ಕನ್ನಡಪ್ರಭ ವಾರ್ತೆ ವಿಜಯಪುರ
ಶೆಡ್ ಹಾಗೂ ಮನೆಯನ್ನು ತೆರವುಗೊಳಿಸಿಕೊಳ್ಳಿ ಎಂದು ಸೂಚನೆ ನೀಡಲು ಹೋಗಿದ್ದ ಮಹಾನಗರ ಪಾಲಿಕೆಯ ಕಿರಿಯ ಅಭಿಯಂತರರ ಮೇಲೆ ಮನೆಯವರು ಹಲ್ಲೆ ನಡೆಸಿದ ಬೆದರಿಕೆ ಹಾಕಿರುವ ಘಟನೆ ನಗರದ 34ನೇ ವಾರ್ಡ್‌ನಲ್ಲಿರುವ ಶಾಲಿಹುಸೇನ್ ಕಾಲೋನಿಯಲ್ಲಿ ನಡೆದಿದೆ. ಪಾಲಿಕೆಯ ಕಿರಿಯ ಅಭಿಯಂತರರ ಚನ್ನಬಸಪ್ಪ ಅಮರಶೆಟ್ಟಿ ಮೇಲೆಯೇ ಹಲ್ಲೆ ನಡೆಸಲಾಗಿದೆ.ಸರ್ಕಾರಿ ಜಾಗೆಯಲ್ಲಿ ಕೆಲವರು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಶೆಡ್ ಹಾಗೂ ಮನೆಯನ್ನು ತೆರವುಗೊಳಿಸುವಂತೆ ಚನ್ನಬಸಪ್ಪ ಅಮರಶೆಟ್ಟಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಲಿಹುಸೇನ್ ಕಾಲೋನಿಯ ನಿವಾಸಿಗಳು ಹಾಗೂ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದ ಶಬ್ಬೀರ ಲಷ್ಕರಿ, ಸಾದಿಕ್ ಲಷ್ಕರಿ, ಶಬಾನಾ ಲಷ್ಕರಿ ಸೇರಿಕೊಂಡು ಕಿರಿಯ ಇಂಜಿನಿಯರ್ ಚನ್ನಬಸಪ್ಪ ಅಮರಶೆಟ್ಟಿ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಅಲ್ಲದೇ ಜೀವ ಬೆದರಿಕೆಯನ್ನು ಹಾಕಿದ್ದಾರೆ. ಅಂಗನವಾಡಿ ಕಟ್ಟಡ ನಿರ್ಮಿಸಬೇಕಿದ್ದ ಸರ್ಕಾರಿ ಜಾಗೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿದ್ದರು. ಇದನ್ನು ತೆರವುಗೊಳಿಸಿಕೊಳ್ಳಿ ಎಂದು ಸೂಚನೆ ನೀಡಲು ಹೋಗಿದ್ದ ವೇಳೆ ಅಧಿಕಾರಿಗೆ ಬೆದರಿಕೆ ಹಾಕಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಇನ್ನೊಮ್ಮೆ ಇಲ್ಲಿಗೆ ಬಂದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಎಂದು ಆರೋಪಿಗಳು ಹೆದರಿಸಿದ್ದಾರೆ. ಈ ಕುರಿತು ಎಂಜಿನಿಯರ್ ಚನ್ನಬಸಪ್ಪ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳಾದ ಶಬ್ಬೀರ ಲಷ್ಕರಿ, ಸಾದಿಕ್ ಲಷ್ಕರಿ, ಶಬಾನಾ ಲಷ್ಕರಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ.ಪಾಲಿಕೆ ಸಿಬ್ಬಂದಿ ಪ್ರತಿಭಟನೆ
ಕಿರಿಯ ಎಂಜಿನಿಯರ್ ಚನ್ನಬಸಪ್ಪ ಅಮರಶೆಟ್ಟಿ ಮೇಲೆ ನಡೆದ ಹಲ್ಲೆ ಖಂಡಿಸಿ ಮಹಾನಗರ ಪಾಲಿಕೆ ಮುಖ್ಯ ಕಚೇರಿ ಹಾಗೂ ವಲಯ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಈ ರೀತಿ ಘಟನೆಗಳು ಆಗದಂತೆ ಸೂಕ್ತ ಕ್ರಮ ವಹಿಸಬೇಕು. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಪಾಲಿಕೆ ಸಿಬ್ಬಂದಿ ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ಒತ್ತಾಯಿಸಿದರು. ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಲಯ ಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ಯೋಜನಾ ನಿರ್ದೇಶಕ ಬದ್ರುದ್ದೀನ್ ಸೌದಾಗರ, ಡಾ.ಸಂಗಣ್ಣ ಲಕ್ಕಣ್ಣವರ, ಪಾಲಿಕೆ ಅನರ್ಹ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.-------ಕೋಟ್:ಕಿರಿಯ ಅಭಿಯಂತರ ಚನ್ನಬಸಪ್ಪ ಮೇಲೆ 34ನೇ ವಾರ್ಡ್‌ನಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಗೆ ಹೋಗಿದ್ದ ವೇಳೆ ಸ್ಥಳೀಯ ಕುಟುಂಬದವರು ಏಕಾಏಕಿ ಹಲ್ಲೆ ಮಾಡಿದ್ದರ ಕುರಿತು ದೂರು ದಾಖಲಿಸಲಾಗಿದೆ. ಅಧಿಕಾರಿ ಮೇಲೆ ನಡೆದ ಹಲ್ಲೆ ಖಂಡಿಸಿ ಹಾಗೂ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದೇವೆ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಮಹಾವೀರ ಬೋರಣ್ಣವರ, ಆಯುಕ್ತರು, ವಲಯ-2 ಕಚೇರಿ.