ಕನ್ನಡಪ್ರಭ ವಾರ್ತೆ ಕೊಪ್ಪಳ
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ಆಸ್ಟ್ರೇಲಿಯನ್ ಮೂಲದ ರೆಡ್ ನೆಪಿಯರ್ ಹೆಸರಿನ ಮೇವಿನ ಬೆಳೆಯ ಕ್ಷೇತ್ರೋತ್ಸವವು ಇತ್ತೀಚೆಗೆ ಯಲಬುರ್ಗಾ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ನಡೆಯಿತು.ಕ್ಷೇತ್ರೋತ್ಸವಕ್ಕೆ ಆಗಮಿಸಿದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ವಿ. ರವಿ ಮಾತನಾಡಿ, ಈ ಹುಲ್ಲು ಆಸ್ಟ್ರೇಲಿಯಾ ಮೂಲದ ಮೇವಿನ ಬೆಳೆಯಾಗಿದ್ದು, ಪ್ರಥಮ ಬಾರಿಗೆ ಕೊಪ್ಪಳ ಜಿಲ್ಲೆಯಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರನಿಂದ ಮುಂಚೂಣಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುವುದರ ಮೂಲಕ ಪರಿಚಯಿಸಲಾಗುತ್ತಿದೆ. ಈ ಹುಲ್ಲು ಪ್ರತಿ ಕೊಯ್ಲಿಗೆ 25-30 ಕೆಜಿ ತೂಕ ಹೊಂದಿದ್ದು, ರೈತರೇ ಹೇಳುವಂತೆ ಹೆಚ್ಚಿನ ಸಾಂಧ್ರತೆ ಹೊಂದಿದ್ದು, ಉತ್ತಮ ಮೇವಿನ ಬೆಳೆಯಾಗಿದೆ. ನಾಟಿ ಮಾಡಿದ ನಾಲ್ಕನೇ ತಿಂಗಳಿನಿಂದಲೇ ಕೊಯ್ಲಿಗೆ ಬರುವ ಈ ಹುಲ್ಲಿನ ಬೆಳೆ ಪ್ರತಿ ಎಕರೆಗೆ ಪ್ರತಿ ಕಟಾವಿಗೆ 40-50 ಟನ್‌ನಷ್ಟು ಇಳುವರಿ ನೀಡುವ ಸಾಮರ್ಥ್ಯ ಹೊಂದಿದ್ದು, ಎಕರೆಗೆ ಒಂದು ವರ್ಷಕ್ಕೆ 200 ಟನ್‌ನಷ್ಟು ಹಸಿ ಹುಲ್ಲಿನ ಇಳುವರಿ ನೀಡುತ್ತದೆ ಮತ್ತು ಬಹು ಕೊಯ್ಲಿಗೆ ಸೂಕ್ತವಾದ ಈ ಬೆಳೆ ವರ್ಷದಲ್ಲಿ ಎರಡು ತಿಂಗಳಿಗೊಮ್ಮೆ 4-5 ಬಾರಿ ಕೊಯ್ಲು ಮಾಡಬಹುದು. ಪ್ರತಿ ಬಾರಿ ಕೊಯ್ಲಿನ ನಂತರ ಎಕರೆಗೆ 20-25 ಕಿ. ಗ್ರಾಂ. ಸಾರಜನಕಯುಕ್ತ ಗೊಬ್ಬರ ಕೊಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಸಾವಯವ ಗೊಬ್ಬರ ನೀಡುವುದು ಇನ್ನೂ ಹೆಚ್ಚಿನ ಅನುಕೂಲಕರವಾಗಿದ್ದು, ರೈತರು ಕಡಿಮೆ ಖರ್ಚಿನಲ್ಲಿ ಈ ಬೆಳೆ ನಿರ್ವಹಣೆಯಿಂದ ಹೆಚ್ಚಿನ ಲಾಭ ಪಡೆಯಬಹುದು ಎಂದು ರೆಡ್ ನೇಪಿಯರ್ ಬೆಳೆ ಬಗ್ಗೆ ಮಾಹಿತಿ ನೀಡಿದರು.
ಪ್ರಗತಿಪರ ಯುವ ರೈತ ಅರುಣ ಕುಮಾರ ಮಾತನಾಡಿ, ಇದೊಂದು ಉತ್ತಮ ಮೇವಿನ ತಳಿಯಾಗಿದ್ದು, ಬದುವಿನಲ್ಲಿ ಬೆಳೆದರೆ ಇಳುವರಿ ಹೆಚ್ಚಾಗಿರುತ್ತದೆ ಮತ್ತು ನೋಡಲು ಆಕರ್ಷಕವಾಗಿರುತ್ತದೆ. ಹರಿತ ಇಲ್ಲದಿರುವ ಇದರ ಎಲೆಗಳಿಂದ ಜಾನುವಾರುಗಳಿಗೆ ಯಾವುದೇ ಅಪಾಯ ಇರುವುದಿಲ್ಲ. ಈ ಹುಲ್ಲನ್ನು ಸಾವಯವ ಪದ್ದತಿಯಲ್ಲಿ ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಕೊಡುತ್ತದೆ ಮತ್ತು ಜಾನುವಾರುಗಳಲ್ಲಿ ಹಾಲಿನ ಉತ್ಪಾದನೆ ಕೂಡ ಹೆಚ್ಚಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭ ಆತ್ಮ ಯೋಜನೆಯ ಕೃಷಿ ಇಲಾಖೆಯ ಯಮನೂರಪ್ಪ, ಪ್ರಕಾಶ ಬಣಕಾರ, ಕ್ಷೇತ್ರ ಸಹಾಯಕರು, ಪ್ರಗತಿಪರ ರೈತರಿದ್ದರು.