ಮೆರವಣಿಗೆಗೆ ಮೆರುಗು ತಂದ ಜಾನಪದ ಕಲಾತಂಡಗಳು

KannadaprabhaNewsNetwork |  
Published : Jan 21, 2025, 12:31 AM IST
 ಗಜೇಂದ್ರಗಡದಲ್ಲಿ ನಡೆದ ಸಮ್ಮೇಳಾನಧ್ಯಕ್ಷರ ಮೆರವಣಿಗೆಯಲ್ಲಿ ಕರಡಿ ಮಜಲು. | Kannada Prabha

ಸಾರಾಂಶ

ಗಜೇಂದ್ರಗಡದಲ್ಲಿ ಜಿಲ್ಲಾ ಮಟ್ಟದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಪ್ರಯುಕ್ತ ತಾಯಿ ಭುವನೇಶ್ವರಿ ದೇವಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಅವರ ಮೆರವಣಿಗೆ ನಡೆಯಿತು.

ಗಜೇಂದ್ರಗಡ: ಕಲಾ ತರುಣರ ಉತ್ಸಾಹ, ಜನಪದ ಕಲೆಯ ವೇಷಭೂಷಣ, ಪುಟಿದೆದ್ದ ಯುವಕರ ಚೈತನ್ಯ.. ಡೊಳ್ಳು, ಬ್ಯಾಂಜ್ ಮೇಳ, ಹಲಗೆಗಳು ಹಾಗೂ ಕನ್ನಡದ ಶಾಲು, ಕನ್ನಡದ ಬಾವುಟ, ಇನ್ನಿತರ ಕಲಾವಿದರ ಠಣ ಠಣ ಸದ್ದು...

ಇವೆಲ್ಲ ಇಂದು ಗಜೇಂದ್ರಗಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ಪ್ರಯಕ್ತ ತಾಯಿ ಭುವನೇಶ್ವರಿ ದೇವಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಅವರ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳು.

ಜನಪದದ ಗಂಡು ಮೆಟ್ಟಿನ ಕಲೆಗಳಿಗೆ ತನ್ನದೆ ಆದ ಛಾಪು ಮೂಡಿಸುತ್ತಿರುವ ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮೂರು ದಿನ ಕಾಲ ನಡೆಯುವ ಜಿಲ್ಲಾ ಮಟ್ಟದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಬಂದ ಕಲಾ ತಂಡಗಳ ಕಲಾವಿದರ ವೈವಿಧ್ಯಮಯ ವೇಷಗಳು ಇಲ್ಲಿನ ಜನರಿಗೆ ಬೆರಗು ಮೂಡಿಸಿದವು.

ಇಂಥದೊಂದು ಕಾರ್ಯಕ್ರಮ ಕೋಟೆ ನಾಡಿದ ಗಜೇಂದ್ರಗಡ ಪಟ್ಟಣದಲ್ಲಿ ಏರ್ಪಟ್ಟಿರುವುದರಿಂದ ಗದಗ ಜಿಲ್ಲೆಯ ಕಲಾಭಿಮಾನಿಗಳ ಹಾಗೂ ಇಲ್ಲಿನ ಪಟ್ಟಣದ ಜನತೆಯ ಹರ್ಷ ಮುಗಿಲು ಮುಟ್ಟಿತ್ತು. ಸತತ ಮೂರು ದಿನಗಳ ಕಾಲ ಅನಾವರಣಗೊಳ್ಳುವ ಕನ್ನಡದ ಹಬ್ಬಕ್ಕೆ ಕಲಾಸಕ್ತರು ಆಗಮಿಸುತ್ತಿರುವುದು ಕಂಡು ಬಂದಿತು.

ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಿಕತ್ವದ ಸೂಡಿ ಗ್ರಾಮದ ಚಂಡೆ ವಾದ್ಯ, ನರಗುಂದ ಜಗ್ಗಲಗಿ ಕೊಣ್ಣೂರಿನ ಗಾರುಡಿ ಗೊಂಬೆ, ದರೋಜಿಯ ಹಗಲುವೇಷ, ಗಜೇಂದ್ರಗಡದ ಲಂಬಾಣಿ ದೊಡ್ಡೆವಾಜ, ಇಟಗಿ ಗ್ರಾಮದ ವೀರಭದ್ರೇಶ್ವರ ಕರಡಿ ಮಜಲು, ಡೊಳ್ಳು ಕುಣಿತ, ಬ್ಯಾಂಜ್ ಮೇಳ, ಹಲಗೆ ಮೇಳ, ಗಜೇಂದ್ರಗಡದ ವೀರಗಾಸೆ ಕಲಾತಂಡಗಳು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ೧೨ನೇ ಶತಮಾನದ ಬಸವಾದಿ ಶರಣರ ವೇಷ ಧರಿಸಿದ ವಿದ್ಯಾರ್ಥಿಗಳು ಮೆರವಣಿಗೆಗೆ ಮೆರುಗು ನೀಡಿದರು.

ಇಲ್ಲಿನ ಮೈಸೂರು ಮಠದಿಂದ ಮೆರವಣಿಗೆ ಆರಂಭವಾಯಿತು. ಅಲಂಕೃತಗೊಂಡ ವಿಶೇಷ ರಥವನ್ನು ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಏರಿದ ನಂತರ ಮೆರವಣಿಗೆಯು ಪಟ್ಟದ ಪ್ರಮುಖ ವೃತ್ತಗಳಲ್ಲಿ ಸಾಗಿತು. ಬಳಿಕ ಸಮ್ಮೇಳನ ನಡೆಯುವ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಸಿ ಶಾಲೆಗೆ ಆಗಮಿಸಿತು.

ಇದಕ್ಕೂ ಮುನ್ನಾ ಬೆಳಗ್ಗೆ ಸಮ್ಮೇಳನದ ಅಂಗವಾಗಿ ಇಲ್ಲಿನ ಸಿಬಿಎಸ್‌ಸಿ ಶಾಲೆಯ ಆವರಣದಲ್ಲಿ ಶಾಸಕ ಜಿ.ಎಸ್. ಪಾಟೀಲ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಕಸಾಪ ತಾಲೂಕಾಧ್ಯಕ್ಷ ಅಮರೇಶ ಗಾಣಗೇರ ಕನ್ನಡ ಧ್ಜಜಾರೋಹಣ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ