ಕನ್ನಡಪ್ರಭ ವಾರ್ತೆ ಕೋಲಾರಲೋಕಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿದ್ದು, ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತಿಯಿಂದ ಸಡಿಲಿಕೆ ನೀಡಿರುವುದರಿಂದ ಬರಗಾಲ ನಿರ್ವಹಣೆ ಸೇರಿದಂತೆ ಅಭಿವೃದ್ಧಿ ಕೆಲಸದ ಕಡೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕೆಂದು ಜಿಲ್ಲೆಯ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳಿಗೆ ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದರು.೨೩ ರಂದು ಗುರುವಾರ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದ ಮೂಲಕ ರಾಜ್ಯದ ಎಲ್ಲಾ ಡಿ.ಸಿ, ಜಿಲ್ಲಾ ಪಂಚಾಯತ್ ಸಿ.ಇ.ಒ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರಗಾಲ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿ, ಮುಂಗಾರು ಪೂರ್ವ ಮಳೆ ಎಲ್ಲೆಡೆ ಉತ್ತಮವಾಗಿದೆ. ಹೀಗಾಗಿ ಬಿತ್ತನೆ ಕಾರ್ಯ ಚುರುಕಾಗಬೇಕು. ಡಿಸಿ, ಜಿಪಂ ಸಿಇಒ ಇದರ ಮೇಲುಸ್ತುವಾರಿ ವಹಿಸಬೇಕು ಎಂದರು.ಬೀಜ, ಗೊಬ್ಬರ ದಾಸ್ತಾನು
ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ರಾಜ್ಯದಲ್ಲಿ ಸಾಕಷ್ಟು ದಾಸ್ತಾನು ಮಾಡಲಾಗಿದ್ದು, ಎಲ್ಲಿಯೂ ಕೊರತೆಯಾಗದಂತೆ ಜಿಲ್ಲಾ, ತಾಲೂಕಿಗೆ ಬೇಡಿಕೆಯನುಗುಣವಾಗಿ ಬೀಜ, ರಸಗೊಬ್ಬರ, ಕೀಟನಾಶಕ ಸರಿಯಾಗಿ ಪೂರೈಸಬೇಕು. ಇದಕ್ಕೆ ಸರಿಯಾಗಿ ಯೋಜನೆ ರೂಪಿಸಿ ವಿತರಣೆ ಮಾಡಬೇಕು ಮತ್ತು ರೈತರಿಂದ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ದಾಸ್ತಾನಿದ್ದು, ಬಿತ್ತನೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಜಾನುವಾರುಗಳಿಗೆ ೧೧೩೫೪೫ ಟನ್ ಮೇವು ದಾಸ್ತಾನು ಮಾಡಲಾಗಿದೆ ಜಿಲ್ಲೆಯ ೫೦,೩೫೨ ಅರ್ಹ ರೈತರಿಗೆ ೨೩.೯೩ ಕೋಟಿ ರು.ಇನ್ಪುಟ್ ಸಬ್ಸಿಡಿ ನೀಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ೧೪೩೮ ರೈತರಿಗೆ ಪರಿಹಾರ ಧನ ಬಾಕಿಯಿದ್ದು, ಮುಂದಿನ ದಿನದಲ್ಲಿ ಸಮಸ್ಯೆ ಬಗೆಹರಿಸಿ ಎಲ್ಲ ಅರ್ಹ ರೈತರಿಗೆ ಪರಿಹಾರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮುಖ್ಯಮಂತ್ರಿ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ಯಾವುದೇ ರೈತರ ಆತ್ಮಹತ್ಯೆಯಾಗಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.ವಿಡಿಯೋ ಸಂವಾದ ಸಭೆಯಲ್ಲಿ ಎಡಿಸಿ ಶಂಕರ್ ವಾಣಿಕ್ಯಾಳ್ ಇದ್ದರು.