ಮುಂದಿನ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ: ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್

KannadaprabhaNewsNetwork | Updated : Jan 21 2025, 12:47 PM IST

ಸಾರಾಂಶ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿ ಸ್ಪರ್ದೆಮಾಡುತ್ತದೆ ಎಂದು ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಹೇಳಿದರು. ಹೊಳೆಹೊನ್ನೂರಿನಲ್ಲಿ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 ಹೊಳೆಹೊನ್ನೂರು : ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿ ಸ್ಪರ್ದೆಮಾಡುತ್ತದೆ ಎಂದು ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಹೇಳಿದರು.

ಪಟ್ಟಣದ ಭಗೀರಥ ಸರ್ಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಆಯೋಜಿಸಿದ್ದ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ವಿಧಾನಸಭಾ ಚುನಾವಣೆಗೆ ಯಾವುದೇ ಮೈತ್ರಿಯ ಗೋಜಲು ಇರುವುದಿಲ್ಲ. ಕಾರ್ಯಕರ್ತರು ಹೊಸ ಹುರುಪಿನಿಂದ ಪಕ್ಷದ ಏಳಿಗೆಗೆ ಶ್ರಮಿಸಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯೂ ಇರುವುದಿಲ್ಲ. ಆದ್ದರಿಂದ ಕಾರ್ಯಕರ್ತರು ಈಗಿನಿಂದಲೇ ಜಿಲ್ಲಾ, ತಾಲೂಕು ಪಂಚಾಯಿತಿಗಳಿಗೆ ಪಕ್ಷವನ್ನು ಸದೃಢಗೊಳಿಸಬೇಕಾಗಿದೆ ಎಂದರು.

ಯಾವುದಾದರನ್ನೂ ಕಳೆದುಕೊಂಡ ಮೇಲೆ ಅದರ ಬೆಲೆ ತಿಳಿಯುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹಾಗೆಯೇ ನಾವು ಕ್ಷೇತ್ರದಲ್ಲಿ ಅಧಿಕಾರ ಕಳೆದುಕೊಂಡಾಗಿನಿಂದ ನಮ್ಮ ಕಾರ್ಯಕರ್ತರು ಅನುಭವಿಸುತ್ತಿರುವ ನೋವು ನನಗೆ ಅರಿವಿದೆ. ಕಳೆದು ಐದು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ದುಡಿದಿದ್ದೇನೆ ಎಂದರು.

ಹೊಳೆಹೊನ್ನುರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇರಿಸುವ ಮೂಲಕ ಪಟ್ಟಣಕ್ಕೆ ಒಂದು ಹೊಸ ರೂಪ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕ್ಷೇತ್ರದ ಪ್ರತೀ ಹಳ್ಳಿಗೂ 5 ರಿಂದ 6 ಕೋಟಿ ಅನುದಾನ ನೀಡುವ ಮೂಲಕ ರಸ್ತೆ, ಕುಡಿಯುವ ನೀರು, ಶಾಲೆ, ಆರೋಗ್ಯಕೇಂದ್ರ, ಸಮುದಾಯ ಭವನಗಳು ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳ ಮುಖೇನ ಜನರನ್ನು ತಲುಪುವ ಪ್ರಯತ್ನ ಮಾಡಿದ್ದೇನೆ. ಆದರೂ ನಮ್ಮ ಕೆಲ ಕಾರ್ಯಕರ್ತರ ಅಭಿಪ್ರಾಯಗಳಿಗೆ ಸಂಪೂರ್ಣ ಸ್ಪಂದನೆ ಸಾಧ್ಯವಾಗಿಲ್ಲ ಎನ್ನುವ ಕೊರಗು ಈಗಲೂ ಕಾಡುತ್ತಿದೆ. ಮುಂದೆ ಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಮ್ಮ ಸಹಕಾರ ಕೇಳುತ್ತಿದ್ದೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಜನರಿಗೆ ಉಚಿತ ಯೋಜನೆಗಳ ಬದಲು ಉದ್ಯೋಗ, ಉಚಿತ ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ನೀಡಿದ್ದೇ ಆದಲ್ಲಿ ರಾಜ್ಯದ ಅಭಿವೃದ್ಧಿಯ ಜೊತೆಗೆ ಜನರ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಕಳೆದ ಒಂದೂವರೆ ವರ್ಷದಿಂದ ಕ್ಷೇತ್ರಕ್ಕೆ ಯಾವುದೇ ಅನುದಾನ ಬಂದಿಲ್ಲ. ಹೀಗಾದರೇ ಕ್ಷೇತ್ರದ ಅಭಿವೃದ್ದಿ ಹೇಗೆ ಸಾಧ್ಯ. ನಮ್ಮ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು ಇಂದು ಪ್ರಾರಂಭವಾಗುತ್ತಿದ್ದು, ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಹಾಗೂ ಪಟ್ಟಣ ರಸ್ತೆಯ ಅಗಲೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಈಗ ಚಾಲನೆ ನೀಡಲಾಗಿದೆ. ಬೈಪಾಸ್ ರಸ್ತೆ ಅಭಿವೃದ್ಧಿಯಾಗಿದ್ದು, ಈಗಾಗಲೇ ಸೇತುವೆ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದ್ದು, ಲೋಕಾಪರ್ಣೆಗೆ ಸಿದ್ದವಾಗಿದೆ. ಮುಂದಿನ ದಿನಗಳಲ್ಲಿ ಸಂಸದರು ಈ ಬಗ್ಗೆ ಗಮನ ಹರಿಸುವರು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಎ.ಕೆ. ರಮೇಶ್, ಶ್ರೀನಿವಾಸ್, ಸುಬ್ರಮಣಿ, ಕಲ್ಲಜ್ಜನಾಳ್ ಮಂಜುನಾಥ, ರಾಧಕೃಷ್ಣ, ಚಂದ್ರಕುಮಾರ್, ನಾಗೇಶ್ ರೆಡ್ಡಿ, ಸಿದ್ದಪ್ಪ, ವೆಂಕಟೇಶ್, ಕೊಟ್ರೇಶ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

Share this article