ತೆಂಗು ಮೌಲ್ಯವರ್ಧನೆಗೆ ತಜ್ಞರ ಚಿಂತನೆ ಪಾಲಿಸಿ

KannadaprabhaNewsNetwork |  
Published : Sep 03, 2025, 01:00 AM IST
      ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ  ಮಂಗಳವಾರ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ ಮೈಸೂರು ಹಾಗೂ ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಸಹಯೋಗದಲ್ಲಿ ವಿಶ್ವ ತೆಂಗು ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ’ತೆಂಗು ಬೆಳೆಯಲ್ಲಿ ಪ್ರಮುಖ ಕೀಟ, ರೋಗಬಾಧೆಯ ಸಮಗ್ರ ನಿರ್ವಹಣೆ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ  | Kannada Prabha

ಸಾರಾಂಶ

ಆರೋಗ್ಯವರ್ಧಕವಾಗಿರುವ ತೆಂಗು ಬೆಳೆಯ ಮೌಲ್ಯವರ್ಧನೆಗೆ ವಿಷಯ ತಜ್ಞರ ಚಿಂತನೆಗಳನ್ನು ರೈತರು ಅಳವಡಿಸಿಕೊಂಡು ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಆರೋಗ್ಯವರ್ಧಕವಾಗಿರುವ ತೆಂಗು ಬೆಳೆಯ ಮೌಲ್ಯವರ್ಧನೆಗೆ ವಿಷಯ ತಜ್ಞರ ಚಿಂತನೆಗಳನ್ನು ರೈತರು ಅಳವಡಿಸಿಕೊಂಡು ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಮಹಾವಿದ್ಯಾಲಯ ಮೈಸೂರು ಹಾಗೂ ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಸಹಯೋಗದಲ್ಲಿ ವಿಶ್ವ ತೆಂಗು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ’ತೆಂಗು ಬೆಳೆಯಲ್ಲಿ ಪ್ರಮುಖ ಕೀಟ, ರೋಗಬಾಧೆಯ ಸಮಗ್ರ ನಿರ್ವಹಣೆ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತೆಂಗು ಬೆಳೆ ರೈತರಿಗೆ ವರದಾನವಾಗಿದೆ. ಕೃಷಿ ಪ್ರಧಾನವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಜತೆಯಲ್ಲಿಯೇ ತೆಂಗು ಬೆಳೆಗೂ ಪ್ರಾಮುಖ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿ ೭ ಲಕ್ಷ ಹೆಕ್ಟೇರ್‌ನಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ತೆಂಗು ಬೆಳೆಯಲ್ಲಿ ದೇಶದಲ್ಲಿ ೨ನೇ ಸ್ಥಾನ ಪಡೆದಿದೆ. ತುಮಕೂರು, ಹಾಸನ, ಚಿತ್ರದುರ್ಗವು ಸೇರಿದಂತೆ ಚಾಮರಾಜನಗರ ತೆಂಗು ಬೆಳೆಯುವ ಪ್ರಮುಖ ಜಿಲ್ಲೆಗಳಾಗಿವೆ. ಜಿಲ್ಲೆಯಲ್ಲಿ ತೆಂಗು ಬೆಳೆಯ ಸಾಕಷ್ಟು ಉತ್ಪನ್ನಗಳು ಹೆಚ್ಚಾಗಿ ನೆರೆಯ ರಾಜ್ಯಗಳಿಗೆ ರಪ್ತಾಗುತ್ತಿರುವುದರಿಂದ ಆರ್ಥಿಕವಾಗಿ ಬರುವ ಲಾಭ ನೇರವಾಗಿ ನಮ್ಮ ರೈತರಿಗೆ ತಲುಪುತ್ತಿಲ್ಲ. ನಮ್ಮ ಉತ್ಪನ್ನಗಳ ಲಾಭ ನಮಗೆ ದೊರೆಯುವಂತಾಗಬೇಕು ಎಂದರು.

ತೆಂಗಿನ ಮರ ಕಲ್ಪವೃಕ್ಷವಾಗಿದೆ. ಯಾವುದೇ ಪೂಜೆ-ಪುನಸ್ಕಾರ, ಅಡುಗೆ-ಆಹಾರ ತಯಾರಿಕೆ ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೆಂಗು ಪ್ರಧಾನ ಸ್ಥಾನ ಪಡೆದಿದೆ ಎಂದರೆ ತಪ್ಪಾಗಲಾರದು. ತೆಂಗಿನ ಪ್ರತಿಯೊಂದು ಅಂಗವು ಬಹುಪಯೋಗಿಯಾಗಿದೆ. ಎಳನೀರು ನೈಸರ್ಗಿಕವಾಗಿ ಆರೋಗ್ಯ ವರ್ಧನೆ ಹೆಚ್ಚಿಸಲಿದೆ. ಇತ್ತೀಚೆಗೆ ಎಳನೀರಿನಿಂದ ತಯಾರಿಸಲಾಗುವ ಕೋಲ್ಡ್ ಪ್ರೆಸ್ಟ್ ಆಯಿಲ್‌ಗೆ ಸಾಕಷ್ಟು ಬೇಡಿಕೆಯಿದೆ. ಎ.ಪಿ.ಎಂ.ಸಿಯಲ್ಲಿ ಎಳನೀರು ಮಾರುಕಟ್ಟೆ ತೆರೆಯುವ ಚಿಂತನೆ ಇದೆ. ಅಡುಗೆಯಲ್ಲಿ ತೆಂಗಿನೆಣ್ಣೆ ಬಳಕೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ತೆಂಗು ಬೆಳೆಯುವ ರೈತರಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿ ರಿಯಾಯಿತಿ ದರದಲ್ಲಿ ಸಾಲ-ಸಹಾಯಧನ ಸೌಲಭ್ಯ ನೀಡುತ್ತಿದ್ದು, ಯೋಜನೆಗಳ ಅರಿವು, ಮಾಹಿತಿ ರೈತರಿಗೆ ತಲುಪಬೇಕಿದೆ. ಇದಕ್ಕಾಗಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ರೈತರ ಮಾಹಿತಿಗಾಗಿ ನಿಯೋಜಿಸಲಾಗಿರುವ ಕೃಷಿ ಸಖಿ ಹಾಗೂ ಪಶು ಸಖಿಯರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.

ಇತ್ತೀಚೆಗೆ ತೆಂಗು ಬೆಳೆಗೆ ಹೊಸಹೊಸ ರೋಗಭಾಧೆಗಳು ಕಾಡುತ್ತಿವೆ. ಕಪ್ಪುತಲೆ ಹುಳು ರೋಗದ ಕುರಿತು ಸಮೀಕ್ಷೆ ನಡೆಸಲು ಸರ್ಕಾರ ನಿರ್ದೇಶನ ನೀಡಿದೆ. ಒಟ್ಟಿನಲ್ಲಿ ತೆಂಗು ಬೆಳೆ ಅಭಿವೃದ್ಧಿಗಾಗಿ ತಜ್ಞರ ಮಾರ್ಗದರ್ಶನ ರೈತರಿಗೆ ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

ತಾಲೂಕು ತೆಂಗು ಬೆಳೆಗಾರರ ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ಎಂ. ಮಹೇಶ್ ಪ್ರಭು ಮಾತನಾಡಿ, ವಿಶ್ವ ತೆಂಗು ದಿನವನ್ನು ವಿಶ್ವಾದಾದ್ಯಂತ ಆಚರಿಸಲಾಗುತ್ತಿದ್ದು, ಚಾಮರಾಜನಗರವು ಸಹ ತೆಂಗು ಬೆಳೆಯುವ ಪ್ರಮುಖ ಜಿಲ್ಲೆಯಾಗಿದೆ. ಬಹುವಾರ್ಷಿಕ ಬೆಳೆಯಾಗಿರುವ ತೆಂಗು ರೈತರಿಗೆ ತಲಾ ತಲಾಂತರದವರೆಗೆ ಆದಾಯ ತರಲಿದೆ. ತೆಂಗಿನಿಂದ ೧೩೦ ಬಗೆಯ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ. ಸಹಕಾರಿ ಸಂಸ್ಥೆಗಳ ಮೂಲಕ ತೆಂಗು ಮಾರಾಟಕ್ಕೆ ಮೌಲ್ಯವರ್ಧನೆ ದೊರಕಿಸಿ ಸುಸ್ಥಿರ ಅಭಿವೃದ್ಧಿಗೆ ಯೋಜಿಸಲಾಗುತ್ತಿದೆ ಎಂದರು.

ವೇದಿಕೆ ಕಾರ್ಯಕ್ರಮದ ಬಳಿಕ ತೆಂಗು ಬೆಳೆ ಕುರಿತು ವಿಷಯ ತಜ್ಞರಿಂದ ಸಂವಾದ, ಗೋಷ್ಠಿಗಳು ನಡೆದವು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ರೈತ ಮುಖಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮಹೇಶ್ ಕುಮಾರ್ ಹಾಗೂ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣೆ ಘಟಕದ ನಿರ್ದೇಶಕರಾದ ಪುಟ್ಟರಸು, ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ರೋಗಶಾಸ್ತ್ರಜ್ಞರಾದ ಪಂಪನಗೌಡ ಉಪಸ್ಥಿತರಿದ್ದರು.

PREV

Recommended Stories

ಜಾಗತಿಕ ಮಟ್ಟದಲ್ಲಿ ಸಾಧನೆ ನಾರಿ ಶಕ್ತಿಗೆ ಸಾಕ್ಷಿ
ಮಕ್ಕಳ ಕಲಿಕೆಯನ್ನು ಸೃಜನಾತ್ಮಕವಾಗಿಸಲು ನಲಿ-ಕಲಿ