ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯ ಜುಲೈ ೨೦೨೪ರಲ್ಲಿ ಭರ್ತಿಯಾದ ಹಿನ್ನೆಲೆಯಲ್ಲಿ ಹೇಮಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದ ಕಾರಣ ಪಟ್ಟಣದ ನದಿ ಪಾತ್ರದ ಮನೆಗಳಿಗೆ ಜುಲೈ ೨೬ರ ಗುರುವಾರ ರಾತ್ರಿ ನೀರು ನುಗ್ಗಿತ್ತು. ನಾಗರಿಕರ ರಕ್ಷಣೆಗೆ ಸದಾ ಸಿದ್ಧವಿರುವ ಅಗ್ನಿಶಾಮಕ ಠಾಣೆ, ಯಾಸಿನ್ ನಗರ, ಕುವೆಂಪು ಬಡಾವಣೆಯಲ್ಲಿ ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಚನ್ನರಾಯಪಟ್ಟಣಕ್ಕೆ ತೆರಳುವ ಗನ್ನಿಕಡ ಮಾರ್ಗ ಹಾಗೂ ಅರಕಲಗೂಡಿಗೆ ತೆರಳುವ ಹೆದ್ದಾರಿಯೂ ಜಲಾವೃತ್ತಗೊಂಡಿದ್ದು, ವಾಹನಗಳು ಬದಲೀ ರಸ್ತೆಯಲ್ಲಿ ಸಂಚರಿಸಲು ವ್ಯವಸ್ಥೆ ಮಾಡಲಾಗಿತ್ತು ಹಾಗೂ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಇರುವ ಗೋದಾಮುಗಳಿಗೆ ನೀರು ನುಗ್ಗಿದ್ದು, ದಿನಸಿ ಪದಾರ್ಥಗಳು ನದಿ ನೀರಿನಲ್ಲಿ ನೆಂದು ಬಹಳ ನಷ್ಟ ಉಂಟಾಗಿತ್ತು.
೧೯೯೨, ೨೦೧೯ ಹಾಗೂ ೨೦೨೪ರಲ್ಲಿ ಹೇಮಾವತಿ ನದಿಯು ತುಂಬಿ ಹರಿದು ಬಡಾವಣೆಗಳು, ರಸ್ತೆಗಳು ಜಲಾವೃತ್ತಗೊಂಡಿತ್ತು. ಆದ್ದರಿಂದ ಡ್ರೈನ್‌ಗಳ ಮೂಲಕ ನದಿ ನೀರು ಬಾರದಂತೆ ತಡೆಯಲು ಮರಳು ಮೂಟೆಗಳು ಹಾಗೂ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಹಿರಿಯ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಲು ಪೂರ್ವಭಾವಿ ಸಭೆ ನಡೆಸುವ ಜತೆಗೆ ಬಡಾವಣೆಯ ನಿವಾಸಿಗಳಿಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ಸಭೆ ಅಗತ್ಯವಾಗಿದೆ.