ಶಿಗ್ಗಾಂವಿ: ಜಾಗತೀಕರಣದಿಂದಾಗಿ ಕೃಷಿಯ ಮೇಲೆ ನಮ್ಮ ನಿಯಂತ್ರಣ ತಪ್ಪುತ್ತಿದೆ. ನಮ್ಮದು ಬಹುಸಂಸ್ಕೃತಿಯ ದೇಶಿ ಜಾನಪದವು ಸಾಮಾಜಿಕವಾದ ಮೂಲ ವಿಜ್ಞಾನವಾಗಿದೆ. ಎಲ್ಲದಕ್ಕೂ ಜ್ಞಾನ ಶಾಖೆಯಾಗಿದ್ದು, ಇಲ್ಲಿ ಜಾನಪದ ಸಂಶೋಧನೆ ವಿಭಿನ್ನ ರೀತಿಯಲ್ಲಿ ಆಗಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ತಿಳಿಸಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪಿಎಚ್.ಡಿ ಕೋರ್ಸ್ ವರ್ಕ್ ಕಮ್ಮಟ- ೨೦೨೫ ರ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.ಕಲೆಗಳನ್ನು ರಂಗು ರಂಗಾಗಿ ತೋರಿಸುವುದು ಜಾನಪದವಲ್ಲ. ಜಾನಪದ ಜ್ಞಾನ ಭೂಮಿ ತೂಕದ್ದು. ಆಕಾಶದಷ್ಟು ಅಗಲವಾದದ್ದು. ದೇಶಿಯ ನೆಲೆಯಲ್ಲಿ ಆಲೋಚನೆ ಮಾಡುವ ಸಂಶೋಧನಾ ಪ್ರವೃತ್ತಿ ಇರುವವರು ಈ ಕ್ಷೇತ್ರಕ್ಕೆ ಬಂದಾಗ ಉತ್ತಮ ಸಂಶೋಧನೆಗಳಾಗಲಿವೆ. ದೇಶಿ ಚಿಂತನೆ ರೂಪಿಸುವ ಅಗತ್ಯವಿದೆ ಎಂದರು.ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೂಮಿ ಮತ್ತು ಆಕಾಶದ ನಡುವೆ ಅಚ್ಚಳಿಯದೇ ಇರುವ ರೀತಿಯಲ್ಲಿ ಕೆಲಸ ಮಾಡುವುದು ಮಹತ್ವದ್ದು. ಯೋಗಿ, ಋಷಿಗಳು ಮಾಡುವಷ್ಟು ಕೆಲಸವನ್ನು ಪ್ರೊ. ಅಂಬಳಿಕೆ ಹಿರಿಯಣ್ಣ ಅವರು ಸಂಸ್ಥಾಪಕ ಕುಲಪತಿಗಳಾಗಿ ಮಾಡಿದ್ದಾರೆ ಎಂದರು.
ಸಹಾಯಕ ಕುಲಸಚಿವ, ಪಿಎಚ್.ಡಿ ಕೋರ್ಸ್ ವರ್ಕ್ ಸಂಚಾಲಕರಾದ ಶಹಜಹಾನ್ ಮುದಕವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವವಿದ್ಯಾಲಯಕ್ಕೆ ಮುಂದಿನ ದಿನಮಾನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದರು.
ಸಂಶೋಧನಾರ್ಥಿಗಳಾದ ಅನಿತಾ ಟಿ.ಎಸ್., ಕವನ ವಾಚನ ಮಾಡಿ ಅನುಭವ ಹಂಚಿಕೊಂಡರು ಹಾಗೇ ಕೆ.ಎನ್. ಕೃಷ್ಣಾ, ಇಂದಿರಾ ಹೊಳ್ಕರ್, ರಂಗನಾಥ ಕುಲಕರ್ಣಿ ಕಮ್ಮಟದ ಕುರಿತು ಅಭಿಪ್ರಾಯ ಹಂಚಿಕೊಂಡರು. ಸಂಶೋಧನಾರ್ಥಿ ಜಯಶ್ರೀ ಪಾಟೀಲ ಕವನ ವಾಚನ ಮಾಡಿದರು.ಸಹಾಯಕ ಸಂಶೋಧನಾಧಿಕಾರಿ ಹಾಗೂ ಪಿಎಚ್‌ಡಿ ಕೋರ್ಸ್ ವರ್ಕ್ ಸಂಚಾಲಕರಾದ ಡಾ. ಮಲ್ಲಿಕಾರ್ಜುನ ಮಾನ್ಪಡೆ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಹಾಗೂ ಪಿಎಚ್‌ಡಿ ಕೋರ್ಸ್ ವರ್ಕ್ ಸಂಚಾಲಕ ಡಾ. ಗಿರೇಗೌಡ ಅರಳಿಹಳ್ಳಿ ವಂದಿಸಿದರು. ಈ ಸಂದರ್ಭದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.