ಭಾಗ್ಯನಗರದ ಜನರಿಗಿಲ್ಲ ತುಂಗಭದ್ರಾ ನೀರು

KannadaprabhaNewsNetwork | Published : Apr 27, 2025 1:49 AM

ಸಾರಾಂಶ

ತುಂಗಭದ್ರಾ ನದಿ ನೀರು ಬೇಕೆಂದರೆ ಕೊಪ್ಪಳ ನಗರದೊಂದಿಗೆ ಭಾಗ್ಯನಗರ ವಿಲೀನ ಮಾಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರಿಂದ ನಿಮ್ಮ ನೀರು ಬೇಡ, ನೀವು ಬೇಡ ಎಂದು ಅಲ್ಲಿನ ಜನರು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಪುಟ್ಟ-ಪುಟ್ಟ ಹಳ್ಳಿಗೂ ತುಂಗಭದ್ರಾ ನದಿಯಿಂದ ನೀರು ಪೂರೈಕೆಯಾಗುತ್ತಿದ್ದರೂ ಕೊಪ್ಪಳ ನಗರಕ್ಕೆ ಹೊಂದಿಕೊಂಡೇ ಇರುವ ಭಾಗ್ಯನಗರಕ್ಕೆ ಈಗಲೂ ಫ್ಲೋರೈಡ್‌ಯುಕ್ತ ನೀರೇ ಗತಿಯಾಗಿದೆ.

ನಗರ ನೀರು ಸರಬರಾಜು ಯೋಜನೆಯಲ್ಲಿ 1995ರಿಂದಲೇ ನಗರಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಕೆಯಾಗುತ್ತದೆ. ಆದರೆ, ಭಾಗ್ಯನಗರಕ್ಕೆ ಮಾತ್ರ ಈ ವರೆಗೆ ನದಿ ನೀರು ಪೂರೈಕೆಯಾಗುತ್ತಿಲ್ಲ. ತುಂಗಭದ್ರಾ ಜಲಾಶಯ ನಿರ್ಮಿಸಿದ ಹಿನ್ನೆಲೆಯಲ್ಲಿ ಮುಳುಗಡೆಯಾದ ಕಾತರಕಿ ಗ್ರಾಮದಿಂದ ಸ್ಥಳಾಂತವಾದವರೇ ಭಾಗ್ಯನಗರದ ನಿವಾಸಿಗಳು. ಪೂರ್ವದಲ್ಲಿ ನದಿ ದಡದಲ್ಲಿಯೇ ಇದ್ದವರಿಗೆ ಇಲ್ಲಿಗೆ ಬಂದ ಬಳಿಕವೂ ನದಿ ನೀರು ಪೂರೈಕೆಯಾಗಿಲ್ಲ ಎನ್ನುವುದು ಮಾತ್ರ ವಿಪರ್ಯಾಸ.

ಕರೆಂಟ್ ಬಿಲ್ ಕಟ್ಟಲಿಲ್ಲ:

ನಗರಕ್ಕೆ ರೂಪಿಸಿದ್ದ ಯೋಜನೆಯಲ್ಲಿಯೇ ಭಾಗ್ಯನಗರಕ್ಕೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಭಾಗ್ಯನಗರ ಮತ್ತು ಕೊಪ್ಪಳವನ್ನೊಳಗೊಂಡೇ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿಯೇ ಎರಡು ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದ್ದು ಈ ಮೂಲಕ ನದಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಭಾಗ್ಯನಗರ ಪಟ್ಟಣ ಪಂಚಾಯಿತಿ ಇದಕ್ಕಾಗಿ ವಾರ್ಷಿಕ ₹ 18 ಲಕ್ಷ ಕರೆಂಟ್ ಬಿಲ್ ಪಾವತಿಸಬೇಕಿತ್ತು. ಆಗೊಮ್ಮೆ, ಈಗೊಮ್ಮೆ ಬರುವ ನೀರಿಗೆ ಏಕೆ ಇಷ್ಟೊಂದು ಪಾವತಿಸಬೇಕೆಂದು ತುಂಗಭದ್ರಾ ನೀರು ಬೇಡವೇ ಬೇಡವೆಂದು ಪಟ್ಟಣ ಪಂಚಾಯಿತಿ ನಿರ್ಧರಿಸಿತು. ಹೀಗಾಗಿ, ನದಿ ನೀರು ಈ ವರೆಗೆ ಜನರಿಗೆ ಪೂರೈಕೆಯಾಗುತ್ತಿಲ್ಲ.

ತುಂಗಭದ್ರಾ ನದಿ ನೀರು ಬೇಕೆಂದರೆ ಕೊಪ್ಪಳ ನಗರದೊಂದಿಗೆ ಭಾಗ್ಯನಗರ ವಿಲೀನ ಮಾಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರಿಂದ ನಿಮ್ಮ ನೀರು ಬೇಡ, ನೀವು ಬೇಡ ಎಂದು ಅಲ್ಲಿನ ಜನರು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಭಾಗ್ಯನಗರ ಪ್ರತ್ಯೇಕವಾಗಿಯೇ ಇದೆ.

ಮತ್ತೊಂದು ಯೋಜನೆ:

ಈಗ ಪುನಃ ಭಾಗ್ಯನಗರ ಒಳಗೊಂಡು ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆ ಮುಕ್ತಾಯದ ಹಂತದಲ್ಲಿದೆ. ಈ ಬಾರಿ ನಗರದ ಹೊರ ವಲಯದಲ್ಲಿ ಪ್ರತ್ಯೇಕ ಬಾವಿ ನಿರ್ಮಿಸಿ ಅಲ್ಲಿಂದ ಭಾಗ್ಯನಗರಕ್ಕೆ ಪ್ರತ್ಯೇಕವಾಗಿ ನೀರು ಪೂರೈಕೆ ಮಾಡುವ ಯೋಜನೆ ಪ್ರಗತಿಯಲ್ಲಿದ್ದು, ಇನ್ನು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.

32 ಬೋರ್‌ವೆಲ್‌:

ಈಗ ಭಾಗ್ಯನಗರದಲ್ಲಿ ಬರೋಬ್ಬರಿ 32 ಬೋರ್‌ವೆಲ್‌ಗಳಿದ್ದು ಇವುಗಳೇ ನೀರು ಪೂರೈಸುತ್ತಿವೆ. ಇವೆಲ್ಲ ಫ್ಲೋರೈಡ್‌ಯುಕ್ತ ನೀರಾಗಿದ್ದರೂ ಜನರು ಅನಿವಾರ್ಯವಾಗಿ ಅದನ್ನೇ ಬಳಸುತ್ತಿದ್ದಾರೆ.ಭಾಗ್ಯನಗರಕ್ಕೆ ತುಂಗಭದ್ರಾ ನದಿ ನೀರು ಪೂರೈಕೆ ಮಾಡುವ ಯೋಜನೆ ಸಿದ್ಧವಾಗುತ್ತದೆ. ಇನ್ನೊಂದು ವರ್ಷದೊಳಗಾಗಿ ನೀರು ಪೂರೈಕೆಯಾಗುತ್ತವೆ.

ಸುರೇಶ ಬಬಲಾದಿ, ಮುಖ್ಯಾಧಿಕಾರಿ ಪಪಂ ಭಾಗ್ಯನಗರ ತುಂಗಭದ್ರಾ ನೀರು ಬರುವುದೇ ಅಪರೂಪ ಎನ್ನುವಂತೆ ಇತ್ತು. ಆದರೂ ಲಕ್ಷಾಂತರ ರುಪಾಯಿ ಕರೆಂಟ್ ಬಿಲ್ ನಮ್ಮ ಮೇಲೆ ಹಾಕಿದ್ದರಿಂದ ಯೋಜನೆಯಿಂದ ಹೊರಬಂದಿದ್ದೇವೆ.

ಜಗದೀಶ ಮಾಲಗಿತ್ತಿ, ಸದಸ್ಯರು ಪಪಂ ಭಾಗ್ಯನಗರ ಕೊಪ್ಪಳದೊಂದಿಗೆ ಭಾಗ್ಯನಗರ ವೀಲನ ಮಾಡಬೇಕು ಎಂದಿದ್ದರಿಂದ ತುಂಗಭದ್ರಾ ನದಿಯ ನೀರನ್ನೇ ನಾವು ಬೇಡ ಎಂದೆವು. ಪ್ರತ್ಯೇಕವಾಗಿ ಯೋಜನೆ ರೂಪಿಸಲು ಮನವಿ ಮಾಡಿದ್ದೇವೆ.

ಗಿರೀಶ ಪಾನಘಂಟಿ, ಮುಖಂಡರು

Share this article