ಕನ್ನಡಪ್ರಭ ವಾರ್ತೆ ಬೆಳಗಾವಿ
ಗ್ರಾಮೀಣ ಶಾಲೆಗಳು ಬಹಳ ದುಸ್ಥಿತಿಯಲ್ಲಿದ್ದು, ಅವುಗಳ ಕಡೆ ಸರ್ಕಾರ ಗಮನ ಹರಿಸಬೇಕು ಎಂದು ರಾಜ್ಯಸಭಾ ಸದಸ್ಯೆ, ಪದ್ಮಭೂಷಣ ಪುರಸ್ಕೃತೆ ಡಾ.ಸುಧಾ ಮೂರ್ತಿ ಸಲಹೆ ನೀಡಿದರು.ಗವನಾಳ-ಸಂಕೇಶ್ವರದಲ್ಲಿ ಕೆಎಲ್‍ಇ ಆಂಗ್ಲ ಮಾಧ್ಯಮ (ಸಿಬಿಎಸ್‍ಸಿ) ಶಾಲೆಯ ನೂತನ ಕಟ್ಟಡ ಉದ್ಘಾಟನೆ, ಶ್ರೀಮತಿ ಮಾಲುತಾಯಿ ಶಿವಪುತ್ರ ಶಿರಕೋಳಿ ನಾಮಕರಣ ಸಮಾರಂಭವನ್ನು ಶನಿವಾರ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರಿನಂತ ಮಹಾನಗರಗಳಲ್ಲಿ ಶಿಕ್ಷಣ ದುಬಾರಿಯಾಗಿದೆ. ಆದರೆ, ಈ ಭಾಗದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕೆಎಲ್‍ಇ ಸಂಸ್ಥೆಯ ಛತ್ರದಲ್ಲಿ ಕೋಟ್ಯಂತರ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾಣದಲ್ಲಿ ತೊಡಗಲಿ ಎಂದು ಶುಭ ಹಾರೈಸಿದರು.
ನಮ್ಮ ಮನಸ್ಸಿನ ದೇವರಿಗೆ ವಿರುದ್ಧವಾಗಿ ನಡೆಯಬಾರದು. ಯಶಸ್ಸಿನ ಮೆಟ್ಟಲು ಎಷ್ಟೋ ಸಲ ವಿಫಲವಾಗುತ್ತದೆ. ಅದನ್ನು ಸವಾಲಾಗಿ ಸ್ವೀಕರಿಸಿದಾಗ ಜಯ ನಮ್ಮದೇ. ಪ್ರತಿನಿತ್ಯ ಎಷ್ಟು ಶ್ರಮಿಸುತ್ತೀರಿ ಅಷ್ಟು ನಿಮಗೆ ಪ್ರತಿಫಲ ದೊರೆಯುತ್ತದೆ. ಹಿರಿಯರು, ಶಿಕ್ಷಕರ ಅನುಭವಗಳನ್ನು ಪಡೆಯಬೇಕು. ಹಿರಿಯರ ಮಾತಿಗೊಂದು ತೂಕವಿದೆ. ಅದನ್ನು ಅನುಕರಣೆಗೆ ತರಬೇಕು. ಆಚಾರ್ಯ ದೇವೋಭವ ಎಂಬ ಮಾತಿನಂತೆ ಶಿಕ್ಷಕರ ಮಾರ್ಗದರ್ಶನದೊಂದಿಗೆ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ವಿದ್ಯಾರ್ಥಿಗಳು ಪರಿಶ್ರಮ ಪಡಬೇಕು. ಕಲಿಯುವ ಕಾಲಕ್ಕೆ ಕಲಿಯಬೇಕು, ಜೀವನವು ಪ್ರತಿದಿನವು ಪರೀಕ್ಷೆಯಿಂದ ಕೂಡಿದೆ. ಕಷ್ಟಪಟ್ಟು ಓದಿದರೇ ಪ್ರತಿಫಲ ತಾನಾಗಿಯೇ ಬರುತ್ತದೆ. ಸೌಹಾರ್ದಯುತ ಜೀವನವಿರಬೇಕು. ಟೆನಿಸ್ ಆಟಗಾರನಂತೆ ಒಂಟಿಯಾಗಿ ನಿರ್ಧಾರಕೈಗೊಳ್ಳಬೇಕು. ಕ್ರಿಕೆಟ್ ತಂಡದಂತೆ ಸಾಂಘಿಕವಾಗಿ ಕಾರ್ಯನಿರ್ವಹಿಸಿದಾಗ ಜಯ ನಮ್ಮದಾಗುತ್ತದೆ. ಪರರ ಧನಮುಟ್ಟದೆ ಕಾರ್ಯನಿರ್ವಹಿಸುತ್ತ ಸಾಗಬೇಕು. ಕಾರ್ಯದಲ್ಲಿ ವಿಫಲತೆಯಾದಾಗ ಅದು ಯಶಸ್ಸಿಗೆ ದಾರಿ ಎಂದರು.
ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಕನ್ನಡವನ್ನು ಕಟ್ಟಿ ಬೆಳೆಸುವಲ್ಲಿ ಕಂಕಣಬದ್ಧವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಕಾನ್ವೆಂಟ್ ಶಾಲೆಗಳನ್ನು ತೆರೆಯಲಿದೆ ಎಂದು ತಿಳಿಸಿದರು.ಗ್ರಾಮೀಣ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕಾಗಿಯೇ ಕೆಎಲ್‍ಇ ಸಂಸ್ಥೆಯು ಅಂತಾರಾಷ್ಟ್ರೀಯ ಗುಣಮಟ್ಟದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿರುವುದು ಹೆಮ್ಮೆ ತಂದಿದೆ. ಈ ಶಾಲೆ ಪ್ರಾರಂಭಗೊಳ್ಳಲು ದಾನವನ್ನು ನೀಡಿದ ಶ್ರೀಮತಿ ಮಾಲುತಾಯಿ ಶಿವಪುತ್ರ ಶಿರಕೋಳಿಯವರನ್ನು ನಾನು ಸಂಸ್ಥೆಯಿಂದ ಅಭಿನಂದಿಸುತ್ತೇನೆ ಎಂದರು.
ಉತ್ತರ ಕರ್ನಾಟಕದ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದಲೇ ಅಸಂಖ್ಯೆ ದಾನಿಗಳು ಹಾಗೂ ಮಹಾದಾನಿಗಳು ಭೂಮಿ ಹಾಗೂ ಹಣ ನೀಡಿದ್ದನ್ನು ಸಂಸ್ಥೆಯು ಎಂದಿಗೂ ಮರೆಯುವುದಿಲ್ಲ. ಮುಂಬರುವ 2 ವರ್ಷಗಳಲ್ಲಿ ಅನೇಕ ಕಾರ್ಯಕ್ರಮಗಳ ಮೂಲಕ ಜನಸೇವೆಗೆ ತೊಡಗಿಸಿಕೊಳ್ಳಲಿದೆ ಎಂದು ಭರವಸೆ ನೀಡಿದರು.ನಿಡಸೋಸಿ ದುರದುಂಡೀಶ್ವರ ಸಂಸ್ಥಾನದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ, ಕೆಎಲ್‍ಇ ಸಂಸ್ಥೆಯು ಅಗಾಧವಾಗಿ ಬೆಳೆದು ನಿಂತಿದೆ. ಗ್ರಾಮೀಣ ಭಾಗದಲ್ಲಿ ಅದ್ಭುತವಾದ ಶಾಲೆಗಳನ್ನು ನಿರ್ಮಿಸಿ ಅಕ್ಷರ ಬೀಜ ಬಿತ್ತುವ ಮಹತ್ತರ ಕೆಲಸ ಮಾಡಿದೆ. ಯಾವ ತಾಲೂಕಿನಲ್ಲಿ ಶಿಕ್ಷಣ ಹಿಂದುಳಿದಿದೆ ಎಂದು ಗಮನಿಸಿ ಆ ಪ್ರದೇಶದಲ್ಲಿ ಕೆಎಲ್‍ಇ ಸಂಸ್ಥೆಯು ಶಾಲೆಗಳನ್ನು ತೆರೆಯುವುದರ ಮೂಲಕ ನಾಂದಿ ಹಾಡಬೇಕು ಎಂದು ನುಡಿದರು.
ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕ ಮಹಾಂತೇಶ ಕೌಜಲಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ನಿಖಿಲ್ ಕತ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ಡಾ.ಸುಧಾ ಮೂರ್ತಿಯವರನ್ನು ಹಾಗೂ ದಾನಿಗಳಾದ ಅಪ್ಪಾಸಾಹೇಬ ಶಿರಕೋಳಿ ಕುಟುಂಬದವರನ್ನು ಕೆಎಲ್‍ಇ ಸಂಸ್ಥೆಯಿಂದ ಸತ್ಕರಿಸಲಾಯಿತು.ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ರಾಹುಲ್ ಜಾರಕಿಹೊಳಿ, ಕೆಎಲ್‍ಇ ಆಡಳಿತ ಮಂಡಳಿಯ ಸದಸ್ಯರಾದ ಶಂಕರಣ್ಣ ಮುನವಳ್ಳಿ, ವೈ.ಎಸ್.ಪಾಟೀಲ, ಜಯಾನಂದ ಮುನವಳ್ಳಿ, ಬಾಬಣ್ಣ ಮೆಟಗುಡ್ಡ, ಅನೀಲ ಪಟ್ಟೇದ, ಬಿ.ಆರ್.ಪಾಟೀಲ, ಮಹಾಂತೇಶ ಕವಟಗಿಮಠ, ಅಮಿತ ಕೋರೆ, ಆಶಾ ಕೋರೆ, ಪ್ರವೀಣ ಬಾಗೇವಾಡಿ, ಡಾ.ಎಚ್.ಬಿ.ರಾಜಶೇಖರ, ಎಂ.ಸಿ.ಕೊಳ್ಳಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಐಶ್ವರ್ಯಾ ಗಣಾಚಾರಿ ನಿರೂಪಿಸಿ, ವಂದಿಸಿದರು.ಕೋಟ್....
ತನು ಮನದಿಂದ ಮಾಡುವ ದಾನವು ಪುಣ್ಯದ ಕೆಲಸ. ಅದು ಲಿಂಗಪೂಜೆಯಂತೆ. ಅದರಲ್ಲಿ ಶಿಕ್ಷಣಕ್ಕಾಗಿ ನೀಡುವ ಭೂದಾನ ಅತ್ಯಂತ ಶ್ರೇಷ್ಠವಾದದ್ದು. ಶಿರಕೋಳಿ ಕುಟುಂಬದವರು ಶಿಕ್ಷಣಕ್ಕಾಗಿ ನೀಡಿದ ದಾನ ಅಮರವೆನಿಸಿಕೊಂಡಿದೆ. ಹಳ್ಳಿಯಲ್ಲಿ ಕೆಎಲ್‍ಇ ಸಂಸ್ಥೆಯು ಮಾಡರ್ನ್ ಶಾಲೆಯನ್ನು ಪ್ರಾರಂಭಿಸುವ ಮೂಲಕ ಮಹತ್ತರವಾದ ಕೊಡುಗೆ ನೀಡಿದೆ.-ಡಾ.ಸುಧಾ ಮೂರ್ತಿ, ರಾಜ್ಯಸಭಾ ಸದಸ್ಯೆ, ಪದ್ಮಭೂಷಣ ಪುರಸ್ಕೃತೆ.
----ಕೇವಲ 6 ತಿಂಗಳಲ್ಲಿ ಹುಬ್ಬಳ್ಳಿಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಮುಂಬಯಿನ ಶಾಲೆ ಜನ ಸೇವೆಗೆ ಅರ್ಪಣೆಯಾಗಲಿದೆ. ಅಲ್ಲದೇ ಇನ್ನೆರಡು ತಿಂಗಳಲ್ಲಿ ಬೆಳಗಾವಿಯಲ್ಲಿ 300 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಲೋಕಾರ್ಪಣೆಗೊಳ್ಳಲಿದೆ. 4,500 ಹಾಸಿಗೆಗಳ ಆಸ್ಪತ್ರೆಯ ಮೂಲಕ ರೋಗಿಗಳ ಸೇವೆಯಲ್ಲಿ ನಿರತವಾಗಿರುವ ಸಂಸ್ಥೆಯು ಅಂಗಾಂಗ ಕಸಿ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಶೀಘ್ರದಲ್ಲಿಯೇ ಲಂಗ್ಸ್(ಶ್ವಾಸಕೋಶ) ಕಸಿ ನೆರವೇರಿಸಲು ಅಣಿಯಾಗಿದ್ದೇವೆ.
-ಡಾ.ಪ್ರಭಾಕರ ಕೋರೆ, ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರು.