ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ನಾದ ಕೆ.ಡಿ. ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ ಹಮ್ಮಿಕೊಂಡ ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದ ಉತ್ತರ ಭಾಗ ಸೇರಿದಂತೆ ಮೈಸೂರು ಪ್ರಾಂತ್ಯದಲ್ಲಿ ಸೋಲಿಗರು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸುಡಗಾಡು ಸಿದ್ಧರು ಮತ್ತು ಗೊಂದಳಿ ಸೇರಿದಂತೆ ಹಲವು ಬುಡಕಟ್ಟು ಸಮುದಾಯಗಳು ತಮ್ಮದೇ ಆದ ವಿಶಿಷ್ಟ ಜಾನಪದ ಪರಂಪರೆ ಹೊಂದಿವೆ. ಜಾನಪದದಲ್ಲಿ ಶಿಷ್ಟ ಹಾಗೂ ಅಶಿಷ್ಟ ಸಾಹಿತ್ಯದ ಅಂಶಗಳಿದ್ದರೂ, ಅವುಗಳಲ್ಲಿ ಹಾಸ್ಯ, ವಿಡಂಬನೆ, ಚಿಂತನೆ ಹಾಗೂ ಜೀವನ ಮೌಲ್ಯಗಳು ಅಡಕವಾಗಿವೆ ಎಂದವರು ವಿವರಿಸಿದರು.ಒಡಪು, ಒಡಗೆತೆ, ಕಥೆ, ತ್ರಿಪದಿಗಳು ಸೇರಿದಂತೆ ಹಲವು ಪ್ರಕಾರಗಳ ಮೂಲಕ ಜಾನಪದವು ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಶ್ರಮಜೀವಿಗಳ ಬದುಕಿನಲ್ಲಿ ಕಸ ತೆಗೆಯುವಾಗ, ಬೀಸುವಾಗ, ಕುಟ್ಟುವಾಗ, ಮದುವೆ ಮತ್ತಿತರ ಸಂದರ್ಭಗಳಲ್ಲಿ ಜಾನಪದ ಹಾಡುಗಳು ಮತ್ತು ಆಚರಣೆಗಳು ಬೆಸೆದುಕೊಂಡಿವೆ ಎಂದು ಹೇಳಿದರು.
ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಪಂಡಿತ ಅವಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಳಿವಿನಂಚಿನಲ್ಲಿರುವ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಜಾನಪದ ಪರಿಷತ್‌ನ ಡಾ. ಜಾನಪದ ಎಸ್. ಬಾಲಾಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ವಿದೇಶಗಳಲ್ಲಿಯೂ ಜಾನಪದ ಸಮ್ಮೇಳನಗಳನ್ನು ಆಯೋಜಿಸಿ ಜಾನಪದ ಸಂರಕ್ಷಣೆಗೆ ಶ್ರಮಿಸುತ್ತಿರುವುದು ಹೆಮ್ಮೆಯ ಸಂಗತಿ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಜಾನಪದ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಯುವ ಪೀಳಿಗೆಗೆ ಜಾನಪದದ ಅರಿವು ಮೂಡಿಸಲು ಸಹಕಾರಿಯಾಗಿದೆ.ಜಾನಪದ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ; ಜಾನಪದ ಬೆಳೆದರೆ ನಮ್ಮ ಮುಂದಿನ ಪೀಳಿಗೆಯ ಬೇರುಗಳು ಗಟ್ಟಿಯಾಗುತ್ತವೆ ಎಂದು ಹೇಳಿದರು.
ಬುಡಕಟ್ಟು ಕಲಾವಿದರಾದ ದೇವಿಂದ್ರ ಪ. ಗೊಂದಳಿ, ಬಾಬು ಗೊಂದಳಿ, ಸುಭಾಸ್ ಗೊಂದಳಿ ಮತ್ತಿತರರು ಗೊಂದಳಿ ಕಲಾ ಪ್ರದರ್ಶನ ನೀಡಿದರು. ಸುಭಾಸ್ ಕಾಮಾ ಅವರು ಎಕ್ತಾರಿ ಪದಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಸಂಗನಗೌಡ ಹಚ್ಚಡದ ನಿರೂಪಿಸಿದರು. ಅಣ್ಣಾರಾಯ ಗುಗದಡ್ಡಿ ವಂದಿಸಿದರು.