ಹೂವಿನಹಡಗಲಿ: ಎಲ್ಲ ಸಂಸ್ಕಾರಗಳನ್ನು ತನ್ನ ಒಡಲೊಳಗೆ ಇಟ್ಟಿಕೊಂಡಿರುವ ಜಾನಪದಕ್ಕೆ ವಿಶಾಲ ತಳಹದಿ ಇದೆ. ಇದು ನಿರಂತರವಾಗಿ ಬೆಳೆಯುತ್ತಲೇ ಹೋಗುತ್ತದೆ. ಇದಕ್ಕೆ ಅಳಿವು ಇಲ್ಲ ಎಂದು ಹರಪನಹಳ್ಳಿ ಎಡಿಬಿ ಕಾಲೇಜು ಅಧ್ಯಕ್ಷ ಕೊಟ್ರೇಶ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘ, ಜಿಬಿಆರ್ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕಿದೆ. ಇದಕ್ಕೆ ಭವಿಷ್ಯದ ಸುಂದರ ಬದುಕು ರೂಪಿಸುವ ಶಕ್ತಿ ಇದೆ. ಪುಸ್ತಕಗಳ ಹುಳ ಆಗದೇ ಜಾನಪದದಂತಹ ಉತ್ಸವ, ಜಾತ್ರೆಯಲ್ಲಿ ಭಾಗವಹಿಸಿದ ಅನುಭವ ಹೆಚ್ಚಿನ ವಿಚಾರಗಳನ್ನು ಕಲಿಸುತ್ತದೆ ಎಂದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಗೋಳ್ ಚಿದಾನಂದ ಮಾತನಾಡಿ, ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘವು ನಿರಂತರವಾಗಿ, ಗ್ರಾಮೀಣ ಭಾಗದ ಮಕ್ಕಳನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸ ಮಾಡುತ್ತಿದೆ. ನಗರ ಪ್ರದೇಶದ ಕಾಲೇಜುಗಳಲ್ಲಿ ಜಾನಪದ ಸೊಗಡು ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಪ್ರತಿ ಕಾಲೇಜಿನಲ್ಲಿ ಜಾನಪದ ಜಾತ್ರೆ ಆಯೋಜಿಸಬೇಕು ಎಂಬ ಉದ್ದೇಶ ಉತ್ತಮವಾಗಿದೆ ಎಂದರು.
ಕಾಲೇಜು ಪ್ರಾಚಾರ್ಯ ಎಸ್.ಎಸ್. ಪಾಟೀಲ್ ಮಾತನಾಡಿ, ವೀರಶೈವ ವಿದ್ಯಾವರ್ಧಕ ಸಂಘದಡಿ, ಜಿಬಿಆರ್ ಕಾಲೇಜು ಕಳೆದ 50 ವರ್ಷಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಅಕ್ಷರ ಸೇವೆ ನೀಡುತ್ತಾ ಬಂದಿದೆ. ಮಕ್ಕಳಲ್ಲಿ ಸಾಂಪ್ರದಾಯಿಕ ಉಡುಗೆ-ತೊಡುಗೆಗಳ ಪರಿಕಲ್ಪನೆ, ಗ್ರಾಮೀಣ ಜಾನಪದ ಕ್ರೀಡೆಗಳು, ನೃತ್ಯ ಇವುಗಳಿಂದ ವಿದ್ಯಾರ್ಥಿಗಳು ದೂರವಾಗಬಾರದು ಎಂಬ ಹಿನ್ನೆಲೆಯಲ್ಲಿ ಜಾನಪದ ಜಾತ್ರೆ ಆಯೋಜಿಸಲಾಗಿದೆ ಎಂದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನ್‌ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಕಾಲೇಜು ಆಡಳಿತ ಮಂಡಳಿಯ ಕೆ.ಎಂ. ಉದಾಸಿ, ಡಾ. ರವಿಕುಮಾರ, ಪ್ರಕಾಶ, ಕೋಡಿಹಳ್ಳಿ ಮುದುಕಪ್ಪ, ಎಂಪಿಎಂ ವೀರಭದ್ರ ದೇವರು, ವರಕುಮಾರಗೌಡ, ಸಿದ್ದಲಿಂಗ ಮೂರ್ತಿ ಇತರರಿದ್ದರು.ಇದಕ್ಕೂ ಮುನ್ನ ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ, ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಸಮಾಳ, ನಂದಿಕೋಲು ನಾದಕ್ಕೆ ನೃತ್ಯ ಮಾಡಿದರು. ವಿವಿಧ ರೀತಿಯಲ್ಲಿ ಅಲಂಕಾರ ಮಾಡಿದ್ದ ಎತ್ತಿನಬಂಡಿ ಮೆರವಣಿಗೆ ಹಾಗೂ ಪೂರ್ಣಕುಂಭೋತ್ಸವ ಮೆರಗು ತಂದಿತು.
ಕಾಲೇಜು ಆವರಣದಲ್ಲಿ ವಿವಿಧ ಜಾನಪದ ಹಾಡುಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಿದರು. ಆನಂತರದಲ್ಲಿ ಜೋಕಾಲಿ, ಲಗೋರಿ ಆಟವಾಡಿದರು. ಜಾನಪದ ಕಲೆ ಮತ್ತು ಸಂಸ್ಕೃತಿ ಪ್ರದರ್ಶನ, ಜಾನಪದ ಅಡುಗೆಗಳ ಪ್ರದರ್ಶನ, ಜಾನಪದ ಆಟ ಹಾಗೂ ನೃತ್ಯ ಪ್ರದರ್ಶನಗಳು ಜನಮನ ಸೆಳೆದವು.