ತರೀಕೆರೆ: ಜಾನಪದ ಸಾಹಿತ್ಯ ತಲತಲಾಂತರದಿಂದ ಕಿವಿಯಿಂದ ಕಿವಿಗೆ, ಬಾಯಿಯಿಂದ ಬಾಯಿಗೆ ಹರಿದು ಬಂದಿದೆ. ಜಾನಪದ ಅನಕ್ಷರಸ್ಥ ಸಮಾಜದ ಭಾಗವಾಗಿಯೂ ಇದೆ. ತಲೆಮಾರಿನಿಂದ ತಲೆಮಾರಿಗೆ ಸಮುದಾಯದ ಸೃಷ್ಟಿಯಾಗಿ ಬರುವಾಗ ಅದರ ಮೂಲ ಕರ್ತೃ ಕಣ್ಮರೆಯಾಗಿ ಅದು ಸಮುದಾಯದ ಸ್ವತ್ತಾಗಿ ಉಳಿಯುತ್ತದೆ ಎಂದು ಸಾಹಿತಿ ಮನಸುಳಿ ಮೋಹನ್ ಅಭಿಪ್ರಾಯಪಟ್ಟರು.ಪ್ರಹರ್ಷಿತ ವಿದ್ಯಾ ಸಂಸ್ಥೆ, ಅಮ್ಮ ಆಕಾಡಮಿ ಅಫ್ ಪ್ಲೇ ಸ್ಕೂಲ್ ಹಾಗೂ ತರೀಕೆರೆ ತಾಲೂಕು ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಸಂಯುಕ್ತಾಶ್ರಯದಲ್ಲಿ ಪ್ರಹರ್ಷಿತ ಶಾಲಾ ಆವರಣದಲ್ಲಿ ಏರ್ಪಡಿಸಲಾದ ವಿಶ್ವ ಜಾನಪದ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಕುಲದ ಬದುಕಿಗೆ ಸಾಹಿತ್ಯವನ್ನು ಕಟ್ಟಿ ಕೊಡುವ ಮೂಲಕ ಜಾನಪದ ಸಾಹಿತ್ಯವು ಜಾಗತಿಕ ಮನ್ನಣೆ ಪಡೆಯುವ ಅರ್ಹತೆಯುಳ್ಳ, ಜೀವಪರ ಮತ್ತು ಜನ ಸಾಹಿತ್ಯವಾಗಿ ಇತಿಹಾಸದಿಂದ ಇಂದಿನವರೆಗೂ ಉಳಿದುಕೊಂಡು ಗಟ್ಟಿ ತನದ ಸಾಹಿತ್ಯವಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಜನಪದ ಪರಿಷತ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಕ್ಷಮ್ಮ, ಜಾನಪದ ಸಾಹಿತ್ಯಕ್ಕೆ ಪುರಾತನ ಇತಿಹಾಸವಿದೆ. ಸಂಸ್ಕೃತಿ ಮೂಲ ಬೇರು ಜಾನಪದ, ಭವ್ಯ ಭಾರತದ ಕರ್ನಾಟಕದಲ್ಲಿ ಇರುವಂತಹ ಜಾನಪದ ಸಂಸ್ಕೃತಿ ಬೇರೆ ಎಲ್ಲೂ ಇಲ್ಲ ಎಂದ ಅವರು, ತರೀಕೆರೆ ತಾಲೂಕಿನಲ್ಲಿ ನಡೆಯುವ ರಾಜ್ಯ ಸಮ್ಮೇಳನಕ್ಕೆ ನಾವುಗಳೆಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.
ಕನ್ನಡ ಜಾನಪದ ಪರಿಷತ್ ತಾಲೂಕು ಮಹಿಳಾ ಘಟಕದ ಆಧ್ಯಕ್ಷೆ ಲೀಲಾಸೋಮಶೇಖರಯ್ಯ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿ ಇಂದಿಗೂ ಅಸ್ತಿತ್ವ ಉಳಿಸಿ ಕೊಂಡಿದೆ. ಇಂದಿನ ಆಧುನಿಕ ಭರಾಟೆಯಲ್ಲಿ ಜಾನಪದ ಸಾಹಿತ್ಯ, ಸಂಸ್ಕೃತಿ ಮರೆಯಾಗುತ್ತಿದೆ. ಆದ್ದರಿಂದ ನಮ್ಮ ಜಾನಪದ ಸಾಹಿತ್ಯ ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕಿದೆ. ನಾವುಗಳು ನಿರ್ಲಕ್ಷ್ಯ ಮಾಡದೆ ಶಾಲಾ, ಕಾಲೇಜು ಹಾಗೂ ಮನೆ ಮನೆಯ ಅಂಗಳದ ಕಾರ್ಯಕ್ರಮಗಳು ನಡೆಸಬೇಕು ಎಂದರು. ಸಮಾಜ ಸೇವಕ ಟಿ.ಜಿ.ಮಂಜುನಾಥ್, ಪ್ರಹರ್ಷಿತ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಅನೂಪ್ ಮಾತನಾಡಿದರು.ಇದೇ ವೇಳೆ ಕನ್ನಡ ಜಾನಪದ ಪರಿಷತ್ತಿನಿಂದ ಸಮಾಜ ಸೇವಕ ಟಿ.ಜಿ.ಮಂಜುನಾಥ್ ಹಾಗೂ ಸಾಹಿತಿ ಮನುಸುಳಿ ಮೋಹನ್ ರವರನ್ನು ಸನ್ಮಾನಿಸಲಾಯಿತು.
ಕನ್ನಡ ಜಾನಪದ ಪರಿಷತ್ ತರೀಕೆರೆ ತಾಲೂಕು ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯೆನೀಯರು, ಪ್ರಹರ್ಷಿತ ವಿದ್ಯಾ ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕಿಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಶ್ರೀಹರಿ ಭಜನಾ ಮಂಡಳಿ ಅಧ್ಯಕ್ಷೆ ರತ್ನಮ್ಮ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು,