ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ನೀಡಿದ ಸಂವಿಧಾನ ಹಾಗೂ ಬೌದ್ಧ, ಬಸವ ತತ್ವಗಳೇ ಸಮಸಮಾಜ ನಿರ್ಮಾಣಕ್ಕೆ ದಾರಿದೀಪ ಎಂದು ಕಸಾಪ ಜಿಲ್ಲಾ ಪ್ರಥಮ ಬಂಡಾಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ದಲಿತ ಪರ ಹೋರಾಟಗಾರ ಮಾರುತಿ ಬೌದ್ದೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ನೀಡಿದ ಸಂವಿಧಾನ ಹಾಗೂ ಬೌದ್ಧ, ಬಸವ ತತ್ವಗಳೇ ಸಮಸಮಾಜ ನಿರ್ಮಾಣಕ್ಕೆ ದಾರಿದೀಪ ಎಂದು ಕಸಾಪ ಜಿಲ್ಲಾ ಪ್ರಥಮ ಬಂಡಾಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ದಲಿತ ಪರ ಹೋರಾಟಗಾರ ಮಾರುತಿ ಬೌದ್ದೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ದಲಿತ ಬಂಡಾಯ ಸಮ್ಮೇಳನ ಆಯೋಜಿಸಿರುವುದು ಐತಿಹಾಸಿಕ. ಬಂಡಾಯ ಸಾಹಿತ್ಯ ಮತ್ತು ಚಳವಳಿಯ ಬೇರುಗಳು ಬಸವಣ್ಣನವರ ಕಾಲದಿಂದಲೂ ಬೆಳೆದು ಬಂದಿದ್ದು, ಸಮಾಜದಲ್ಲಿರುವ ಅಸಮಾನತೆ ಹಾಗೂ ಶೋಷಣೆಯ ವಿರುದ್ಧ ಬಂಡಾಯ ಸಾಹಿತ್ಯವೇ ಪ್ರಮುಖ ಅಸ್ತ್ರವಾಗಿದೆ ಎಂದು ತಿಳಿಸಿದರು.
ಇಂದಿಗೂ ಸಮಾಜದಲ್ಲಿರುವ ಮೌಢ್ಯತೆ, ಜಾತೀಯತೆ ಮತ್ತು ಅಸ್ಪೃಶ್ಯತೆಯಂತಹ ಪಿಡುಗುಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದ ಅವರು ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ, ಶಿಕ್ಷಣದ ಪ್ರಾಮುಖ್ಯತೆ ಹಾಗೂ ಸಂವಿಧಾನದ ಹಕ್ಕುಗಳ ರಕ್ಷಣೆ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾದ ಪ್ರಥಮ ‘ದಲಿತ ಬಂಡಾಯ ಸಮ್ಮೇಳನ’ವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು ಇದು ತಮಗೆ ಅತ್ಯಂತ ಹರ್ಷ ತಂದಿದೆ ಎಂದರು.
ಸಂವಿಧಾನ ಮತ್ತು ಬೌದ್ಧ, ಬಸವ ತತ್ವಗಳೇ ಸಮಸಮಾಜ ನಿರ್ಮಾಣದ ಅಸ್ತ್ರ:
ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ನೀಡಿರುವ ಸಂವಿಧಾನ ಹಾಗೂ ಬೌದ್ಧ, ಬಸವ ತತ್ವಗಳೇ ಸಮಸಮಾಜ ನಿರ್ಮಾಣಕ್ಕೆ ಪ್ರಮುಖ ಅಸ್ತ್ರ ಹಾಗೂ ದಾರಿದೀಪವಾಗಿವೆ ಎಂದು ಅಭಿಪ್ರಾಯಪಟ್ಟರು.
ಭಾರತ ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಕೊಡುಗೆ ಅಪಾರವಾಗಿದ್ದು, ಪ್ರತಿಯೊಬ್ಬರೂ ಆ ಹಾದಿ ಯಲ್ಲಿ ಸಾಗಬೇಕು. ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಲು ಡಾ. ಅಂಬೇಡ್ಕರ್ ಅವರ ಕೊಡುಗೆಯೇ ಕಾರಣ ಎಂದು ಸ್ಮರಿಸಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯದಲ್ಲಿ ಶ್ರೇಷ್ಠ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಇಂತಹ ವೇದಿಕೆಗಳ ಮೂಲಕ ಬಂಡಾಯ ಸಾಹಿತ್ಯ ಮತ್ತು ಚಿಂತನೆಗಳು ಜನಸಾಮಾನ್ಯರನ್ನು ತಲುಪುತ್ತಿರುವುದು ಶ್ಲಾಘನೀಯ. ಸಮಾಜದಲ್ಲಿರುವ ಅಸಮಾನತೆ, ಶೋಷಣೆ ಮತ್ತು ತಾರತಮ್ಯಗಳನ್ನು ಹೋಗಲಾಡಿಸಲು ಸಾಹಿತ್ಯ ಮತ್ತು ಸಂವಿಧಾನಾತ್ಮಕ ಜಾಗೃತಿ ಅತ್ಯವಶ್ಯಕ ಎಂದು ತಿಳಿಸಿದರು.
ಈ ಬಂಡಾಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಚಿಂತಕ ಹಾಗೂ ಸಾಹಿತಿ ಮಾರುತಿ ಬೌದ್ಧೆ ಅವರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ ಎಂದು ಬಣ್ಣಿಸಿದ ಅವರು, ಮಾರುತಿ ಬೌದ್ಧೆ ಅವರು ದೀರ್ಘಕಾಲದಿಂದ ಅಸಮಾನತೆ ಮತ್ತು ಅಸ್ಪೃಶ್ಯತೆ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ ಎಂದರು.
ಬಹಿರಂಗ ಅಧಿವೇಶನದಲ್ಲಿ 6 ನಿರ್ಣಯಗಳ ಮಂಡನೆ ಬೀದರ್ ನಗರದಲ್ಲಿ ಶನಿವಾರ ನಡೆದ ದಲಿತ ಬಂಡಾಯ ಸಮ್ಮೇಳನದಲ್ಲಿ 6 ನಿರ್ಣಯಗಳನ್ನು ಕೈಗೊಳ್ಳಲಾಯಿತು. ದಿವಂಗತ ಬಿ.ಶ್ಯಾಮ ಸುಂದರ ಅವರ ಜೀವನ ಮತ್ತು ಸಾಧನೆಗಳ ಕುರಿತು ಅಧ್ಯಯನ ಮಾಡಿಸಿ ಕೃತಿ ಸಂಪುಟವನ್ನು ಕರ್ನಾಟಕ ಸರ್ಕಾರವೇ ಪ್ರಕಟಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಆಗದಂತೆ ನೋಡಿಕೊಳ್ಳಬೇಕು ಕರ್ನಾಟಕದ್ಯಂತ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಬೀದರ್ ಕನ್ನಡ ಭವನ ಸಾಹಿತ್ಯ ಪರಿಷತ್ತಿನ ಸುಪುರ್ದಿಯಲ್ಲಿ ಇರುವಂತೆ ಆದೇಶಿಸಬೇಕು. ಡಾ.ಚೆನ್ನಬಸವ ಪಟ್ಟದೇವರು ರಂಗಮಂದಿರವನ್ನು ಸಂಪೂರ್ಣವಾಗಿ ನವೀಕರಿಸಬೇಕು. ದಲಿತ ಸಾಹಿತ್ಯ ಅಧ್ಯಯನ ಸಂಸ್ಥೆ ಬೀದರ್ ವಿವಿಯಲ್ಲಿ ಜಿಲ್ಲೆಯ ದಲಿತ ಬಂಡಾಯ ಹೋರಾಟಗಾರರ ಕುರಿತು ಪುಸ್ತಕ ಪ್ರಕಟಿಸಬೇಕು. ಎಂ.ಎಸ್. ಮನೋಹರ್ ಗೊತ್ತುವಳಿ ಮಂಡಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದರು.ಶಿವಶಂಕರ್ ಟೋಕರೆ ಉಪಸ್ಥಿತಿ ವಹಿಸಿದರು. ಮುಖ್ಯ ಅತಿಥಿಗಳ ರೂಪದಲ್ಲಿ ಎಲ್ಲಾ ತಾಲೂಕಿನ ಕನ್ನಡ ಸಹಿತ ಪರಿಷತ್ ತಾಲೂಕಾಧ್ಯಕ್ಷರು ಭಾಗವಹಿಸಿದ್ದರು. ಸರ್ವಾನುಮತದಿಂದ ಮೇಲಿನ ನಿರ್ಣಯಗಳನ್ನು ಅಂಗೀಕರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.