ಯಲ್ಲಾಪುರ: ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಜೀವಾಳ. ಇವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಅತ್ಯಗತ್ಯ. ತಮ್ಮ ಬಾಲ್ಯದ ಜಾನಪದೀಯ ಸಂಭ್ರಮಾಚರಣೆಗಳನ್ನು ಮತ್ತು ಜಾನಪದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಇಂತಹ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಉತ್ತರ ಕನ್ನಡ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಜಾನಪದ ಕಲೆಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿರುವುದು ವಿಶೇಷವಾಗಿದೆ. ಇಂದಿನ ಧಾವಂತದ ಜೀವನಶೈಲಿಯಲ್ಲಿ, ನಮ್ಮ ಮೂಲ ಸಂಸ್ಕೃತಿಯಿಂದ ನಾವು ದೂರವಾಗುತ್ತಿದ್ದೇವೆ. ಇಂತಹ ಜಾನಪದ ಉತ್ಸವಗಳು ನಮ್ಮ ಗ್ರಾಮೀಣ ಸೊಗಡು, ಆಚಾರ-ವಿಚಾರಗಳು ಮತ್ತು ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸಲು ಅತ್ಯಂತ ಸಹಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ್ ಮಾತನಾಡಿ, ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ಜಾನಪದ ಉತ್ಸವವು ವಿದ್ಯಾರ್ಥಿಗಳಿಗೆ ನಮ್ಮ ಮಣ್ಣಿನ ಸಂಸ್ಕೃತಿಯನ್ನು ಪರಿಚಯಿಸಲು ಉತ್ತಮ ವೇದಿಕೆಯಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಪಪಂ ಅಧ್ಯಕ್ಷೆ ನರ್ಮದಾ ನಾಯಕ್ ಮಾತನಾಡಿ, ಜಾನಪದ ಕಲೆಗಳು ಕೇವಲ ಮನರಂಜನೆಯ ಸಾಧನಗಳಲ್ಲ. ಬದಲಿಗೆ ಅವು ನಮ್ಮ ಇತಿಹಾಸ, ಸಂಪ್ರದಾಯಗಳು ಮತ್ತು ಜೀವನ ಶೈಲಿಯನ್ನು ಪ್ರತಿಬಿಂಬಿಸುವ ಜೀವಂತ ರೂಪಗಳು. ನಮ್ಮ ಪೂರ್ವಜರು ನಮಗೆ ಬಿಟ್ಟು ಹೋಗಿರುವ ಅಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ಈ ಕಲೆಗಳನ್ನು ಕೇವಲ ನೋಡುವುದಲ್ಲದೆ, ಅವುಗಳನ್ನು ಕಲಿತು, ಅಭ್ಯಾಸ ಮಾಡಿ ಮುಂದಿನ ಪೀಳಿಗೆಗೆ ದಾಟಿಸಬೇಕು ಎಂದರು.
ಉತ್ಸವದಲ್ಲಿ ಕಾಲೇಜಿನ ವಿದ್ಯಾರ್ಥಿ ಕಲಾ ತಂಡಗಳು ಭಾಗವಹಿಸಿದ್ದವು. ಉತ್ತರ ಕನ್ನಡದ ವಿಶಿಷ್ಟ ಜಾನಪದ ನೃತ್ಯಗಳಾದ ಸುಗ್ಗಿ ಕುಣಿತ, ಕೋಲಾಟ, ಹಾಲಕ್ಕಿ ಕುಣಿತಗಳು ವಿಶೇಷ ಗಮನ ಸೆಳೆದವು. ಇದರೊಂದಿಗೆ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ಗಾರುಡಿಗೊಂಬೆ, ಭಜನೆ, ಸೋಬಾನೆ ಪದಗಳು ಮತ್ತು ಲಾವಣಿಗಳಂತಹ ಪ್ರದರ್ಶನಗಳು ನೆರೆದಿದ್ದವರನ್ನು ರಂಜಿಸಿದವು. ಭರತನಾಟ್ಯ, ಗೌಳಿ ನೃತ್ಯ ಮುಂತಾದವುಗಳು ಕಲಾವಿದರ ಉತ್ಸಾಹಭರಿತ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿದವು.
ಸಹಾಯಕ ಪ್ರಾಧ್ಯಾಪಕ ಶರತಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಶಾಂತೇರಿ ದಾಮೋದರ್ ಪೈ ಬಹುಮಾನ ವಿತರಿಸಿದರು. ವಿದ್ಯಾರ್ಥಿನಿಯರಾದ ವೇದ ಭಟ್ಟ ಪ್ರಾರ್ಥಿಸಿದರು. ಕಾವ್ಯಶ್ರೀ ಮರಾಠಿ ಮತ್ತು ನಂದಿತಾ ಭಾಗ್ವತ್ ನಿರ್ವಹಿಸಿದರು. ಮೇಘಾ ದೇವಳಿ ವಂದಿಸಿದರು.