ಹಗರಿಬೊಮ್ಮನಹಳ್ಳಿ: ಫಾಸ್ಟ್‌ಫುಡ್ ಸಂಸ್ಕೃತಿಯನ್ನು ವೈಭವೀಕರಿಸುತ್ತಿರುವ ಪರಿಣಾಮವಾಗಿ ಯುವ ಜನಾಂಗವು ಭಾರತದ ಆಹಾರ ಪದ್ಧತಿಯಿಂದ ವಿಮುಖರಾಗುತ್ತಿದ್ದಾರೆ. ರೋಗಮುಕ್ತ ಸಮಾಜ ಕಲ್ಪನೆಯಲ್ಲಿಯೇ ಉಳಿಯಲಿದೆ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಸೋಮನಗೌಡ ವಿಷಾದಿಸಿದರು.
ಪರಿಪೂರ್ಣ ಯೋಗ ಸಾಧನೆ ಮತ್ತು ಸಂತುಲಿತ ಆಹಾರ ಪದ್ಧತಿಯನ್ನೇ ಔಷಧಿಯನ್ನಾಗಿ ರೂಪಿಸಿಕೊಂಡು ಆರೋಗ್ಯಪೂರ್ಣ ಜೀವನದ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕು. ಯೋಗ ಭಾರತದ ಕೊಡುಗೆಯಾಗಿದ್ದರೂ ಪಾಶ್ಚಾತ್ಯರು ಯೋಗದ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಯೋಗ ಸಾಧನೆಯ ಜೊತೆಗೆ ಯೋಗದಿಂದ ರೋಗಮುಕ್ತ ಸಮಾಜ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಆಸ್ಪತ್ರೆಯ ನಿರ್ದೇಶಕ ಡಾ.ರಾಜೇಶ್ ಪಾದೇಕಲ್ ಮಾತನಾಡಿ, ಪೋಷಕರು ಬಾಲ್ಯದಲ್ಲಿಯೇ ಭಾರತೀಯ ಆಹಾರ ಪದ್ಧತಿಯ ಅಗತ್ಯ ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ದೇಹವನ್ನು ಸದೃಢವಾಗಿಸುವ ಚಿಕಿತ್ಸಾ ಸೌಲಭ್ಯಗಳು ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ಹೇರಳವಾಗಿ ಸಿಗುತ್ತವೆ. ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ರಾಜ್ಯದ ಎಲ್ಲೆಡೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.ಭಾರತೀಯ ಆಹಾರ ಪದ್ಧತಿ ಮನೋದೈಹಿಕ ಆರೋಗ್ಯಕ್ಕೆ ಪೂರಕವಾಗುದೆ. ಮನಸ್ಸು ಮತ್ತು ದೇಹದ ಸಮತೋಲನ ಕಾಪಾಡಿಕೊಳ್ಳುವುದೇ ಉತ್ತಮ ಆರೋಗ್ಯದ ಗುಟ್ಟಾಗಿದೆ. ಪಾಶ್ಚಾತ್ತರ ಅಂಧಾನುಕರಣೆ ತೊರೆದು ನಮ್ಮತನವನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಹಗರಿಬೊಮ್ಮನಹಳ್ಳಿಯಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿ ಸೋಮನಗೌಡ ಉದ್ಘಾಟಿಸಿದರು.