಾರಣ ನದಿಗಳಲ್ಲಿ ಮತ್ತು ಹಳ್ಳಕೊಳ್ಳಗಳಲ್ಲಿ ಮಹಾಪೂರ ಏರ್ಪಟ್ಟಿದೆ. ಸತತಧಾರೆ ತಾಲೂಕಿನ ಹಲವೆಡೆ ಸಂಪರ್ಕ ರಸ್ತೆ ಜಲಾವೃತ ಮತ್ತು ವಿದ್ಯುತ್ ಕಡಿತ ಸೇರಿದಂತೆ ಹಲವು ಸಮಸ್ಯೆಗಳನ್ನು ಸೃಷ್ಟಿಸಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ತಾಲೂಕಿನ ಕಣಕುಂಬಿ, ಜಾಂಬೋಟಿ, ಹೆಮ್ಮಡಗಾ, ಗುಂಜಿ ಮತ್ತು ಲೋಂಡಾ ಭಾಗದ ವಿವಿಧ ರಸ್ತೆ ಮತ್ತು ಸೇತುವೆಗಳ ಮೇಲೆ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ತಾಲೂಕಿನ ಹಬ್ಬನಹಟ್ಟಿ ಬಳಿ ಮಲಪ್ರಭಾ ನದಿಯ ಸೇತುವೆಯ ಮೇಲೆ ಹಲವು ಅಡಿಗಳಷ್ಟು ನೀರು ಹರಿಯಲಾರಂಭಿಸಿದೆ. ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಸೇತುವೆ ಕಾಮಗಾರಿ ನಿರ್ಮಾಣ ಹಂತದಲ್ಲಿರುವ ಕಾರಣ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯ ಮೂಲಕ ಬೆಳಗಾವಿಯಿಂದ ಗೋವಾ ಕಡೆಗೆ ಸಾಗುವ ವಾಹನಗಳಿಗೆ ಬೈಲೂರು, ಹಬ್ಬನಹಟ್ಟಿ ಮಾರ್ಗವಾಗಿ ಅವಕಾಶ ಕಲ್ಪಿಸಲಾಗಿತ್ತು. ಈ ರಸ್ತೆಯ ಮೇಲಿನ ಮಲಪ್ರಭಾ ಸೇತುವೆಯ ಮೇಲೂ ಮಂಗಳವಾರ ಮಧ್ಯಾಹ್ನದ ಸಮಯದಲ್ಲಿ ಹಲವು ಅಡಿಗಳಷ್ಟು ನೀರು ಹರಿಯಲಾರಂಭಿಸಿದ್ದರಿಂದ ಕರ್ನಾಟಕ-ಗೋವಾ ಸಂಪರ್ಕ ಕೊಂಡಿಯಾದ ಬೆಳಗಾವಿ-ಚೋರ್ಲಾ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮಲಪ್ರಭಾ, ಪಾಂಡರಿ, ಮಹದಾಯಿ ನದಿಗಳು, ಕೋಟ್ನಿ, ಅಲಾತ್ರಿ, ಮಂಗೇತ್ರಿ, ಕುಂಬಾರ, ತಟ್ಟೀ, ಪಣಸೂರಿ, ಬೈಲ್, ಕಳಸಾ ಹಾಗೂ ಬಂಡೂರಿ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಕಣಕುಂಬಿ ಹಾಗೂ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ 6 ಸೆಂಮೀ ಪ್ರಮಾಣದಲ್ಲಿ ಮಳೆ ಸುರಿದ ವರದಿಯಾಗಿದೆ. ರಭಸದಿಂದ ಸುರಿಯುತ್ತಿರುವ ಮಳೆ ತಾಲೂಕಿನಾದ್ಯಂತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಪಾಂಡರಿ ಮತ್ತು ಮಲಪ್ರಭಾ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿರುವ ಕಾರಣ ಕಾನನದಂಚಿನ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳು ಜಲಾವೃತಗೊಂಡಿವೆ. ತಾಲೂಕಿನ ಹಬ್ಬನಹಟ್ಟಿಯ ಆಂಜನೇಯ ಮಂದಿರ, ಇಟಗಿಯ ಮರುಳಶಂಕರ ಮಂದಿರಗಳು ಮಲಪ್ರಭಾ ನದಿಯಲ್ಲಿ ಮುಳುಗಡೆಗೊಂಡಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ