ಉಡುಪಿ: ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಿದಾಗ ಮಾತ್ರ ಅಪಘಾತ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್ ಬಿ.ವೈ. ಹೇಳಿದರು.
ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ಬಹಳ ಮುಂದಿದೆ. ವಾಹನ ಚಲಾಯಿಸುವ ಎಲ್ಲರಿಗೂ ರಸ್ತೆ ಸುರಕ್ಷತಾ ನಿಯಮಗಳ ಮಾಹಿತಿ ತಿಳಿದಿರುತ್ತದೆ. ಆದರೆ ಅವುಗಳ ಪಾಲನೆ ಕೊರತೆ ನಮ್ಮಲ್ಲಿದೆ. ಇವುಗಳ ಪಾಲನೇ ಮಾಡದಿದ್ದಲ್ಲಿ ರಸ್ತೆ ಅಪಘಾತ, ಸಾವು- ನೋವುಗಳು ಸಂಭವಿಸುತ್ತವೆ. ಆದ್ದರಿಂದ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ಮಾತನಾಡಿ, ದೇಶದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಅದಕ್ಕೆ ಅನುರೂಪವಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕಾರ್ಯ ನಿಮಿತ್ತ ಮನೆಯಿಂದ ಹೊರಟವರು ಸುರಕ್ಷಿತವಾಗಿ ಮನೆಗೆ ಮರಳಿ ಬರುತ್ತಾರೆ ಎನ್ನುವ ಭರವಸೆ ಇಲ್ಲವಾಗಿದೆ. ಪ್ರಜ್ಞಾವಂತ ನಾಗರಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಅಪಘಾತಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದರು.ಎಂ.ಐ.ಟಿ ಉಪನ್ಯಾಸಕ ಬಾಲಕೃಷ್ಣ ಮುದ್ದೋಡಿ ಮಾತನಾಡಿ, ಜೀವನದ ಹೋರಾಟದಲ್ಲಿ ಇತರರ ಬಗ್ಗೆ ಯೋಚಿಸಲು ನಮಗೆ ಸಮಯಾವಕಾಶ ಇಲ್ಲ. ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ನಮಗೆ ತಿಳಿದಿದ್ದರೂ ನಾವುಗಳೇ ಅದನ್ನು ಪಾಲಿಸದೆ ಉಲ್ಲಂಘಿಸುತ್ತೇವೆ. ಸಂಚಾರಿ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾನೂನು ಮತ್ತು ಇಲಾಖೆಗಳು ಅವುಗಳ ಕಾರ್ಯ ಮಾಡುತ್ತಿವೆ. ಆದರೆ ಸಾರ್ವಜನಿಕರು ಜವಾಬ್ದಾರಿಯುತವಾಗಿ ನಡೆಯಬೇಕು. ನಮ್ಮ ಮನೆಯ ಆಸು ಪಾಸು, ಶಾಲೆ-ಕಾಲೇಜು ಸಂಘ ಸಂಸ್ಥೆಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಹಂಚಿಕೊಂಡು ಜಾಗೃತಿ ಮೂಡಿಸಬೇಕು. ಬದಲಾವಣೆ ಮೊದಲು ನಮ್ಮಿಂದಲೇ ಆದಾಗ ಸಮಾಜದಲ್ಲಿಯೂ ಬದಲಾವಣೆ ಕಾಣುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಕ್ಷ್ಮೀನಾರಾಯಣ ನಾಯಕ್ ಮಾತನಾಡಿ, ದೇಶದಲ್ಲಿ ಪ್ರತಿ ಎರಡು ನಿಮಿಷಕ್ಕೆ ಒಂದು ಅಪಘಾತ ಸಂಭವಿಸುತ್ತಿದೆ. ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಪಘಾತ ತಡೆಯಲು ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಜನರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಒಂದು ತಿಂಗಳಿನವರೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನರು ವಾಹನಗಳನ್ನು ಚಲಾಯಿಸುವಾಗ ಜಾಗರೂಕರಾಗಿರಬೇಕು ಮತ್ತು ಎಲ್ಲ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದರು.ವಾರ್ತಾಧಿಕಾರಿ ಮಂಜುನಾಥ್ ಬಿ ಉಪಸ್ಥಿತರಿದ್ದರು. ಕಚೇರಿ ಅಧೀಕ್ಷಕ ರಾಮಚಂದ್ರಪ್ಪ ಹೆಚ್.ಸಿ ಸ್ವಾಗತಿಸಿ, ಮೋಟಾರು ವಾಹನ ನಿರೀಕ್ಷಕ ಶ್ರೇಯಸ್ ಕುಮಾರ್ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕ ಗಣೇಶ್ ರಾವ್ ವಂದಿಸಿದರು.