ನಾರಾಯಣ ಹೆಗಡೆ
ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಸೆ.8ರಂದು ಉನ್ನತ ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ನೋಟಿಸ್‌ನಲ್ಲಿ ವಿಶ್ವವಿದ್ಯಾಲಯದ ಕಾರ್ಯವೈಖರಿ ಕುರಿತು ಗಂಭೀರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅಧಿನಿಯಮದ ಪ್ರಕರಣ 43(2)ರ ಉಪಬಂಧಗಳನ್ನು ಉಲ್ಲಂಘಿಸಿ ಅಗತ್ಯ ಅನುಮೋದನೆ ಪಡೆಯದೇ ಕೋರ್ಸ್‌ಗಳನ್ನು ಆರಂಭಿಸಿರುವುದು ಗಂಭೀರ ಲೋಪ ಎಂದು ಸರ್ಕಾರ ತಿಳಿಸಿದೆ.
ಯಾವ್ಯಾವ ಕೋರ್ಸ್‌ಗಳು?: ವಿಶ್ವವಿದ್ಯಾಲಯವು ಸರ್ಕಾರ ಹಾಗೂ ಕುಲಾಧಿಪತಿಗಳ ಅನುಮೋದನೆ ಪಡೆಯದೇ ಆರಂಭಿಸಿದ್ದಾಗಿ ಉಲ್ಲೇಖಿಸಿರುವ ಎಂಟು ಕೋರ್ಸ್‌ಗಳೆಂದರೆ, ಎಂ.ಎ. ಕನ್ನಡ ಮತ್ತು ಜಾನಪದ, ಎಂ.ಎ. ಇಂಗ್ಲಿಷ್, ಎಂ.ಎ. ಅರ್ಥಶಾಸ್ತ್ರ, ಎಂ.ಎ. ಸಮಾಜಶಾಸ್ತ್ರ, ಮಾಸ್ಟರ್ ಆಫ್ ಸೋಷಿಯಲ್ ವರ್ಕ್, ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್, ಮಾಸ್ಟರ್ ಆಫ್ ವಿಷ್ಯುಯಲ್ ಆರ್ಟ್ಸ್, ಎಂ.ಎ. ಮಹಿಳಾ ಅಧ್ಯಯನ.ಈ ಕೋರ್ಸ್‌ಗಳಿಗೆ ಮೊದಲು ನಿಯಮಾವಳಿಗಳನ್ನು ರೂಪಿಸಿ ಕುಲಾಧಿಪತಿಗಳ ಅನುಮೋದನೆ ಪಡೆಯಬೇಕಿತ್ತು. ಆದರೆ ಅಂತಹ ಅನುಮೋದನೆ ಪಡೆಯುವ ಮೊದಲೇ 2018-19ರಿಂದ ಕೋರ್ಸ್‌ಗಳನ್ನು ಆರಂಭಿಸಿ, ಬಳಿಕ ಘಟನೋತ್ತರ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಇಷ್ಟೇ ಅಲ್ಲದೆ, ಸರ್ಕಾರದ ಸೂಚನೆಗಳನ್ನು ಪಾಲಿಸದೇ ವಿಳಂಬ ಮಾಡಿದಲ್ಲಿ ಸಂಬಂಧಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಅವರು ಕುಲಸಚಿವರಿಗೆ ನೀಡಿದ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇದರ ಜತೆಗೆ ಈ ಎಂಟು ಕೋರ್ಸ್‌ಗಳಿಗೆ ಈವರೆಗೆ ಎಷ್ಟು ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳಲಾಗಿದೆ ಎಂಬುದರ ವಿಷಯವಾರು ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಅನುಮೋದನೆ ಇಲ್ಲದ ಕೋರ್ಸ್‌ಗಳನ್ನು ನಡೆಸಲು ವಿಶ್ವವಿದ್ಯಾಲಯದಲ್ಲಿ ನಿಯೋಜನೆ ಅಥವಾ ನೇಮಕ ಮಾಡಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ತಕ್ಷಣದಿಂದಲೇ ವಿಶ್ವವಿದ್ಯಾಲಯದ ಸೇವೆಯಿಂದ ಬಿಡುಗಡೆ ಅಥವಾ ವಜಾಗೊಳಿಸುವಂತೆ ಸೂಚಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ವಿಶ್ವವಿದ್ಯಾಲಯವು 2024ರ ಜೂನ್ ಹಾಗೂ 2025ರ ಮಾರ್ಚ್‌ನಲ್ಲಿ ಈ ಕೋರ್ಸ್‌ಗಳ ಕರಡು ನಿಯಮಾವಳಿಗಳಿಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ದಾಖಲೆಗಳನ್ನು ಪರಿಶೀಲಿಸಿದಾಗ, ಅಗತ್ಯ ಅನುಮೋದನೆ ಇಲ್ಲದೆಯೇ ಹಲವು ವರ್ಷಗಳಿಂದ ಕೋರ್ಸ್‌ಗಳು ನಡೆಯುತ್ತಿರುವ ಅಂಶ ಬಹಿರಂಗವಾಗಿದೆ. ಋಣಾತ್ಮಕ ವಿಷಗಳಿಂದಲೇ ಸುದ್ದಿಯಲ್ಲಿರುವ ಜಾನಪದ ವಿವಿಯ ಈ ಎಡವಟ್ಟಿನಿಂದ ನೂರಾರು ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುವ ಸಾಧ್ಯತೆಯಿದೆ. 8 ವರ್ಷಗಳಿಂದ ಈ ಕೋರ್ಸ್ ಓದಿರುವ ವಿದ್ಯಾರ್ಥಿಗಳ ಭವಿಷ್ಯವೂ ಅತಂತ್ರವಾಗುವ ಆತಂಕ ಎದುರಾಗಿದೆ.