ವಿದ್ಯಾರ್ಥಿ ದೆಸೆಯಲ್ಲಿ ಅಭ್ಯಾಸದ ಕಡೆಗೆ ಗಮನ ಹರಿಸಿ: ತಹಸೀಲ್ದಾರ್ ಜಿ. ಸಂತೋಷಕುಮಾ‌ರ್

KannadaprabhaNewsNetwork | Published : Nov 20, 2024 12:34 AM

ಸಾರಾಂಶ

ವಿದ್ಯಾರ್ಥಿ ದೆಸೆಯಲ್ಲಿ ಅಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಿದರೇ ಸಾಧನೆ ಹಾದಿ ಸುಲಭವಾಗುತ್ತದೆ ಎಂದು ತಹಸೀಲ್ದಾರ್ ಜಿ. ಸಂತೋಷಕುಮಾ‌ರ್ ಹೇಳಿದರು.

ಹೂವಿನಹಡಗಲಿ: ವಿದ್ಯಾರ್ಥಿ ದೆಸೆಯಲ್ಲಿ ಅಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಿದರೇ ಸಾಧನೆ ಹಾದಿ ಸುಲಭವಾಗುತ್ತದೆ ಎಂದು ತಹಸೀಲ್ದಾರ್ ಜಿ. ಸಂತೋಷಕುಮಾ‌ರ್ ಹೇಳಿದರು.ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಂಥಾಲಯಗಳಲ್ಲಿ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಇನ್ನಿತರ ವಿಷಯಗಳ ಪುಸ್ತಕಗಳಿವೆ. ಅವುಗಳನ್ನು ಅಭ್ಯಾಸ ಮಾಡುವ ಜತೆಗೆ ಇತರರಿಗೂ ಗ್ರಂಥಾಲಯ ಮಹತ್ವವನ್ನು ತಿಳಿಸಬೇಕಿದೆ ಎಂದರು.

ತಾಪಂ ಇಒ ಎಂ. ಉಮೇಶ ಮಾತನಾಡಿ, ಗ್ರಂಥಾಲಯಕ್ಕೆ ಮಕ್ಕಳ ಅಭ್ಯಾಸದ ಹಸಿವು ಇಂಗಿಸುವ ಶಕ್ತಿ ಇದೆ. ಮಕ್ಕಳಲ್ಲಿ ಅಧ್ಯಯನದ ಆಸಕ್ತಿ ಮೂಡಿಸಬೇಕಿದೆ. ಕಠಿಣ ಪರಿಶ್ರಮದ ಮೂಲಕ ಜ್ಞಾನಾರ್ಜನೆ ಮಾಡಿದರೆ ಭವಿಷ್ಯ ಉಜ್ವಲವಾಗುತ್ತದೆ. ಇದಕ್ಕೆ ಪೂರಕವಾಗಿ ಗ್ರಂಥಾಲಯದಲ್ಲಿ ಸಾಕಷ್ಟು ಪುಸ್ತಕಗಳ ಲಭ್ಯತೆಯಿದೆ. ಇತ್ತೀಚೆಗೆ ಗ್ರಂಥಾಲಯವೂ ಡಿಜಿಟಲೀಕರಣವಾಗಿದ್ದು, ಎಲ್ಲವೂ ಕೈ ಬೆರಳಿನಲ್ಲೇ ಸಿಗುತ್ತಿದೆ. ಇದರಲ್ಲಿ ಸಾಕಷ್ಟು ಸಾಧಕ ಮತ್ತು ಬಾಧಕಗಳಿದ್ದು, ಮಕ್ಕಳು ತಮ್ಮ ಬೌದ್ಧಿಕ ಬೆಳವಣಿಗೆಗೆ ಅಗತ್ಯವಿರುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಿ ಎಂದರು.

ಶಿಕ್ಷಕ ಎಸ್. ದ್ವಾರಕೇಶ ರೆಡ್ಡಿ ಉಪನ್ಯಾಸ ನೀಡಿ, ಓದು ಮನುಷ್ಯನನ್ನಾಗಿ ರೂಪಿಸುತ್ತದೆ. ಪುಸ್ತಕಗಳು ನಿರಂತರ ಮಾತನಾಡುತ್ತಿದ್ದು, ಓದುಗರು ಬದುಕನ್ನು ರೂಪಿಸಿಕೊಳ್ಳುತ್ತಾರೆ. ಆ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳುತ್ತಾರೆ. ಪುಸ್ತಕಗಳು ಜಗತ್ತಿನ ಶ್ರೇಷ್ಠ ವಸ್ತು ಎಂದರು.

ಸಾರ್ವಜನಿಕ ಗ್ರಂಥಾಲಯ ಅಧಿಕಾರಿ ಬಿ. ಮಂಜುನಾಥ ಮಾತನಾಡಿ, ಇಲ್ಲಿನ ಗ್ರಂಥಾಲಯ ಓದುಗರಿಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ಹೊಂದಿದ್ದು, ಕಲ್ಯಾಣ ಕರ್ನಾಟಕದಲ್ಲೇ ಮೊದಲ ಗ್ರಂಥಾಲಯವಾಗಿದೆ. 33 ಸಾವಿರ ಪುಸ್ತಕಗಳು, 3 ಸಾವಿರಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳಿವೆ. ದಿನಪತ್ರಿಕೆ, ನಿಯತಕಾಲಿಕೆಗಳಿದ್ದು, ನಿತ್ಯವೂ 200ಕ್ಕೂ ಹೆಚ್ಚು ಓದುಗುರು ಭೇಟಿ ನೀಡುತ್ತಾರೆ. ಜತೆಗೆ ಸ್ಪರ್ಧಾತ್ಮಕ ಪರೀಕ್ಷೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಕಲಿಕಾ ಕೇಂದ್ರವಾಗಿದ್ದು, ಕನಿಷ್ಠ 100ಕ್ಕೂ ಹೆಚ್ಚು ಯುವಕರು ಉದ್ಯೋಗ ಪಡೆದಿದ್ದಾರೆ ಎಂದರು.

ಕಾಲೇಜಿನ ಪ್ರಾಚಾರ್ಯ ಅಯ್ಯನಗೌಡರ ಕೊಟ್ರಗೌಡ ಅಧ್ಯಕ್ಷತೆ ವಹಿಸಿದ್ದರು. ನರೇಗಾ ಎ.ಡಿ. ವೀರಣ್ಣನಾಯ್ಕ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಯು.ಆನಂದ್, ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂಪಿಎಂ ಅಶೋಕ, ಗುರುಬಸವರಾಜ, ಶಂಕರ ಬೆಟಗೇರಿ ಇತರರಿದ್ದರು. ಹಡಗಲಿ ಬಸವರಾಜ, ದೊಡ್ಡಬಸಪ್ಪ ನಿರ್ವಹಿಸಿದರು.

Share this article