ಜಾನಪದ ಭಾರತೀಯ ಬದುಕಿನ ಸಂಸ್ಕೃತಿಯಾಗಿದೆ: ಜಾನಪದ ಬಾಲಾಜಿ

KannadaprabhaNewsNetwork | Published : Jan 25, 2024 2:01 AM

ಸಾರಾಂಶ

ಜಾನಪದ ಎಂದರೆ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಾಗಿರದೆ ಅದು ಭಾರತೀಯ ಬದುಕಿನ ಸಂಸ್ಕೃತಿಯಾಗಿದೆ ಎಂದು ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಜಾನಪದ ಬಾಲಾಜಿ ಹೇಳಿದರು.

- ಚಿಕ್ಕಮಗಳೂರು ಜಿಲ್ಲಾ ಕಜಾಪ, ಕೊಪ್ಪ ತಾಲೂಕು ಪರಿಷತ್‌ನ ಘಟಕಗಳ ಪದಾಧಿಕಾರಿಗಳ ಪದಗ್ರಹಣ

ಕನ್ನಡಪ್ರಭ ವಾರ್ತೆ, ಕೊಪ್ಪ

ಜಾನಪದ ಎಂದರೆ ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಾಗಿರದೆ ಅದು ಭಾರತೀಯ ಬದುಕಿನ ಸಂಸ್ಕೃತಿಯಾಗಿದೆ ಎಂದು ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಜಾನಪದ ಬಾಲಾಜಿ ಹೇಳಿದರು.

ಬಾಳಗಡಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಮತ್ತು ಕೊಪ್ಪ ತಾಲೂಕು ಪರಿಷತ್‌ನ ಘಟಕಗಳ ಪದಾಧಿಕಾರಿಗಳ ಪದಗ್ರಹಣ, ಕೊಪ್ಪ ತಾಲೂಕು ಮಟ್ಟದ ಭಜನೆ ಹಾಗೂ ಸಮೂಹ ಜಾನಪದ ಗೀತೆ ಸ್ಪರ್ಧೆ, ‘ವಿಕಾಸಕ್ಕಾಗಿ ಜಾನಪದ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಪೂರ್ವಿಕರು ಗರ್ಭಿಣಿಯರ ಮುಂದೆ 9 ತಿಂಗಳ ಕಾಲ ಜಾನಪದ ಗೀತೆಗಳನ್ನು ಹಾಡುತ್ತಾ ಗರ್ಭಾವಸ್ಥೆಯಲ್ಲಿರುವ ಮಗುವಿಗೆ ಸಂಸ್ಕಾರ ನೀಡುತ್ತಿದ್ದರು. ಹೀಗೆ ಸಂದರ್ಭಕ್ಕನುಸಾರವಾಗಿ ಪ್ರತಿಯೊಂದಕ್ಕೂ ಜಾನಪದ ಗೀತೆ ಹಾಡುತ್ತಿದ್ದರು. ಜಾನಪದ ಎನ್ನುವುದು ಅಲಿಖಿತವಾಗಿದ್ದರೂ ಜನಪದರ ಬಾಯಿಂದ ಬಾಯಿಗೆ ಹಬ್ಬಿ ಪ್ರಸ್ತುತ ಕಾಲಕ್ಕೂ ಗಟ್ಟಿಯಾಗಿ ಉಳಿದುಕೊಂಡು ಬಂದಿದೆ. ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯದೆಲ್ಲೆಡೆ ಇರುವ ತಾಲೂಕು, ಹೋಬಳಿ ಹಾಗೂ ಗ್ರಾಮ ಘಟಕಗಳ ಮುಖೇನ ವರ್ಷವಿಡಿ ಸಹಸ್ರಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜಾನಪದ ಸಮಸ್ಯೆಗಳ ಬಗ್ಗೆ ಅದನ್ನು ಉಳಿಸಿ ಬೆಳೆಸಲು ಮುಂದಾಗುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕಾದ ಬಗ್ಗೆ ವಿವರಣೆ ನೀಡಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಆಧುನಿಕ ಬದುಕಿನ ಭರಾಟೆಯಲ್ಲಿ ಜಾನಪದ ಕಲೆ ನಶಿಸುತ್ತಿದ್ದು ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು. ಕಲೆ, ಸಾಹಿತ್ಯ ಯಾವುದೇ ಪಕ್ಷ, ಜಾತಿ, ಧರ್ಮಕ್ಕೆ ಸೇರಿರದೆ ಮನುಷ್ಯ ಸಂಬಂಧ ಮತ್ತು ಸಾಮರಸ್ಯ ಉಳಿಸುವ ಸೇತುವೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಜಾನಪದದಲ್ಲಿ ಜೀವನದ ದೈನಂದಿನ ಪ್ರತೀ ಚಟುವಟಿಕೆಗಳು ಪ್ರೋತ್ಸಾಹ ನೀಡುವಂತ ಹಾಡುಗಳಿವೆ. ಹಂತಹಂತವಾಗಿ ಅವನತಿಯ ಹಂತ ತಲುಪುತ್ತಿರುವ ಜಾನಪದ ವನ್ನು ಉನ್ನತೀಕರಣಗೊಳಿಸಲು ಮುಂದಾಗಬೇಕು. ಕಲಾವಿದರ ಮಾಸಾಶನ ಹೆಚ್ಚಿಸುವ ಬಗ್ಗೆ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು. ರಾಜ್ಯಮಟ್ಟದ ಜಾನಪದ ಸಮ್ಮೇಳನವನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿಯೇ ನಡೆಸಲು ಚರ್ಚಿಸಲಾಗುವುದು ಎಂದರು.

ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್, ಒಕ್ಕಲಿಗ ಸಂಘದ ಉಪಾಧ್ಯಕ್ಷ ಯು.ಎಸ್.ಶಿವಪ್ಪ, ಕಜಾಪ ತಾಲೂಕು ಕಾರ್ಯದರ್ಶಿ ಅಶೋಕ್ ನಾರ್ವೆ, ಕೆ.ಟಿ.ಮಿತ್ರ, ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಶಾಸಕ ಟಿ.ಡಿ.ರಾಜೇಗೌಡ ವಿವಿಧ ಕ್ಷೇತ್ರದ ಜಾನಪದ ಕಲಾವಿದರನ್ನು ಗೌರವಿಸಲಾಯಿತು.

ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಓಣಿತೋಟ ರತ್ನಾಕರ್‌, ಕೊಪ್ಪ ತಾಲೂಕು ಕಜಾಪ ಅಧ್ಯಕ್ಷ ಎಚ್.ಎಲ್.ದೀಪಕ್ ಕುದುರೆಗುಂಡಿ ಇವರಿಗೆ ಪದಗ್ರಹಣ ನೆರವೇರಿಸಲಾಯಿತು.ಮೂಡಿಗೆರೆ, ಶೃಂಗೇರಿ, ಕಳಸ, ತಾಲೂಕುಗಳ ಕಜಾಪ ಅಧ್ಯಕ್ಷರು, ಕೊಪ್ಪ ತಾಲೂಕು ಘಟಕದ ಪದಾಧಿಕಾರಿಗಳು ಇತರರಿದ್ದರು.

Share this article