ಹುಬ್ಬಳ್ಳಿ:
ಶುಕ್ರವಾರ ಕೋರ್ಟ್ ವೃತ್ತದಿಂದ ಹೊಸೂರ ವೃತ್ತದ ವರೆಗೂ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಂಚ ರಾಜ್ಯ ಚುನಾವಣೆ ಹಿನ್ನೆಲೆ ಕಾರ್ಮಿಕರು ಅಲ್ಲಿಗೆ ತೆರಳಿದ್ದರಿಂದ ಕಾಮಗಾರಿ ವಿಳಂಬವಾಗಿತ್ತು. ಇದೀಗ ಎಲ್ಲ ಕಾರ್ಮಿಕರು ಆಗಮಿಸಿದ್ದು ಕಾಮಗಾರಿ ಭರದಿಂದ ಸಾಗಿದೆ ಎಂದ ಅವರು, ಬಹುತೇಕ ಕೆಲಸ ಪೂರ್ಣಗೊಂಡಿದ್ದು ಗಲ್ಡರ್ ಅಳವಡಿಸಲಾಗಿದೆ. ಕಾಮಗಾರಿ ಮುಗಿದ ಜಾಗದಲ್ಲಿ ₹ 13 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಕೇಂದ್ರದ ಅನುಮೋದನೆ ದೊರೆಕಿದೆ ಎಂದರು.ಮೊದಲ ಹಂತದಲ್ಲಿ ಹೊಸೂರ ವೃತ್ತದಿಂದ ಹಳೇ ಬಸ್ ನಿಲ್ದಾಣದ ವರೆಗೆ ಸಿಸಿ ರಸ್ತೆ ಕಾಮಗಾರಿ ಆರಂಭವಾಗಿದ್ದು, 15 ದಿನದಲ್ಲಿ ಮುಗಿಯಲಿದೆ. ಎರಡನೇ ಹಂತದಲ್ಲಿ ಚೆನ್ನಮ್ಮ ವೃತ್ತದಿಂದ ಭವಾನಿ ಆರ್ಕೆಡ್ ವರೆಗೆ ಕೈಗೊಳ್ಳಲು ಸೂಚಿಸಲಾಗಿದೆ. ದೇಸಾಯಿ ವೃತ್ತದಿಂದ ಕೋರ್ಟ್ ವೃತ್ತದ ವರೆಗಿನ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಗದಗ ರಸ್ತೆಯಲ್ಲಿ ಕೆಲವು ಸಮಸ್ಯೆಗಳಿದ್ದು, ಪರಿಹರಿಸಿ ಕಾಮಗಾರಿ ಆರಂಭಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸದ್ಯಕ್ಕೆ ಪಾಲಿಕೆ ಎದುರಿಗಿರುವ ಬಸ್ ನಿಲ್ದಾಣ ತೆರವುಗೊಳಿಸಲು ನಿರ್ಧರಿಸಿದ್ದು ಕಾಮಗಾರಿ ಮುಗಿದ ಮೇಲೆ ಎಲ್ಲಿಗೆ ಸ್ಥಳಾಂತರಿಸಬೇಕು ಎಂಬುದನ್ನು ಚರ್ಚಿಸಲಾಗಿದೆ ಎಂದು ಹೇಳಿದರು.
ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದ ಒಟ್ಟು 87 ಫೌಂಡೇಶನ್‌ನಲ್ಲಿ 84 ಫೌಂಡೇಶನ್ ಸ್ಥಾಪಿಸಲಾಗಿದೆ. ಆರು ಪೀಯರ್ ಕ್ಯಾಪ್ (ಸೇತುವೆ ಕಂಬದ ಮೇಲ್ಭಾಗ ರಚನೆ) ಅಳಡಿಸಬೇಕಿದೆ. 294 ಗಲ್ಡರ್‌ನಲ್ಲಿ 262 ಅಳವಡಿಸಿದ್ದು 25 ಗಲ್ಡರ್‌ಗಳ ತಯಾರಿಸಬೇಕಿದೆ. 32 ಸ್ಲ್ಯಾಬ್ ಅಳವಡಿಸುವುದು ಬಾಕಿ ಇದ್ದು, ಗಲ್ಡರ್ ಅಳವಡಿಸಿದ ಬಳಿಕ ಸ್ಲ್ಯಾಬ್ ಹಾಕಲಾಗುವುದು. ಚೆನ್ನಮ್ಮ ವೃತ್ತದಲ್ಲಿ ಬಾಕ್ಸ್ ಗಲ್ಡರ್ ಹಾಕುವುದು ಸ್ವಲ್ಪ ವಿಳಂಬವಾಗಲಿದೆ. ಫ್ಲೈಓವರ್ ಕಾಮಗಾರಿ ಮುಗಿದ ಸ್ಥಳದಲ್ಲಿ ಒಂದುವರೆ ತಿಂಗಳೊಳಗೆ ಮುಖ್ಯ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಲೋಕೋಪಯೋಗಿ ಅಧಿಕಾರಿ ಸತೀಶ ನಾಗನೂರ ತಿಳಿಸಿದರು.