ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ವಿದ್ಯಾಪ್ರಚಾರ ಸಂಘದ ವಿಜಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾನಪದ ಉತ್ಸವ, ಸುಗ್ಗಿ ಸಂಭ್ರಮದಲ್ಲಿ ಗ್ರಾಮೀಣ ಸೊಗಡಿನ ಕಾರ್ಯಕ್ರಮಗಳು ಗಮನ ಸೆಳೆಯಿತು.ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಬನ್ನಾರಿ ಮಾರಮ್ಮ ದೇವಸ್ಥಾನದಿಂದ ಕಾಲೇಜಿನವರೆಗೂ ಮೆರವಣಿಗೆ ನಡೆಸಲಾಯಿತು. ವಿದ್ಯಾರ್ಥಿನಿಯರು, ಶಿಕ್ಷಕಿಯರು ಸೀರೆ, ವಿದ್ಯಾರ್ಥಿಗಳು, ಉಪನ್ಯಾಸಕರು ಬಿಳಿಪಂಚೆ, ಶರ್ಟ್ ಧರಿಸಿ ಮಿಂಚಿದರು. ಮೆರವಣಿಗೆ ಸಂಸ್ಥೆ ಅಧ್ಯಕ್ಷರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು. ವಿದ್ಯಾರ್ಥಿನಿಯರು ಪೂರ್ಣಕುಂಭ ಹೊತ್ತು ಸಾಗಿದರೆ ವೀರಗಾಸೆ ಕುಣಿತ, ಡೊಳ್ಳುಕುಣಿತ, ಟಮಟೆ, ನಗಾರಿಗಳು, ಐದು ಜತೆ ಹಳ್ಳಿಕಾರ್ ತಳಿಯ ಜೋಡೆತ್ತುಗಳು ಭಾಗವಹಿಸುವ ಮೂಲಕ ಗಮನ ಸೆಳೆದವು. ಉಪನ್ಯಾಸರು ಎತ್ತಿನಗಾಡಿ ಏರಿದರೇ ವಿದ್ಯಾರ್ಥಿಗಳು ನಮ್ಮ ಸೈನ್ಯ ನಮ್ಮ ಹೆಮ್ಮೆ ಎಂಬ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಕಾಲೇಜಿನ ಡಾ.ಕೃಷ್ಣಕುಮಾರ್ ಸಭಾಂಗಣದಲ್ಲಿ ಹಳ್ಳಿಯ ವಾತಾವರಣವನ್ನೇ ಸೃಷ್ಟಿಸಲಾಗಿತ್ತು. ಭತ್ತ, ರಾಗಿ ರಾಶಿ, ರೈತರು ಉಳಿಮೆಗೆ ಬಳಸುವ ನೊಗ, ನೇಗಿಲು, ಒನಕೆ, ರಾಗಿ ಬೀಸುಕಲ್ಲು, ಕಬ್ಬು, ಭತ್ತದ ತೆನೆ ಸೇರಿದಂತೆ ಇಡೀ ಸಭಾಂಗಣವನ್ನು ಹಳ್ಳಿಯ ಪರಿಸರದಂತೆ ಅಲಂಕರಿಸಲಾಗಿತ್ತು.ಸಂಸ್ಥೆ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು ಸೇರಿದಂತೆ ಎಲ್ಲಾ ಆಡಳಿತ ಮಂಡಳಿ ನಿರ್ದೇಶಕರು, ಉಪನ್ಯಾಸಕರು ಭತ್ತ ಹಾಗೂ ರಾಗಿ ರಾಶಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲ್ಲಾ ವಿದ್ಯಾರ್ಥಿನಿಯರಿಗೆ ಬಳೆ, ರವಿಕೆ, ಹರಿಸಿಣ-ಕುಂಕುಮ ವಿತರಣೆ ಮಾಡಿದರೇ, ವಿದ್ಯಾರ್ಥಿಗಳಿಗೆ ಟವಲ್ ವಿತರಿಸಲಾಯಿತು. ಜತೆಗೆ 9 ಮಂದಿ ಮುತ್ತೈದೆಯರಿಗೆ ಬಾಗಿನ ನೀಡುವ ಮೂಲಕ ಜಾನಪದ ಉತ್ಸವ, ಸುಗ್ಗಿ-ಸಂಭ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜೊತೆಗೆ ಗ್ರಾಮೀಣ ಸೊಗಡಿನ ಊಟವನ್ನು ಸಹ ವಿದ್ಯಾರ್ಥಿಗಳಿಗೆ ಬಡಿಸಲಾಯಿತು.
ಇದಕ್ಕೂ ಮುನ್ನ ಸಂಸ್ಥೆ ಅಧ್ಯಕ್ಷ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಮ್ಮ ಗ್ರಾಮೀಣ ಸೊಗಡಿನ ಜಾನಪದ ಕಲೆ, ಸುಗ್ಗಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಅಗತ್ಯವಾಗಿವೆ. ಪ್ರತಿಯೊಬ್ಬರೂ ರೈತರು ಜೀವನವನ್ನು ಅರ್ಥೈಸಿಕೊಳಬೇಕು, ನಮ್ಮ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದರು.ವಿದ್ಯಾಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ.ಬಸವರಾಜು ಮಾತನಾಡಿ, ನಮ್ಮ ಹಳೆಯ ಸಂಸ್ಕೃತಿ, ಜಾನಪದ, ಗ್ರಾಮೀಣ ಸೊಗಡನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದರು.
ನಿರ್ದೇಶಕ ಸೋಮೇಗೌಡ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿದು ಉತ್ತಮ ವಿದ್ಯಾಭ್ಯಾಸ ಮೂಲಕ ಭವಿಷ್ಯ ಕಟ್ಟಿಕೊಂಡು ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ತಿಳಿಸಿದರು.ಸಮಾರಂಭದಲ್ಲಿ ಸಂಸ್ಥೆ ನಿರ್ದೇಶಕರಾದ ಎನ್.ರಾಮೇಗೌಡ, ಗೋಪಾಲಸ್ವಾಮಿ, ಚಂದ್ರಶೇಖರ್, ಡಾ.ಎಂ.ಮಾಯಿಗೌಡ, ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ಉಪನ್ಯಾಸಕ ಡಾ.ಎನ್.ಕೆ.ವೆಂಕಟೇಗೌಡ, ವೇಣುಗೋಪಾಲ್ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಹಾಜರಿದ್ದರು.