ಸುಕ್ರಿಗೌಡ ಬುಡಕಟ್ಟು ಸಂಸ್ಕೃತಿಯ ಜಾನಪದ ಸಂಪತ್ತು, ಹಳ್ಳಿ ಹಾಡಿನ ಕಣಜ, ಕಾಡಿನ ಹಕ್ಕಿ

KannadaprabhaNewsNetwork |  
Published : Feb 14, 2025, 12:33 AM ISTUpdated : Feb 14, 2025, 09:38 AM IST
ಪದ್ಮಶ್ರೀ ಸುಕ್ರಿ ಗೌಡ. | Kannada Prabha

ಸಾರಾಂಶ

ತಮ್ಮ ನಿಸ್ವಾರ್ಥ ಸಮಾಜ ಸೇವೆ ಹಾಗೂ ಜಾನಪದ ಕ್ಷೇತ್ರದ ಭೂಮಿಕೆಗೆ ಸುಕ್ರಿ ಗೌಡ ಅವರು ನೀಡಿದ ಸೇವೆ ಅನನ್ಯ. ಹೀಗಾಗಿ ಅವರಿಗೆ ದೇಶದ ಪ್ರತಿಷ್ಠಿತ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತ್ತು.

ರಾಘು ಕಾಕರಮಠ

ಅಂಕೋಲಾ: ಬುಡಕಟ್ಟು ಸಂಸ್ಕೃತಿಯ ಜಾನಪದ ಸಂಪತ್ತು, ಹಳ್ಳಿ ಹಾಡಿನ ಕಣಜ, ಕಾಡಿನ ಹಕ್ಕಿ ಎಂದೇ ನಾಮಾಂಕಿತರಾಗಿದ್ದ ನಾಡೋಜ ಸುಕ್ರಿ ಬೊಮ್ಮು ಗೌಡ ತಮ್ಮ ಬದುಕಿನ ಪಯಣದ ಗಾನ ನಿಲ್ಲಿಸಿದ್ದಾರೆ.

ತಮ್ಮ ನಿಸ್ವಾರ್ಥ ಸಮಾಜ ಸೇವೆ ಹಾಗೂ ಜಾನಪದ ಕ್ಷೇತ್ರದ ಭೂಮಿಕೆಗೆ ಸುಕ್ರಿ ಗೌಡ ಅವರು ನೀಡಿದ ಸೇವೆ ಅನನ್ಯ. ಹೀಗಾಗಿ ಅವರಿಗೆ ದೇಶದ ಪ್ರತಿಷ್ಠಿತ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿತ್ತು.

ಸುಕ್ರಿ ಗೌಡ ಜಾನಪದ ಕೋಗಿಲೆ ಎಂದೇ ಗುರುತಿಸಿಕೊಂಡಿದ್ದರು. ತಮ್ಮದೆ ಆದ ವಿಶಿಷ್ಟ ಜನಪದ ಹಾಡುಗಳ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ಸುಕ್ರಿ ಗೌಡ ಕರ್ನಾಟಕ ಜಾನಪದದ ಆಸ್ತಿಯಾಗಿದ್ದರು.

ಹಳ್ಳಿ ಹಾಡಿನ ಕಣಜ: ನಿರಕ್ಷರಿ ಸುಕ್ರಿ ಗೌಡ ಪರಂಪರಾಗತ ಜ್ಞಾನ ಹಾಗೂ ಪ್ರತಿಭಾ ಶಕ್ತಿಯನ್ನು ಮೈಗೂಡಿಸಿಕೊಂಡು ಜನಪದ ಕ್ಷೇತ್ರದಲ್ಲಿ ಅರಳಿದ ಕಾನನದ ಕುಸುಮ. ತಮ್ಮದೇ ಆದ ತಂಡ ಕಟ್ಟಿ, ಸಂಗಡಿಗರಿಗೆ ಪ್ರಾಚೀನ ತಾರ್ಲೆ ಕುಣಿತ, ಬಿದರಂಡೆ ಕಲೆಗಳನ್ನು ಕಲಿಸುತ್ತ, ಅವರಿಗೆ ಜಾನಪದದ ದೀಕ್ಷೆ ನೀಡಿ ಬೆಳೆಸಿದ ಮಹಾನ್ ಕಲಾವಿದೆ.

ಸಂದರ್ಭಕ್ಕನುಸರಿಸಿ ಹಾಡುಗಳು: ಸುಕ್ರಿ ಗೌಡರ ಹಾಡಿನಲ್ಲಿ ಬುಡಕುಟ್ಟು ಸಂಸ್ಕೃತಿಯ ಜೀವನಾನುಭವವಿತ್ತು. ಬದುಕಿನ ಸಂತಸ, ನೋವುಗಳಿಗೆ, ಸಭೆ ಸಮಾರಂಭಗಳಿಗೆ, ಸಮಕಾಲೀನ ವಿದ್ಯಮಾನಕ್ಕೆ ತಕ್ಕಂತೆ ಹಾಡನ್ನು ಆ ಕ್ಷಣದಲ್ಲಿಯೇ ಕಟ್ಟಿ ಹಾಡುವ ಅದ್ಭುತ ಕಲೆ ಇವರಿಗಿತ್ತು. ಮಗು ಹುಟ್ಟಿದಾಗಿಂದ ಹಿಡಿದು ಇಹಲೋಕ ತ್ಯಜಿಸುವ ವರೆಗೂ ಎಲ್ಲ ಸಂದರ್ಭದ ಹಾಡುಗಳು ಸುಕ್ರಿ ಅವರ ಸ್ವರಚಿತ ಜಾನಪದ ಗೀತೆಗಳು ಅವರದೇ ಕಂಠಸಿರಿಯಿಂದ ಇಂಪಾಗಿ ಹೊರ ಹೊಮ್ಮುತ್ತಿದ್ದವು.

3 ವರ್ಷದಿಂದ ಅನಾರೋಗ್ಯ: ಸರಳ ವ್ಯಕ್ತಿತ್ವದ ಸುಕ್ರಿ ಗೌಡ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರು ಅನಾರೋಗ್ಯಕ್ಕೆ ತುತ್ತಾಗುವ ಮೊದಲಿನ ದಿನಗಳಲ್ಲಿ ನಿತ್ಯ ಬೆಳಗ್ಗೆ ಎದ್ದು ಉಪಜೀವನಕ್ಕಾಗಿ ಬೆಟ್ಟಕ್ಕೆ ಹೋಗಿ ಸೌದೆ ತರುವುದು, ತುತ್ತಿನ ಚೀಲಕ್ಕಾಗಿ ಗದ್ದೆಯಲ್ಲಿ ಕೆಲಸ ಮಾಡುವುದು, ಸೂರ್ಯ ಅಸ್ತಂಗತವಾಗುವ ವರೆಗೂ ದಣಿವರಿಯದೇ ದುಡಿದು ಯುವ ಸಮುದಾಯಕ್ಕೆ ಆದರ್ಶಪ್ರಾಯರಾಗಿದ್ದರು.

ಉತ್ತರ ಕನ್ನಡದ ಮೂರು "ಪದ್ಮ "ಗಳೂ ನಿರ್ಗಮನ

ಕಾರವಾರ: ಸುಕ್ರಿ ಗೌಡ ನಿಧನರಾಗುವುದರೊಂದಿಗೆ ಜಿಲ್ಲೆಯಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದ ಎಲ್ಲ ಮೂವರನ್ನೂ ಕಳೆದುಕೊಂಡಂತಾಗಿದೆ. ಪ್ರಸಿದ್ಧ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಜಿಲ್ಲೆಯಲ್ಲಿ ಮೊಟ್ಟ ಮೊದಲು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. ಯಕ್ಷಗಾನ ಕ್ಷೇತ್ರಕ್ಕೆ ಮೊದಲ ಪದ್ಮಶ್ರೀಯೂ ಆದಾಗಿತ್ತು. ಅವರು 2017ರ ಸೆ. 29ರಂದು ಇಹಲೋಕ ತ್ಯಜಿಸಿದರು.

ನಂತರ ಜಾನಪದ ಕೋಗಿಲೆ ಸುಕ್ರಿ ಗೌಡ ಅವರಿಗೆ ಪದ್ಮಶ್ರೀ ಒಲಿದು ಬಂತು. ಅವರು 2025ರ ಫೆ. 13ರಂದು ನಿಧನರಾದರು.ಲಕ್ಷಾಂತರ ಗಿಡಗಳನ್ನು ನೆಟ್ಟ ವೃಕ್ಷಮಾತೆ ಹೊನ್ನಳ್ಳಿಯ ತುಳಸಿ ಗೌಡ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಅವರು 2024ರ ಡಿ. 16ರಂದು ವಿಧಿವಶರಾಗಿದ್ದರು.

ಈ ಮೂವರೂ ಉತ್ತರ ಕನ್ನಡದ ಹಿರಿಮೆ, ಗರಿಮೆಯನ್ನು ರಾಷ್ಟ್ರಮಟ್ಟದಲ್ಲಿ ಬಿತ್ತರಗೊಳಿಸಿದ ಜಿಲ್ಲೆಯ ಹೆಮ್ಮೆಯ ಸಾಧಕರಾಗಿದ್ದರು. ಉತ್ತರ ಕನ್ನಡ ಈಗ ಎಲ್ಲ ಮೂವರು ಸಾಧಕರನ್ನು ಕಳೆದುಕೊಂಡು ಬಡವಾಗಿದೆ.ಸಾಮಾಜಿಕ, ಪರಿಸರ, ಹೋರಾಟ, ಸಭೆ, ಸಮಾರಂಭಗಳಲ್ಲಿ ಇವರು ಪಾಲ್ಗೊಂಡರೆ ಅದಕ್ಕೊಂದು ತೂಕ ಬರುತ್ತಿತ್ತು. ಇವರ ವ್ಯಕ್ತಿತ್ವ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಈ ಮೂವರೂ ಈಗ ಇತಿಹಾಸದ ಪುಟಗಳಲ್ಲಿ ಸೇರಿ ಅಜರಾಮರರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ಚಳಿ ಹೆಚ್ಚಿದಂತೆ ಏರುತ್ತಿದೆ ಮೊಟ್ಟೆ ದರ