ಜನಪದ ಸಾಹಿತ್ಯ ಜೀವನ ಮೌಲ್ಯ, ಶ್ರಮ ಸಂಸ್ಕೃತಿಯ ಪ್ರತೀಕ: ರಾಮು ಮೂಲಗಿ

KannadaprabhaNewsNetwork |  
Published : Mar 08, 2026, 02:30 AM IST
ಗದಗ ನಗರದ ಶ್ರೀ ಅಡವೀಂದ್ರ ಸ್ವಾಮಿ ಮಠದ ಶ್ರೀ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಪ್ಪ ಕಾಶಪ್ಪನವರ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಗದಗ ನಗರದ ಅಡವೀಂದ್ರ ಸ್ವಾಮಿ ಮಠದ ಶ್ರೀ ಅನ್ನಪೂರ್ಣೇಶ್ವರಿ ಮಂದಿರದಲ್ಲಿ 345ನೇ ಮಾಸಿಕ ಶಿವಾನುಭವ ಹಾಗೂ ಜಗದ್ಗುರು ಶ್ರೀ ರೇಣುಕಾರ್ಯರ ಜಯಂತಿ ಮತ್ತು ತ್ರಿಭಾಷಾ ಕವಿ ಡಾ. ಪುಟ್ಟರಾಜ ಕವಿ ಗವಾಯಿಗಳವರ ಜಯಂತಿ ನಡೆಯಿತು.

ಗದಗ: ಜನಪದ ಸಾಹಿತ್ಯ ಜೀವನ ಮೌಲ್ಯ ಹಾಗೂ ಶ್ರಮ ಸಂಸ್ಕೃತಿಯ ಪ್ರತೀಕವಾಗಿ ಮೂಡಿ ಬಂದಿದ್ದು, ಮಾನವನ ಬದುಕಿನ ಪ್ರತಿಫಲವೇ ಜನಪದ. ಜನಪದ ನಡುವಳಿಕೆ ವಿವಿಧ ಆಚರಣೆ ಸಂಪ್ರದಾಯಗಳು ಗಮನಾರ್ಹವಾಗಿರುತ್ತವೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ. ರಾಮು ಮೂಲಗಿ ಹೇಳಿದರು.

ನಗರದ ಅಡವೀಂದ್ರ ಸ್ವಾಮಿ ಮಠದ ಶ್ರೀ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ನಡೆದ 345ನೇ ಮಾಸಿಕ ಶಿವಾನುಭವ ಹಾಗೂ ಜಗದ್ಗುರು ಶ್ರೀ ರೇಣುಕಾರ್ಯರ ಜಯಂತಿ ಮತ್ತು ತ್ರಿಭಾಷಾ ಕವಿ ಡಾ. ಪುಟ್ಟರಾಜ ಕವಿ ಗವಾಯಿಗಳವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವ ಕೃತಕತೆ, ತೋರಿಕೆಗಳಿಗೂ ಆಸ್ಪದ ಕೊಡದೇ ಜನಪದರು ತಾವು ನಂಬಿದ ದೇವರು, ಕೃಷಿ ಕಾಯಕಕ್ಕೆ ಶ್ರದ್ಧಾ-ಭಕ್ತಿಯಿಂದ ಮಣಿದು ಜನಪದ ಗೀತೆಗಳನ್ನು ಸೃಷ್ಟಿಸಿದ್ದಾರೆ. ಒಕ್ಕಲುತನ, ಹಬ್ಬ ಹರಿದಿನ, ಹರಕೆ, ಮದುವೆ ಸಂಪ್ರದಾಯಗಳ ಆಚರಣೆ, ಕುಣಿತ, ಆಟ-ಪಾಠ, ನಂಬಿಕೆ, ಪೂಜೆಯ ತಿಳಿವಳಿಕೆಯೇ ಜನಪದವಾಗಿದೆ. ಜನಪದರ ಪ್ರತಿಯೊಂದು ಆಚರಣೆ ವಿಧಿ-ವಿಧಾನಗಳಿಗೆ ತನ್ನದೇ ಆದ ಮಹತ್ವವಿದೆ ಎಂದರು.

ಹೋಳಿಹಬ್ಬ ಅನೇಕ ರೀತಿಯಲ್ಲಿ ವಿಶೇಷತೆ ಪಡೆದ ಆಚರಣೆಯಾಗಿದೆ. ಕಾಮ ಕೇವಲ ಒಂದು ಸಂಕೇತವಲ್ಲ, ಹಲವು ರೀತಿಯ ಅರ್ಥವತ್ತಾಗಿ ಕೂಡ ವೈವಿಧ್ಯ ಪಡೆದು, ಭಾರತೀಯರಲ್ಲಿ ಅದೊಂದು ಸಾಂಸ್ಕೃತಿಕ ಮಹತ್ವದ ಆಚರಣೆಯಾಗಿಬಿಟ್ಟಿದೆ. ಜನಪದ ಸಾಹಿತ್ಯದಲ್ಲಿ ಕಾಮದಹನ, ಹೋಳಿ ಕುರಿತಂತೆ ಹಲವಾರು ಶೀಲ, ಅಶ್ಲೀಲ ಹಾಡುಗಳು ಪ್ರಚಲಿತದಲ್ಲಿದ್ದು, ಅವು ಶೃಂಗಾರಭರಿತ ಹಾಗೂ ವಿನೋದವಾಗಿವೆ. ಹೋಳಿಹಬ್ಬ ಸಾಮರಸ್ಯ, ಭಾವೈಕ್ಯತೆ, ಜಾತ್ಯತೀತ ಧೋರಣೆಯಿಂದ ಅನಾದಿಕಾಲದಿಂದಲೂ ಮಹತ್ವ ಪಡೆದಿದೆ ಎಂದು ಹೇಳಿದರು.

ಶಿವಾನುಭವ ಸಮಿತಿ ಅಧ್ಯಕ್ಷ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ಜನಪದ ಸಾಹಿತ್ಯ ಮಾನವೀಯ ಮೌಲ್ಯಗಳನ್ನು, ಸಂಪ್ರದಾಯ, ನಂಬಿಕೆ, ಆಚರಣೆ ಹಾಗೂ ರೀತಿ ನೀತಿಗಳನ್ನು ತಲೆತಲಾಂತರದಿಂದ ಉಳಿಸಿಕೊಂಡು ಬಂದ ಸಾಹಿತ್ಯವಾಗಿದೆ. ನೀತಿ ಹಾಗೂ ಜೀವನ ಪ್ರೀತಿ, ದೈವಭಕ್ತಿ ಹಾಗೂ ಸಮಷ್ಟಿಹಿತ ಕಾಪಾಡುವ ಶಕ್ತಿ ಜನಪದ ಸಾಹಿತ್ಯಕ್ಕಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕದಾಂಪುರ-ನರಸಾಪುರ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಸಮ್ಮುಖ ವಹಿಸಿದ್ದ ಶ್ರೀ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಮಾತನಾಡಿದರು.

ಈ ವೇಳೆ ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ರಾಮಪ್ಪ ಕಾಶಪ್ಪನವರ ಅವರನ್ನು ಸನ್ಮಾನಿಸಲಾಯಿತು.

ಡಿಜಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ.ಎಸ್. ಹಿರೇಮಠ, ಗುರಪ್ಪ ನಿಡಗುಂದಿ, ಮಂಜುನಾಥ ಗಾಂಜಿ ಇದ್ದರು. ಪ್ರಭುಗೌಡ ಪಾಟೀಲ ಸ್ವಾಗತಿಸಿದರು. ಸಿದ್ದಣ್ಣ ಜವಳಿ ಪರಿಚಯಿಸಿದರು. ಪ್ರಕಾಶ ಬಂಡಿ ಕಾರ್ಯಕ್ರಮ ನಿರೂಪಿಸಿದರು. ಎಂ.ಎಂ. ಜೋಗಿನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇರಾನ್‌ ಮೇಲಿನ ದಾಳಿ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ
ಸಮಾಜದ ಮೌಲ್ಯ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಪಸರಿಸುವ ಶಕ್ತಿಯೇ ಮಹಿಳೆ: ಡಾ.ಬಿ.ಜಿ.ಕಲಾವತಿ