ಬೆಂಗಳೂರು : ದೀಪಾವಳಿ ಹಿನ್ನೆಲೆಯಲ್ಲಿ ಭಾನುವಾರ ನಗರದ ಕೆ.ಆರ್.ಮಾರುಕಟ್ಟೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಜನ ಭರ್ಜರಿ ಹಬ್ಬದ ಖರೀದಿ ಮಾಡಿದ್ದಾರೆ. ಒಂದೇ ದಿನದ ಅಂತರದಲ್ಲಿ ಹೂವುಗಳ ದರ ದುಪ್ಪಟ್ಟಾಗಿ ಗ್ರಾಹಕರಿಗೆ ಬಿಸಿ ತಟ್ಟಿತು.
ಭಾನುವಾರದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೆ ನಗರದ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಗಾಂಧಿ ಬಝಾರ್, ಹೆಬ್ಬಾಳ, ರಾಜಾಜಿನಗರ, ಮಲ್ಲೇಶ್ವರ, ಜಯನಗರ, ಯಶವಂತಪುರ ಸೇರಿ ಎಲ್ಲ ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಜೋರಾಗಿತ್ತು. ಇದರ ಜೊತೆಗೆ ಫುಟ್‌ಪಾತ್, ಬೀದಿಗಳಲ್ಲಿ ಹಳ್ಳಿಗರು ವ್ಯಾಪಾರ ಮಾಡಿದರು.
ಶನಿವಾರ ಮಲ್ಲಿಗೆ ₹600- ₹800 ಇದ್ದುದು ಭಾನುವಾರ ₹1000 ದಾಟಿತ್ತು. ಗುಲಾಬಿ ₹100- ₹200 ರಿಂದ ₹400 ಆಗಿದ್ದರೆ ಚೆಂಡು ಹೂವು ₹50- ₹100 ರಿಂದ 40ದರ ಏರಿತ್ತು. ಇನ್ನು ಕನಕಾಂಬರ ದರವೂ ₹1000- ₹1200 ದುಪ್ಪಟ್ಟಾಗಿ ₹2000 ಮೀರಿತ್ತು. ತಾವರೆ ₹50ಗೆ ಒಂದರಂತೆ ಮಾರಾಟವಾದರೆ ಸೇವಂತಿಗೆ ಬೆಲೆಯೂ ಏರಿಕೆಯಾಗಿತ್ತು. ಇನ್ನು ಸೇಬು ₹ 250, ಕಿತ್ತಳೆ ₹ 250, ಪಪ್ಪಾಯ ಕೇಜಿಗೆ ₹ 50, ದಾಳಿಗೆ ₹ 200, ಮೂಸಂಬಿ ₹ 180 ಬೆಲೆಯಿತ್ತು.
ದೀಪಾವಳಿಗೆ ಬಟ್ಟೆ ಖರೀದಿಯೂ ಜೋರಾಗಿತ್ತು. ಸೀರೆ, ಶರ್ಟ್ ಸೇರಿದಂತೆ ಮಕ್ಕಳ ಬಟ್ಟೆಗಳ ಖರೀದಿಗಾಗಿ ಜನರು ಕುಟುಂಬ ಸಮೇತರಾಗಿ ಬಟ್ಟೆ ಅಂಗಡಿಗಳಲ್ಲಿ ಖರೀದಿ ಮಾಡಿದರು. ಜತೆಗೆ ಇಲೆಕ್ಟ್ರಿಕಲ್ ವಸ್ತುಗಳ ಖರೀದಿಯೂ ಜೋರಾಗಿತ್ತು. ಹೊಸ ಟಿವಿ, ರೆಫ್ರಿಜಿರೇಟರ್, ಬೈಕ್, ಕಾರುಗಳ ಖರೀದಿಯೂ ಹೆಚ್ಚಿದೆ. ಹಲವಾರು ಕಂಪನಿಗಳು ಹಬ್ಬಕ್ಕಾಗಿ ವಿಶೇಷ ರಿಯಾಯಿತಿ ಘೋಷಿಸಿದ್ದು, ಖರೀದಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ.ಹಬ್ಬದ ಹಿನ್ನೆಲೆಯಲ್ಲಿ ವಾಹನಗಳ ಶೋರೂಮು, ಬಟ್ಟೆ ಅಂಗಡಿಗಳು, ಇಲೆಕ್ಟ್ರಿಕ್ ವಸ್ತುಗಳ ಅಂಗಡಿಗಳು ನಿಗದಿತ ಮೊತ್ತದ ಖರೀದಿಯೊಂದಿಗೆ ಆಕರ್ಷಕ ಕೊಡುಗೆಗಳನ್ನೂ ನೀಡುತ್ತಿವೆ. ಎಂ.ಜಿ.ರಸ್ತೆ ಸೇರಿದಂತೆ ನಗರದ ಮಾಲ್‌ಗಳು ಗ್ರಾಹಕರಿಂದ ತುಂಬಿವೆ. ಬಹುತೇಕ ಮಾಲ್‌ಗಳಲ್ಲಿ ಬಟ್ಟೆಗಳ ಮೇಲೆಯೂ ವಿಶೇಷ ಕೊಡುಗೆ ನೀಡಲಾಗುತ್ತಿದೆ. ಚಿನ್ನದ ದರ ಗಗನಕ್ಕೆ ಏರಿದ್ದರೂ ಸಹ ಚಿನ್ನಾಭರಣ ಮಳಿಗೆಗಳು ಜನರಿಂದ ತುಂಬಿ ಹೋಗಿವೆ. ಕುಟುಂಬ ಸಮೇತರಾಗಿ ಜನರು ಚಿನ್ನಾಭರಣ ಖರೀದಿಸುತ್ತಿದ್ದಾರೆ. ಬೆಳ್ಳಿ ಹಾಗೂ ವಜ್ರದ ಆಭರಣಗಳ ಖರೀದಿಯೂ ಜೋರಾಗಿದೆ ಎಂದು ವರ್ತಕರು ತಿಳಿಸಿದರು. ಇದೆಲ್ಲದರ ಮಧ್ಯೆ ದೀಪಾವಳಿಗೆ ಬೇಕಾದ ಆಕಾಶಬುಟ್ಟಿ, ಮಣ್ಣಿನ ಹಣತೆ ಮಾರಾಟ ಹೆಚ್ಚು ನಡೆಯುತ್ತಿದೆ. ಪ್ರಮುಖ ರಸ್ತೆಗಳ ಬದಿಯಲ್ಲಿ ಮಣ್ಣಿನ ಹಣತೆಗಳ ಮಾರಾಟ ಕಾಣಿಸುತ್ತಿದೆ.
ಹೂವುದರ
ಮಲ್ಲಿಗೆ1200
ಕನಕಾಂಬರ 2100
ಗುಲಾಬಿ400
ಸೇವಂತಿಗೆ400